'ಗ್ರಾಮೀಣ ಭಾಗದಲ್ಲಿ ಇಂದಿಗೂ ಭಾರತೀಯ ಸಂಸ್ಕೃತಿ ಜೀವಂತ'
ಕ.ಪ್ರ.ವಾರ್ತೆ , ಜಾವಗಲ್ , ಫೆ. 4
ಗ್ರಾಮೀಣ ಭಾಗದಲ್ಲಿ ಭಾರತೀಯ ಸಂಸ್ಕೃತಿಯನ್ನು ಇಂದಿಗೂ ಕಾಣಬಹುದಾಗಿದೆ ಎಂದು ಬೆಂಗಳೂರಿನ ವಿಜಯ ಸಾರಥಿ ತಿಳಿಸಿದರು.
ಇತ್ತೀಚೆಗೆ ನಡೆದ ಜಾವಗಲ್ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ ಮಹಾಕುಂಭಾಭಿಷೇಕ ಸಮಾರಂಭದಲ್ಲಿ ಜಾವಗಲ್ ಸಂಸ್ಕೃತ ವಿದ್ವಾನ್ ಎಸ್.ವಿ. ಶಾಮಭಟ್ಟರು ಕನ್ನಡಕ್ಕೆ ಅನುವಾದಿಸಿರುವ ವ್ಯಾಸವಿರಚಿತ ಶ್ರೀ ಲಕ್ಷ್ಮೀನರಸಿಂಹ ಪುರಾಣದ ಶ್ರೀ ದಶಾವತಾರ ಚರಿತೆ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿ, ಪ್ರತಿಯೊಬ್ಬರಿಗೂ ಅವಕಾಶಗಳು ಒದಗಿ ಬರುತ್ತವೆ ಸಿಗುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು.
ಪ್ರತಿಯೊಬ್ಬರೂ ಓದಬೇಕು: ಪ್ರಸ್ತುತ ಸಮಾಜದಲ್ಲಿರುವ ಯುವಜನತೆ ಪುರಾತನ ದೇಗುಲಗಳ ಸಂರಕ್ಷಣೆಗೆ ಗಮನ ಹರಿಸಿ ಮುಂದಿನಪಿಳಿಗೆಗೆ ಉಳಿಸಬೇಕೆಂದರು ಬೆಂಗಳೂರಿನ ಕೃಷ್ಣಮೂರ್ತಿ ಮಾತನಾಡಿ, ನರಸಿಂಹಾವತರ ಪುಸ್ತಕ ಸರಳವಾಗಿದ್ದು, ಪ್ರತಿಯೊಬ್ಬರೂ ಓದಬೇಕೆಂದರು.
ಸಮಾಜಕ್ಕಾಗಿ ದುಡಿಯಬೇಕು: ಅರಸೀಕೆರೆ ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಕೆ. ರಮೇಶ್ ಮಾತನಾಡಿ, ವಿಪ್ರರಲ್ಲಿ ವೈವಿಧ್ಯತೆಗಳು ಕಡಿಮೆಯಾಗುತ್ತಿದೆ. ಅಂಜಿಕೆ ಮತ್ತು ಹೆದರಿಕೆ ಸ್ವಭಾವ ಬಿಟ್ಟು ಧೈರ್ಯವಾಗಿ ಮುಂದೆ ನಡೆಯಬೇಕೆಂದರು. ಸಮಾಜದ ಏಳಿಗೆಗೆ ಫಲಾಪೇಕ್ಷೆ ಇಲ್ಲದೆ ದುಡಿಯುವ ಮನೋಭಾವನೆ ಬೆಳೆಸಿಕೊಳ್ಳಬೇಕೆಂದರು. ಪುಸ್ತಕದ ಲೇಖಕ ಎಸ್.ವಿ. ಶಾಮಭಟ್ಟ ಮಾತನಾಡಿ, ಹಿಂದೆ ರಕ್ಷಸರು ಸಮಾಜ ಕಂಟಕರಾಗಿದ್ದರು. ಹಿಂದು ಭಯೋತ್ಪಾದಕರು, ಭ್ರಷ್ಟ ರಾಜಕಾರಣಿಗಳು ಸಮಾಜ ಕಂಠಕರಾಗಿದ್ದಾರೆಂದು ವಿಷಾದಿಸಿದರು.
ಭಕ್ತಪ್ರಹ್ಲಾದನಂಥವರು ಬೇಕು: ಹಿರಣ್ಯ ಕಶ್ಯಪುವಿನಂತಹ ರಾಜಕಾರಣಿಗಳಿಂದಾಗಿ ದೇಶದಲ್ಲಿ ಕ್ಷಾಮ ಹೆಚ್ಚಾಗುತ್ತಿದ್ದು, ಇದನ್ನು ತಡೆಗಟ್ಟಲು ಭಕ್ತ ಪ್ರಹ್ಲಾದನಂಥವರು ಸಮಾಜದಲ್ಲಿ ಹುಟ್ಟಿಬಂದು, ಹಸಿರು, ಶಾಂತಿ, ನೆಲೆಸುವಂತೆ ಮಾಡಬೇಕಾದ ಅನಿವಾರ್ಯತೆ ಇದೆ ಎಂದರು. ಜಾವಗಲ್ ಸಾಳಸಾಪುರ ಬೆಳವಾಡಿ ಮತ್ತಿತರ ಭಾಗಗಳಲ್ಲಿನ ಕೆರೆಕಟ್ಟೆಗಳು ಬತ್ತಿಹೋಗುದೆ ಸರ್ವಜನಾಂಗದವರು ಗ್ರಾಮದ ಒಳಿತಿಗಾಗಿ ಭಕ್ತಿ, ಶ್ರದ್ಧೆಯಿಂದ ನರಸಿಂಹ ಹೋಮ ಮಾಡಬೇಕೆಂದರು.
ಜಾವಗಲ್ ಬ್ರಾಹ್ಮಣ ಸಂಘದ ಅಧ್ಯಕ್ಷ ಜೆ.ಎನ್. ರಮೇಶ್ ಜೋಯಿಸ್ ಅಧ್ಯಕ್ಷತೆ ವಹಿಸಿದ್ದರು.
ದೇವಾಲಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ಶ್ರೀ ಲಕ್ಷ್ಮೀನರಸಿಂಹ ಹೋಮವನ್ನು 28 ನಡೆಸಲಾಯಿತು. ಹೋಮದ ನಂತರ ಪೂರ್ಣಾಹುತಿ ನೆರವೇರಿಸಲಾಯಿತು. ಬೆಳವಾಡಿ ಸೀತಾರಾಂ ಜೋಯಿಸ್, ಅರಸೀಕೆರೆ ನಾಗಭೂಷಣ ಜೋಯಿಸ್, ವಿದ್ಯಾಶಂಕರ್ ಸೋಮಸುಂದರ ಭಟ್, ಶಿವಗುರು ಲಕ್ಷ್ಮೀನರಸಿಂಹಶಾಸ್ತ್ರಿ ಅರಸೀಕೆರೆ ಮಾರುತಿ ಸಚ್ಚಿದಾನಂದ ಸೇವಾಶ್ರಮದ ಸತೀಶ್ ಶರ್ಮಾಜಿ, ದೇಗುಲದ ಸಂಚಾಲಕರ ಜೆ.ಆರ್. ವಸಂತ ಕುಮಾರ್, ದೊಡ್ಡ ತಿರುಪತಿ ದೇಗುಲದ ಅರ್ಚಕರು ಹೆಚ್.ಎಸ್. ಕೇಶವ ಜೆ.ಸಿ. ನಾರಾಯಣಸ್ವಾಮಿ ಇದ್ದರು.