ಆಯುಕ್ತರಿಗೆ ಜೀವ ಬೆದರಿಕೆ ಖಂಡಿಸಿ ಪ್ರತಿಭಟನೆ
ಕ.ಪ್ರ.ವಾರ್ತೆ , ಹಾಸನ , ಫೆ. 5
ನಗರಸಭೆ ಆಯುಕ್ತರಿಗೆ ಜೀವ ಬೆದರಿಕೆ ಹಾಕಿರುವುದು ಮತ್ತು ಅವರಿಗೆ ಮಾನಸಿಕ ಕಿರುಕುಳ ನೀಡುತ್ತಿರುವುದನ್ನು ಖಂಡಿಸಿ ಸಮತಾ ಸೈನಿಕ ದಳ ಹಾಗೂ ದಲಿತ ಸಾಹಿತ್ಯ ಪರಿಷತ್ನ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಕಾರರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೆಲ ಸಮಯ ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಹಾಸನ ನಗರಸಭೆ ಆಯುಕ್ತ ಕೃಷ್ಣಮೂರ್ತಿ ಅವರಿಗೆ ಮಾಜಿ ಸಚಿವ ಹಾಗೂ ಶಾಸಕ ಎಚ್.ಡಿ. ರೇವಣ್ಣ ಅವರು ದೂರವಾಣಿ ಕರೆ ಮಾಡಿ ಧಮುಕಿ ಹಾಕಿ ವರ್ಗಾವಣೆ ಮಾಡಿಸುವ ಬೆದರಿಕೆಯನ್ನು ಹಾಕಿದ್ದಾರೆ. ಹಾಗೆಯೇ ನಗರಸಭೆಯ ಕೆಲ ಸದಸ್ಯರು ಸಹ ಕೃಷ್ಣಮೂರ್ತಿ ಅವರಿಗೆ ಮಾನಸಿಕ ಕಿರುಕಳ ನೀಡುತ್ತಿದ್ದಾರೆ. ಇದರಿಂದ ಅಧಿಕಾರಿಗಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಆರೋಪಿಸಿದರು.
ವಿನಾಕಾರಣ ಕಿರುಕುಳ: ನಗರಸಭೆ ಆಯುಕ್ತರಾಗಿ ಬಂದಿರುವ ದಲಿತ ಜನಾಂಗಕ್ಕೆ ಸೇರಿದ ದಲಿತ ಅಧಿಕಾರಿ ಬಂದ ಕೆಲವೇ ತಿಂಗಳ ಅವಧಿಯಲ್ಲಿ ತಮ್ಮ ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದಾರೆ. ಕಾನೂನು ವಿರೋಧಿ ಕೆಲಸ ಮಾಡಲು ಪ್ರೇರೇಪಿಸಿದ ಕೆಲವರಿಗೆ ಆಯುಕ್ತರು ಎಚ್ಚರಿಕೆ ನೀಡಿದ್ದು, ಕಾನೂನು ವಿರೋಧಿ ಕೆಲಸಗಳಲ್ಲಿ ತಾನು ಯಾವುದೇ ಕಾರಣಕ್ಕೆ ಪಾಲ್ಗೊಳ್ಳುವುದಿಲ್ಲ ಮತ್ತು ಇಂತಹದನ್ನು ನನ್ನ ಹತ್ತಿರ ತರಬೇಡಿ ಎಂದು ತಾಕೀತು ಮಾಡಿದ್ದಾರೆ. ಈ ಸಂಬಂಧ ನಗರಸಭೆಯಲ್ಲಿ ಪಾರದರ್ಶಕ ಆಡಳಿತ ನೀಡುವ ನಿಟ್ಟಿನಲ್ಲಿ ಎಲ್ಲಾ ಕೋಣೆಗಳಿಗೆ ಸಿಸಿ ಕ್ಯಾಮರಾ ಅಳವಡಿಸಿದ್ದಾರೆ. ಮಧ್ಯವರ್ತಿಗಳನ್ನು ನಗರಸಭೆ ಕಚೇರಿ ಆವರಣದಿಂದ ದೂರ ಇಟ್ಟಿದ್ದಾರೆ.
ನಿಗದಿತ ಸಮಯದಲ್ಲಿ ಕೆಲಸ ಮಾಡುವಂತೆ ತಕೀತು ಮಾಡಿದ್ದು, ಸ್ವತಃ ತಾವು ಕೂಡ ಹಗಲಿರುಳೆನ್ನದೇ ಸ್ಥಳಕ್ಕೆ ಭೇಟಿ ನೀಡುವ ಮೂಲಕ ಖುದ್ದು ಸಮಸ್ಯೆಗಳನ್ನು ಆಲಿಸುತ್ತಾ ನಗರಸಭೆಗೆ ಕಾಯಕಲ್ಪ ನೀಡುವತ್ತ ಆಯುಕ್ತರು ಕೆಲಸ ಮಾಡಿದ್ದಾರೆ. ಆದರೆ, ಕಾನೂನುಬಾಹಿರವಾಗಿ ಕೆಲಸ ಮಾಡಲು ಹೊರಟ ಕೆಲ ನಗರಸಭೆ ಸದಸ್ಯರಿಗೆ ಇದರಿಂದ ತೊಂದರೆಯಾಗಿದ್ದು, ನಗರಸಭೆ ಅಧ್ಯಕ್ಷೆಗೆ ಗೌರವ ತೋರುವುದಿಲ್ಲ ಎಂಬ ನೆಪವೊಡ್ಡಿ ವಿನಾಕಾರಣ ಆಯುಕ್ತರಿಗೆ ಕಿರುಕುಳ ಆರಂಭಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಆರ್ಪಿಐ ಸತೀಶ್, ಎಚ್.ಕೆ. ಸತೀಶ್, ಸಿಐಟಿಯು ಕಾರ್ಯದರ್ಶಿ ಧರ್ಮೇಶ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನಾರಾಯಣಗೌಡ, ಎಚ್.ಪಿ. ಶಂಕರ್ ರಾಜ್, ಹೆತ್ತೂರು ನಾಗರಾಜು, ಕುಮಾರ್, ಸೋಮು ದಂಡೋರ, ಹೇಮಂತ್ ಆಡುವಳ್ಳಿ, ಸ್ವಾಮಿ ಹಾಗೂ ಇತರರು ಇದ್ದರು.
ಶಾಸಕ ರೇವಣ್ಣ ಧಮಕಿ
ಈಗ, ರೇವಣ್ಣ ಅವರು ಹಾಸನ ಹಾಲು ಒಕ್ಕೂಟದ ಬೂತ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ತಾತ್ಕಾಲಿಕ ಷೆಡ್ ನಿರ್ಮಿಸುವ ಬದಲು, ನಿಯಮ ಮೀರಿ ಶಾಶ್ವತ ಶೆಡ್ ನಿರ್ಮಿಸಲು ಮುಂದಾಗಿದ್ದಾರೆ. ಇದನ್ನು ವಿರೋಧಿಸಿದ ಆಯುಕ್ತರು ನಿಯಮದಂತೆ ತಾತ್ಕಾಲಿಕ ಷೆಡ್ ನಿರ್ಮಿಸಬೇಕು ಎಂದು ತಡೆಯೊಡ್ಡಿದ್ದಾರೆ. ಇದರಿಂದ ಕುಪಿತರಾದ ರೇವಣ್ಣ ಅವರು, ಆಯುಕ್ತರಿಗೆ ದೂರವಾಣಿ ಕರೆ ಮಾಡಿ ಷೆಡ್ ನಿರ್ಮಿಸಲು ಸಹಕರಿಸದಿದ್ದರೆ ನಿಮ್ಮನ್ನು ರಿಪೇರಿ ಮಾಡುತ್ತೇನೆ ಎಂದು ಬೆದರಿಕೆ ಹಾಕಿ ಹಾಗೂ ವರ್ಗಾವಣೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ ಎಂದು ಆರೋಪಿಸಿದರು.