ಮಾಸಾಂತ್ಯಕ್ಕೆ ಎತ್ತಿನಹೊಳೆಗೆ ಸಿಎಂ ಶಂಕು
ಕ.ಪ್ರ.ವಾರ್ತೆ , ಹಾಸನ , ಫೆ. 4
ಎತ್ತಿನಹೊಳೆ ಯೋಜನೆಗೆ ಆಡಳಿತ ಮಂಜೂರಾತಿ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಂಗಳಾಂತ್ಯದಲ್ಲಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ. ಶಿವರಾಂ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಜನೆಯ ಮೊದಲನೇ ಹಂತದ ಕಾಮಗಾರಿಗೆ ಚಾಲನೆ ಸಿಕ್ಕ ನಂತರ ಜಿಲ್ಲೆಯ ಯಾವ ಭಾಗಗಳಿಗೆ ನೀರನ್ನು ಹರಿಸಲು ಸಾಧ್ಯವಾಗುತ್ತಿದೆ ಎಂಬುದನ್ನು ಗಮನಿಸಬೇಕಾಗಿದೆ. ಜಿಲ್ಲೆಯಲ್ಲಿ ರೈತ ಸಮುದಾಯ ನೀರಾವರಿಗೆ ಪರಿತಪಿಸುವಂತಾಗಿದೆ. ರಾಜ್ಯದ ಬರಪೀಡಿತ ಜಿಲ್ಲೆಗಳಲ್ಲಿ ನೀರಿನ ಹಾಹಾಕಾರ ಉಂಟಾಗಿರುವುದು ಕಂಡುಬರುತ್ತಿದೆ ಎಂದರು.
ಆರೋಪ: ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಈಗಾಗಲೇ ಪ್ರತಿಭಟನೆ ನಡೆಸುತ್ತಿರುವುದರಿಂದ ಸಿದ್ದರಾಮಯ್ಯನವರು ಎತ್ತಿನಹೊಳೆ ಯೋಜನೆ ಸೇರಿದಂತೆ ನೀರಾವರಿ ಬಗ್ಗೆ ಇಚ್ಛಾಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಹೇಮಾವತಿ ಅಚ್ಚುಕಟ್ಟು ಪ್ರದೇಶದಲ್ಲಿ 6.5 ಲಕ್ಷ ಎಕರೆ ನೀರಾವರಿಯಾಗಿದ್ದು, ಈ ಪೈಕಿ 1.7 ಲಕ್ಷ ಎಕರೆ ಪ್ರದೇಶಕ್ಕೆ ಮಾತ್ರ ನೀರನ್ನು ಒದಗಿಸುವಂತಹ ಕೆಲಸ ಆಗಿದೆ ಅಷ್ಟೇ. ನೀರಾವರಿ ಯೋಜನೆಗಳನ್ನು ತಂದರು ಸಹ ಬಳಸುವಲ್ಲಿ ವಿಫಲವಾಗಿದೆ. ಜಿಲ್ಲೆಯ ಪ್ರಬುದ್ಧ ರಾಜಕಾರಣಿಗಳ ಇಚ್ಛಾಶಕ್ತಿಯಿಂದ ಜನರಿಗೆ ತೊಂದರೆ ಉಂಟಾಗಿದೆ ಎಂದು ಆರೋಪಿಸಿದರು.
ಕೆರೆಗಳಿಗೆ ನೀರು: ಎತ್ತಿನಹೊಳೆ ಯೋಜನೆಗೆ ತಿಂಗಳಾಂತ್ಯದಲ್ಲಿ ಚಾಲನೆ ಸಿಗುವುದರಿಂದ ಯೋಜನೆಯಿಂದ ನೀರು ಹರಿಯುವ ಸಾಮರ್ಥ್ಯದಲ್ಲಿ ಜಿಲ್ಲೆಯ ಎಲ್ಲೆಲ್ಲಿಗೆ ಹರಿಸಲು ಸಾಧ್ಯ ಹಾಗೂ ಯೋಜನೆಯಲ್ಲಿ ಲೋಪದೋಷ ಆಗದೆ ಸಬ್ದಳಕೆ ಆಗುವ ನೀರಿನ ಬಗ್ಗೆ ಮಾಹಿತಿಯನ್ನು ಕಲೆ ಹಾಕಬೇಕಾಗಿದೆ ಎಂದ ಅವರು, ಯೋಜನೆಯಿಂದ ಜಿಲ್ಲೆಗೆ 2 ಟಿಎಂಸಿ ನೀರಿನಿಂದ ಪ್ರಮುಖ 42 ಕೆರೆಗಳಿಗೆ ನೀರನ್ನು ತುಂಬಿಸಲು ಸಾಧ್ಯವಾಗುತ್ತಿದೆ.
ಅರಸೀಕೆರೆ, ಜಾವಗಲ್, ಹಳೇಬೀಡು, ಹಿರೀಸಾವೆ ಸೇರಿದಂತೆ ಇತರೆ ಪ್ರಮುಖ ಕೆರೆಗಳಿಗೆ ನೀರನ್ನು ತುಂಬಿಸುವಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಯೋಜನೆಯಿಂದ ಜಿಲ್ಲೆಗೆ ಅವಶ್ಯಕವಿರುವಷ್ಟು ನೀರನ್ನು ಒದಗಿಸುವಂತೆ ಸಿದ್ದರಾಮಯ್ಯನವರನ್ನು ಸಹ ಒತ್ತಾಯಿಸುವುದಾಗಿ ಹೇಳಿದ ಅವರು, ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕೆ ಯಾವುದೇ ರೀತಿಯ ಅಡಚಣೆಗಳು ಇಲ್ಲ ಎಂದು ಸ್ಪಷ್ಟಪಡಿಸಿದರು.
ನೀರಿನ ಪ್ರಮಾಣ ಕಡಿತ: ಚನ್ನರಾಯಪಟ್ಟಣ ತಾಲೂಕಿನ ದಂಡಿಗನಹಳ್ಳಿ ಹೋಬಳಿಯ ಕಾಚೇನಹಳ್ಳಿ ಹತ್ತಿರ ಹೇಮಾವತಿ ನದಿಯಿಂದ ಪುನರುತ್ಪತ್ತಿಯಾಗುವ ನೀರಿನಲ್ಲಿ 0.73 ಟಿಎಂಸಿ ನೀರನ್ನು 2 ಹಂತಗಳಲ್ಲಿ ಎತ್ತಿ ಸುಮಾರು 5100 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಕಾಚೇನಹಳ್ಳಿ ಏತ ನೀರಾವರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು. ಆದರೆ 2007ರಲ್ಲಿ ಅಧಿಕಾರಕ್ಕೆ ಬಂದ ಜೆಡಿಎಸ್ ಸರ್ಕಾರ ಈ ಯೋಜನೆಯನ್ನು ಮತ್ತೆ ಮರು ಪರಿಶೀಲಿಸಿತು.
ರೈತರಿಗೆ ಅನ್ಯಾಯ: ಮರು ಪರಿಶೀಲಿಸಿದ ಜೆಡಿಎಸ್ ಸರ್ಕಾರ ಹೇಮಾವತಿ ನದಿಯಿಂದ ಪುನರುತ್ಪತ್ತಿಯಾಗುವ ನೀರನ್ನು ಬಳಸುತ್ತಿರುವುದರಿಂದ 0.463 ಟಿಎಂಸಿ ನೀರನ್ನು ಉಪಯೋಗಿಸಿಕೊಂಡು 2ನೇ ಹಂತಗಳಲ್ಲಿ ಸುಮಾರು 3239 ಹೆಕ್ಟೇರ್ ಪ್ರದೇಶಕ್ಕೆ ಮುಂಗಾರು ಹಂಗಾಮಿನಲ್ಲಿ ಮಾತ್ರ ನೀರನ್ನು ಒದಗಿಸುವಂತೆ ತೀರ್ಮಾನಿಸುವ ಮೂಲಕ ಗಂಡಸಿ ಹೋಬಳಿಯ ರೈತರಿಗೆ ಅನ್ಯಾಯ ಎಸಗಿದ್ದಾರೆ ಎಂದು ಆರೋಪಿಸಿದರು.
ಪರದಾಡುವ ಪರಿಸ್ಥಿತಿ: ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷವನ್ನು ಟೀಕಿಸಿದ ಅವರು, ಜೆಡಿಎಸ್ನಿಂದ ಜಿಲ್ಲೆಯ ರೈತ ಸಮುದಾಯಕ್ಕೆ ನೀರಾವರಿಯಲ್ಲಿ ಬಹಳಷ್ಟು ಅನ್ಯಾಯವಾಗಿದೆ. ಹೇಮಾವತಿ ಜಲಾಶಯದಿಂದ ಜಿಲ್ಲೆಯಲ್ಲಿ ಕೇವಲ 1.7 ಲಕ್ಷ ಎಕರೆ ಪ್ರದೇಶಗಳಿಗೆ ಮಾತ್ರ ನೀರನ್ನು ಒದಗಿಸಲಾಗುತ್ತಿದೆ. ಅದೇ ಬೇರೆ ಜಿಲ್ಲೆಗಳಲ್ಲಿ ಕಡಿಮೆ ನೀರಿನ ಪ್ರಮಾಣ ಇದ್ದರೂ ಸಹ ಅಲ್ಲಿ ಹೆಚ್ಚಿನ ನೀರನ್ನು ರೈತರಿಗೆ ಒದಗಿಸಲಾಗಿದೆ. ಜಿಲ್ಲೆಯಲ್ಲಿ ಮಾತ್ರ ರೈತ ಸಮುದಾಯ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಸರ್ಕಾರ ಅಧಿಕಾರಗಳ ಪರ: ನಗರಸಭೆ ಆಯುಕ್ತರಿಗೆ ಜನಪ್ರತಿನಿಧಿಯಿಂದ ಬೆದರಿಕೆ ಬಂದರೂ ಸಹ ಅವರು ಕಾನೂನು ರೀತಿಯಲ್ಲಿ ಮಾತನಾಡಿ, ಅದನ್ನು ಉಲ್ಲಂಘಿಸುವುದಿಲ್ಲ ಎಂದು ಹೇಳುವ ಮೂಲಕ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ. ಆದ್ದರಿಂದ ಜಿಲ್ಲೆಯಲ್ಲಿ ಕಾನೂನು ರಕ್ಷಣೆಯು ಸಂವಿಧಾನ ಬದ್ಧವಾಗಿದೆ ಹಾಗೂ ಅಲ್ಲದೇ ಅಧಿಕಾರಿಗಳ ಪರವಾಗಿ ಸರ್ಕಾರ ನಿಂತಿದೆ.
ಅಷ್ಟೇ ಅಲ್ಲದೆ ಅರಸೀಕೆರೆ ತಹಸೀಲ್ದಾರ್ ಸಾಕಷ್ಟು ದಾಳಿ ನಡೆಸಿ ಅಕ್ರಮ ಮರಳು ಹಾಗೂ ಜಲ್ಲಿ ಸಾಗಿಸುತ್ತಿದ್ದ ಲಾರಿಗಳನ್ನು ಹಿಡಿದ್ದಾರೆ. ಹಾಗೆಯೇ ಚನ್ನರಾಯಪಟ್ಟಣದ ತಹಸೀಲ್ದಾರ್ ಸಹ ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಪ್ರಾಮಾಣಿಕವಾಗಿ ಮಾಡುವಂತ ಅಧಿಕಾರಿಗಳ ಪರ ಸರ್ಕಾರ ಇದೆ ಎಂದು ಹೇಳಿದರು.
ಕೋರ್ಟ್ ಮೊರೆ
ಸೂರನಹಳ್ಳಿ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಅನುದಾನ ನೀಡಿದ್ದರು ಸಹ ಅಲ್ಲಿ ಚತುಷ್ಪಥ ರಸ್ತೆ ಬೇಕಾ ಅಥವಾ ಬೇಡವಾ ಎಂಬುದರ ಬಗ್ಗೆ ಮತ್ತೆ ನ್ಯಾಯಾಲಯ ಮೊರೆ ಹೋಗುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನಾರಾಯಣಗೌಡ ಹಾಗೂ ಇತರರು ಇದ್ದರು.