ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪ್ರತ್ಯೇಕ ಅಪಘಾತ: ಮೂರು ಜನರ ದುರ್ಮರಣ

Vishwanath S
Updated On : 5 Feb 2014, 12:17 pm

ಹಾಸನ: ಜಿಲ್ಲೆಯ ಪ್ರತ್ಯೇಕ ಪ್ರಕರಣಗಳಲ್ಲಿ ಅಪಘಾತದಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ.
ಅರಕಲಗೂಡು ತಾಲ್ಲೂಕಿನ ಕೊಣನೂರು ಹೋಬಳಿ, ಕೆಸವತ್ತೂರು ಗ್ರಾಮ ವಾಸಿ ಬಸಪ್ಪಾಜಿ ಎಂಬವರ ಪತ್ರಿ ಭೂಮಿಕಾ (14) ಕೊಣನೂರು ಹೋಬಳಿ, ದೊಡ್ಡಬೆಮ್ಮತ್ತಿ ಸರ್ಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಎಂದಿನಂತೆ ಶಾಲೆ ಮುಗಿಸಿಕೊಂಡು ವಾಪಸ್ ತಮ್ಮ ಗ್ರಾಮಕ್ಕೆ ತೆರಳಲು ಕೊಣನೂರು-ಮಲ್ಲಿಪಟ್ಟಣ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಟ್ರ್ಯಾಕ್ಟರ್ ಚಾಲಕನ ನಿರ್ಲಕ್ಷ್ಯತೆಯಿಂದ ಭೂಮಿಕಾಳಿಗೆ ಡಿಕ್ಕಿ ಮಾಡಿದ ಪರಿಣಾಮ ತೀವ್ರ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬಾಲಕಿಯ ದೊಡ್ಡಪ್ಪ ಕಾಳಪ್ಪ ಅವರು ಕೊಣನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಗಾರಿ ಕಾರ್ಮಿಕ ಸಾವು: ಮತ್ತೊಂದು ಪ್ರಕರಣದಲ್ಲಿ ಚನ್ನರಾಯಪಟ್ಟಣ ತಾಲ್ಲೂಕಿನ ದಂಡಿಗನಹಳ್ಳಿ ಹೋಬಳಿ, ಉದಯಪುರ ಗ್ರಾಮದ ಮೂರ್ತಿ (40) ಎಂಬುವರು ಗಾರೆಕೆಲಸಕ್ಕೆಂದು ತೆರಳಲು ಗ್ರಾಮದಿಂದ ಹೊರಟು ಯಲಿಯೂರು ಕ್ರಾಸ್ ಹತ್ತಿರ ರಸ್ತೆ ದಾಟುತ್ತಿದ್ದಾಗ ಹಾಸನ ಕಡೆಯಿಂದ ಬಂದ ಮಾರುತಿ ಸುಜುಕಿ ರಿಡ್ಜ್ ಕಾರು ಡಿಕ್ಕಿ ಹೊಡೆದಿದೆ.
ಕಾರಿನ ಚಾಲಕನ ನಿರ್ಲಕ್ಷ್ಯತೆಯಿಂದ ಡಿಕ್ಕಿ ಹೊಡೆದಿದ್ದು, ಗ್ರಾಮದ ಮೂರ್ತಿ ತೀವ್ರ ಗಾಯಗಳಾಗಿ ಮೂರ್ತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಪ್ರತ್ಯಕ್ಷದರ್ಶಿ ಪ್ರಕಾಶ್ ಅವರು ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಆಲೂರು ತಾಲ್ಲೂಕಿನ ಕಸಬಾ ಹೋಬಳಿ, ರಾಜನಹಳ್ಳಿ ಗ್ರಾಮದ ರಕ್ಷಿತ್ (20) ಅವರ ಹೋಂಡಾ ಆಕ್ಟಿವಾ ಬೈಕ್‌ನಲ್ಲಿ ಹಾಸನದಿಂದ ತಮ್ಮ ಗ್ರಾಮಕ್ಕೆ ಹೋಗಲು ಕಂದಲಿ ಸಮೀಪ, ಡೆಕ್ಕನ್ ಕಾಫಿ ಕ್ಯೂರಿಂಗ್ ಹತ್ತಿರ ಬೈಲಹಳ್ಳಿ ರಸ್ತೆಯಲ್ಲಿ ಹೋಗುತ್ತಿದ್ದಾಗ ವಾಹನಮೊಂದು ಚಾಲಕನ ನಿರ್ಲಕ್ಷ್ಯತೆಯಿಂದ ಡಿಕ್ಕಿ ಮಾಡಿದ ಪರಿಣಾಮ ತೀವ್ರ ಗಾಯಗಳಾಗಿ ರಕ್ಷಿತ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೃತರ ಸಂಬಂಧಿ ಲಕ್ಷ್ಮಿಕಾಂತ್ ಅವರು ಹಾಸನ ಸಂಚಾರಿ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಗಂಧ  ಸಾಗಣೆ: 3 ಬಂಧನ
ಹಾಸನ: ಅಕ್ರಮವಾಗಿ ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ಮೂವರನ್ನು ಬಂಧಿಸಿದ್ದು, 12 ಸಾವಿರ ರು. ಬೆಲೆಯ ಶ್ರೀಗಂಧದ ತುಂಡುಗಳನ್ನು ಪಡಿಸಿಕೊಂಡಿರುವ ಘಟನೆ ನಡೆದಿದ್ದಾರೆ.
ಆಲೂರು ಪೊಲೀಸ್ ಠಾಣೆ ರವರು ಬೈರಾಪುರ, ಹೊನ್ನವಳ್ಳಿ, ಹೆದ್ದುರ್ಗ ಮತ್ತು ಕೆಂಚಮ್ಮ  ಹೊಸಕೊಟೆ ಗ್ರಾಮಗಳ ಕಡೆ ಗಸ್ತಿನಲ್ಲಿದ್ದಾಗ ಕಾಡ್ಲೂರು ಕೂಡಿಗೆ ಹತ್ತಿರ ಬಂದಾಗ ನಾಲ್ವರು ಚೀಲವನ್ನು ಹಿಡಿದುಕೊಂಡು ಹೋಗುತ್ತಿದಾಗ ಪೊಲೀಸರನ್ನು ಕಂಡು ಹೋಗುತ್ತಿದ್ದವರನ್ನು  ಹಿಂಭಾಲಿಸಿ ಯತೀಶ್ (22), ವಿನೋದ (25) ಮತ್ತು ವಿವೇಕಾನಂದ (23)  ಎಂಬವರನ್ನು ಬಂಧಿಸಿದ್ದು, ಶ್ರೀಗಂಧದ ತುಂಡಗಳನ್ನು ಸಾಗಿಸುತ್ತಿದ್ದ ಸುಮಾರು 12 ಸಾವಿರ ರು. ಬೆಲೆಯ 4 ಕೆಜಿ ತೂಕದ 5 ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಆಲೂರು ಪೊಲೀಸ್ ಪ್ರಕರಣ ದಾಖಲಿಸಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಅಕ್ರಮ ಮದ್ಯ ಮಾರಾಟ: ಮೂವರ ಬಂಧನ
ಹಾಸನ: ಜಿಲ್ಲೆಯ ಪ್ರತ್ಯೇಕ ಪ್ರಕರಣದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿರುವ ಘಟನೆ ಇತ್ತೀಚೆಗೆ ನಡೆದಿದೆ.
ಅರಕಲಗೂಡು ತಾಲ್ಲೂಕಿನ ಕೊಣನೂರು ಹೋಬಳಿ, ಸರಗೂರು ಗೇಟ್ ಹತ್ತಿರ ಕೃಷ್ಣೇಗೌಡ (56) ಹಣ ಸಂಪಾದನೆ ಮಾಡುವ ಉದ್ದೇಶದಿಂದ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾಗ ಆತನನ್ನು ಬಂಧಿಸಿದ್ದು, ಆತನ ವಶದಲ್ಲಿದ್ದ 8947 ರು. ಬೆಲೆಯ ನಾನಾ ಮಾದರಿಯ ಮದ್ಯದ ಪ್ಯಾಕೇಟ್‌ಗಳನ್ನು ವಶಪಡಿಸಿಕೊಂಡು, ಕೊಣನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಹಾಸನ ತಾಲೂಕಿನ ಗೊರೂರು ಬಸ್ ನಿಲ್ದಾಣದ ಹತ್ತಿರ ದುಂಡನಾಯಕನಹಳ್ಳಿಯ ಎಳೆನೀರು ಮಾರುವ ಮಹಿಳೆ ಗೌರಮ್ಮ (57) ತಮ್ಮ ಊರಿನಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದಾಗ ಗೊರೂರು ಠಾಣೆಯ ಪೊಲೀಸರು ಆಕೆಯನ್ನು ಹಿಡಿದಿ ಪರಿಶೀಲಿಸಿ ವಶಕ್ಕೆ ತೆಗೆದುಕೊಂಡಿದ್ದು, ಆಕೆಯಿಂದ 1450 ರು. ಬೆಲೆಯ 180 ಎಂಎಲ್‌ನ ಒರಿಜಿನಲ್ ಚಾಯ್ಸ್ ಡೀಲಕ್ಸ್ ವಿಸ್ಕಿ 30 ಟೆಟ್ರಾ ಪ್ಯಾಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕ್ರಮ ಕೈಗೊಂಡಿದ್ದಾರೆ.
ಇನ್ನೊಂದು ಪ್ರಕಣದಲ್ಲಿ, ಹಾಸನ ತಾಲ್ಲೂಕಿನ ದುದ್ದ ಹೋಬಳಿ, ಹೆರಗು ಗ್ರಾಮ ವಾಸಿ ರವಿ(38) ಎಂಬುವವರು ಮನೆಯ ಹಿಂಭಾಗದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾಗ ದಾಳಿ ಮಾಡಿ ಆತನನ್ನು ಬಂಧಿಸಿದ್ದು, ಮಾರಾಟಕ್ಕಿಟ್ಟಿದ್ದ ಸುಮಾರು 1210 ರು. ಬೆಲೆಯ 90 ಎಂ.ಎಲ್‌ನ 55 ಸಿಲ್ವರ್ ಕ್ಯಾಪ್ ಬ್ರಾಂಡಿ ತುಂಬಿರುವ ಪ್ಯಾಕೇಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ದುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂಜು: 6 ಜನರ ಬಂಧನ
ಹಾಸನ: ಅಕ್ರಮವಾಗಿ ಜೂಜಾಡುತ್ತಿದ್ದ ಆರು ಜನರನ್ನು ಬಂಧಿಸಿದ್ದು, 2410 ರು.ನಗದನ್ನು ವಶಪಡಿಸಿಕೊಂಡಿರುವ ಘಟನೆ ನಡೆದಿದೆ.
ಹಳೇಬೀಡು ಟೌನ್ ಸಂತೇ ಮೈದಾನದ ವಿದ್ಯುತ್ ಕಂಬದ ಕೆಳಗೆ ಅಂದರ್ ಬಾಹರ್ ಜೂಜಾಡುತ್ತಿದ್ದಾಗ ಹಳೆಬೀಡು ಠಾಣೆಯ ಪಿ ಎಸ್ ಐ ಮಂಜು ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದಾಳಿ ನಡೆಸಿ ಜೂಜಾಡುತ್ತಿದ್ದ ಅಭಿಷೇಕ (26), ಸುನಿಲ್ (22), ರಫೀಕ್ (42), ರವಿ (45), ಸುರೇಶ ಮತ್ತು ರಘು (25) ಎಂಬವರನ್ನು ಬಂಧಿಸಿದ್ದು, ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 2410 ರು. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಹಳೇಬೀಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೃಹಿಣಿ ನಾಪತ್ತೆ
ಹಾಸನ: ಅರಸೀಕೆರೆ ತಾಲ್ಲೂಕಿನ ಕೆಲ್ಲಂಗೇರಿ ಬೋವಿ ಕಾಲೋನಿ ವಾಸಿ ಸೋಮಶೇಖರ ರವರ ಪತ್ನಿ ನೀಲಮ್ಮ (35) ಮನೆಯಿಂದ ಅರಸೀಕೆರೆಗೆ ಹೋಗಿ ಬರುವುದಾಗಿ ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದಾರೆ.
ಚಹರೆ: ಕನ್ನಡ ಭಾಷೆ ಮಾತನಾಡುತ್ತಾರೆ. ಪತಿ ಸೋಮಶೇಖರ ರವರು ಅರಸೀಕೆರೆ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಯುವತಿ ನಾಪತ್ತೆ
ಹಾಸನ: ಅರಕಲಗೂಡು ತಾಲ್ಲೂಕಿನ ರಾಮನಾಥಪುರ ಹೋಬಳಿ, ಹರಳಹಳ್ಳಿ ಗ್ರಾಮದ ಬಸವರಾಜಪ್ಪ ಅವರ ಪುತ್ರಿ ಸಹನ (21) ಜಮೀನಿನ ಹತ್ತಿರ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದಾಳೆ.
ಚಹರೆ: 5 ಅಡಿ ಎತ್ತರ, ಕೋಲುಮುಖ, ಎಣ್ಣೆಗೆಂಪು ಸಾಧಾರಣ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಕೆಂಪುಬಣ್ಣದ ನೈಟಿ ಧರಿಸಿರುತ್ತಾಳೆ. ಅಣ್ಣ ಮಗ ಕುಮಾರ್ ಕೊಣನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement