ಶಿಥಿಲಾವಸ್ಥೆಯಲ್ಲಿ ಸೋಮೇಶ್ವರ ದೇಗುಲ
ರಾಮನಾಥಪುರ: ಇಲ್ಲಿಗೆ ಸಮೀಪದ ಕೇರಳಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಬೂದನೂರು ಗ್ರಾಮದಲ್ಲಿರುವ 150 ವರ್ಷದ ಇತಿಹಾಸ ಹೊಂದಿರುವ ಶ್ರೀ ಸೋಮೇಶ್ವರ ಸ್ವಾಮಿ ದೇವಾಲಯವು ಇದೀಗ ವಿನಾಶದಂಚಿನಲ್ಲಿದೆ.
ಈ ಗ್ರಾಮದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು, ಇಲ್ಲಿನ ಗ್ರಾಮವು ಸೇರಿದಂತೆ ಸುತ್ತಮುತ್ತಲಿನ ಅನೇಕ ಗ್ರಾಮಸ್ಥರ ಆರಾಧ್ಯ ದೈವ ಎನಿಸಿರುವ ಶ್ರೀ ಸೋಮೇಶ್ವರ ಸ್ವಾಮಿಗೆ ಪ್ರತಿವರ್ಷ ಶಿವರಾತ್ರಿ ಕಾರ್ತಿಕ ಮಾಸದಲ್ಲಿ ಪೂಜೆ ವಿಶೇಷವಾಗಿ ಜರುಗುತ್ತದೆ. ನಿಯಮ ನಿಷ್ಠೆಯಿಂದ ಹರಕೆ ಹೊತ್ತು ದೂರದೂರಿನಿಂದೆಲ್ಲಾ ಬರುವ ಅನೇಕ ಭಕ್ತರು ಇಲ್ಲಿ ಪೂಜಾ ಕೈಂಕರ್ಯಗಳನ್ನು ನೆರವೇರಿಸುವುದರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ.
ದುರ್ಬಲವಾದ ದೇವಾಲಯ: ಆದರೆ, ಇತ್ತೀಚಿನ ದಿನಗಳಲ್ಲಿ ಈ ದೇವಾಲಯಕ್ಕೆ ಭಕ್ತರು ಬರಲು ಭಯಪಡುವಂತಾಗಿದೆ. ಏಕೆಂದರೆ, ಪುರಾತನ ಕಾಲದಲ್ಲಿ ನಿರ್ಮಿಸಲಾಗಿರುವ ಈ ದೇವಾಲಯ ತನ್ನ ಅಸ್ತಿತ್ವವನ್ನು ಕಳೆದುಕೊಂಡು ಅಸ್ತಿ ಪಂಜರದ ಅವಶೇಷದಂತೆ ಕಾಣುತ್ಥಿದೆ. ದೇವಾಲಯದ ಆಧಾರ ಸ್ತಂಭಗಳು ಮತ್ತು ಮೇಲ್ಛಾವಣಿ ಉದುರಿ ಬಿದ್ದು ಹೋಗುತ್ತಿದೆ. ಯಾವ ಕ್ಷಣದಲ್ಲಿ ಮೇಲೆ ಬೀಳುವುದೋ ಎಂದು ಭಕ್ತರು ಭಯಪಡುವಂತಾಗಿದ್ದು, ಈ ಹಿನ್ನೆಲೆಯಲ್ಲಿ ದೇಗುಲಕ್ಕೆ ಆಗಮಿಸುವವರ ಸಂಖ್ಯೆ ಕ್ಷೀಣಿಸಿದೆ.
ಮನವಿಗೆ ಸ್ಪಂದಿಸಿಲ್ಲ: ಸಂಬಂಧಪಟ್ಟ ಇಲಾಖೆಯವರಿಗೆ ಈ ವಿಚಾರವಾಗಿ ಸಾಕಷ್ಟು ಬಾರಿ ಗಮನಕ್ಕೆ ತಂದು ಮನವಿ ನೀಡಿದರೂ ಯಾವ ಪ್ರಯೋಜನವಾಗಿಲ್ಲ ಎಂದು ಎಂದು ಸ್ಥಳೀಯರಾದ ಡಿ.ಪಿ. ನಾಗೇಂದ್ರ ತಿಳಿಸಿದ್ದಾರೆ.
ಮುಂದಾದರೂ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಗ್ರಾಮದ ಹಾಗೂ ನಾಗರಿಕರ ಹಿತದೃಷ್ಟಿಯಿಂದ ಇಲ್ಲಿನ ಶ್ರೀ ಸೋಮೇಶ್ವರ ದೇವಾಲಯವನ್ನು ಜೀರ್ಣೋದ್ಧಾರಗೊಳಿಸುವಂತೆ ಅರ್ಚಕ ನಂಜುಂಡಪ್ಪ ಒತ್ತಾಯಿಸಿದ್ದಾರೆ.