ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಾಡಾನೆ, ಪಡಿತರ ಸಮಸ್ಯೆ ಪರಿಹಾರಕ್ಕೆ ಆಗ್ರಹ

Vishwanath S
Updated On : 6 Feb 2014, 12:50 pm

ಕ.ಪ್ರ. ವಾರ್ತೆ , ಆಲೂರು , ಫೆ. 5
ತಾಲೂಕಿನಲ್ಲಿ ಕಾಡಾನೆ ಮತ್ತು ಪಡಿತರ ಚೀಟಿ ಅವ್ಯವಹಾರ ಸೇರಿದಂತೆ ನಾನಾಧ ಜ್ವಲಂತ ಸಮಸ್ಯೆಗಳಿಗೆ ಪರಿಹಾರಕ್ಕೆ ಒತ್ತಾಯಿಸಿ ಪಟ್ಟಣದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.
ತಾಪಂ ಕಚೇರಿ ಮುಂಭಾಗ ಸಭೆ ಸೆರಿದ ಕಾರ್ಯಕರ್ತರು ತಾ. ಅಧ್ಯಕ್ಷ ಕಣಗಾಲ್ ಮೂರ್ತಿ ನೇತೃತ್ವದಲ್ಲಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಜಾಥಾ ನಡೆಸಿ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.
ಆರೋಪ: ನಂತರ ನಡೆದ ಬಹಿರಂಗ ಸಭೆಯಲ್ಲಿ ರಾಜ್ಯ ರೈತ ಸಂಘದ ಉಪಾಧ್ಯಕ್ಷ ವಿಜಯ್ ಕುಮಾರ್ ಹೆಗ್ಡೆ ಮಾತನಾಡಿ, ರೈತರನ್ನು ದೇಶದ ಬೆನ್ನೆಲುಬೆಂದು ಬಿಂಬಿಸಿ ರೈತರ ಕತ್ತು ಕೊಯ್ದು  ೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಇದಕ್ಕೆಲ್ಲ ರೈತರು ಸಂಘಟಿತರಾಗಿ ಹೋರಾಟ ನಡೆಸದಿರುವುದೇ ಕಾರಣ. ತಾಲೂಕು ಸೇರಿದಂತೆ ರಾಜ್ಯಾದ್ಯಂತ ರೈತರು ನಾನಾ ಸಮಸ್ಯೆಗಳನ್ನೆದುರಿಸುತ್ತಿದ್ದು, ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಬೆಲೆಗಳನ್ನು ಕಳೆದುಕೊಂಡು ಕಂಗಾಲಾಗಿರುವ ರೈತರ ಅಳಿದುಳಿದ ಬೆಳೆಗೂ ಸೂಕ್ತ ಬೆಲೆ ಸಿಗದೆ ಪರದಾಡುವಂತಾಗಿದೆ ಇದಕ್ಕೆ ಸರ್ಕಾರದವರ ನಿರ್ಲಕ್ಷ್ಯ ಮನೋಭಾವವೇ ಕಾರಣ ಎಂದು ಆರೋಪಿಸಿದರು.
ಎಚ್ಚರಿಕೆ: ಬೇರೆ ಭಾಗಗಳ ಸಮಸ್ಯೆಗಳಿಗಿಂತ ಈ ಭಾಗದ ರೈತರ ಸಮಸ್ಯೆಗಳು ಭಿನ್ನವಾಗಿವೆ ಇಲ್ಲಿ ರೈತರು ಕಾಡಾನೆ ಹಾವಳಿಯಿಂದ ಕೋಟ್ಯಾಂತರ ರು. ಮೌಲ್ಯದ ಬೆಳೆಗಳನ್ನು ಕಳೆದುಕೊಂಡಿದ್ದು ಕಾಡಾನೆಗಳಿಂದ ಹಲವಾರು ರೈತರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಈ ಸಂಬಂಧ ಹಲವಾರು ಬಾರಿ ಪ್ರತಿಭಟನೆಗಳನ್ನು ಕೈಗೊಂಡರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಅವರ ಆಡಳಿತ ವೈಖರಿಯನ್ನು ಎತ್ತಿ ತೋರಿಸುತ್ತದೆ. ಶೀಘ್ರ ರಾಜ್ಯ ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಮುಂದಾಗುವ ಅನಾಹುತಕ್ಕೆ ಅವರೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಶಾಶ್ವತ ಪರಿಹಾರವಿಲ್ಲ: ಪತ್ರಕರ್ತ ಆರ್.ಪಿ. ವೆಂಕಟೇಶ್ ಮೂರ್ತಿ ಮಾತನಾಡಿ, ನಮ್ಮನ್ನು ನಾವೇ ಗುಲಾಮರೆಂದುಕೊಂಡಿದ್ದು, ಪ್ರಜಾಪ್ರಭುತ್ವದಲ್ಲಿ ನಾವೇ ಪ್ರಭುಗಳೆನ್ನುವುದನ್ನು ಮರೆತಿದ್ದೇವೆ. ಕಳೆದ 30 ವರ್ಷಗಳಿಂದ ತಾಲೂಕಿನ ಕಾಡಾನೆ ಸಮಸ್ಯೆ ಇದ್ದು ಯಾವುದೇ ಶಾಶ್ವತ ಪರಿಹಾರ ಒದಗಿಸಿಲ್ಲ ಎಂದರು.
ಕೇವಲ ರು. 20 ಲಕ್ಷ: ತಾಲೂಕು ರೈತ ಸಂಘ ಅಧ್ಯಕ್ಷ ಕಣಗಾಲ್ ಮೂರ್ತಿ ಮಾತನಾಡಿ, ಸರ್ಕಾರ ರೈತರ ಯಾವುದೇ ರೀತಿಯ ಸಮಸ್ಯೆಗೆ ಸ್ಪಂದಿಸದೆ ಸುಳ್ಳು ಭರವಸೆಗಳನ್ನು ನೀಡಿ ರೈತರ ಕಣ್ಣಿಗೆ ಮಣ್ಣೆರೆಚುತ್ತಿದೆ. ತಾಲೂಕಿನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ಇದಕ್ಕೆ ಪಟ್ಟಣದ ರಸ್ತೆಯ ಎರಡೂ ಬದಿಗಳಲ್ಲಿ ನಡೆಯುತ್ತಿರುವ ಸಂತೆ ಹಳ್ಳಿ ಸಂತೆಯಂತೆ ನಡೆಯುತ್ತಿದೆ. ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಸ್ಥರು ಸರ್ಕಾರಕ್ಕೆ ರು. 1.50 ಕೋಟಿ ತೆರಿಗೆ ಪಾವತಿಸುತ್ತಿದ್ದು, ಸರ್ಕಾರ ಕೇವಲ ರು. 20 ಲಕ್ಷ ಅನುದಾನ ನೀಡುತ್ತಿದೆ.
ಕರ್ನಾಟಕ- ಕೇರಳ ಅಡಿಕೆ ತೆಂಗು ಬೆಳೆಗಾರರ ಒಕ್ಕೂಟದ ಪ್ರಧಾನ ಸಂಚಾಲಕ ರವಿಕಿರಣ್ ಪುಣಚ ಮಾತನಾಡಿ, ರೈತರು ಒಗ್ಗೂಡದ ಹೊರತು ಯಾವುದೇ ಸಮಸ್ಯೆಗಳ ಪರಿಹಾರ ಸಾಧ್ಯವಿಲ್ಲ. ರೈತ ಸಂಘದಲ್ಲಿ ನಾಯಕತ್ವದ ಕೊರತೆಯಿಲ್ಲ ಬೆಂಬಲದ ಕೊರತೆಯಿದೆ ಎಂದರು.
ಬ್ಯಾಂಕ್‌ಗಳಿಂದ ರೈತರು ಬೆಳೆಗೆ ಪಡೆದಿರುವ ಹಣ ಸಾಲವೆಂದು ಏಕೆ ಭಾವಿಸಬೇಕು? ಎಂದು ಕೇಳಿದ ಅವರು, ಬ್ಯಾಂಕ್‌ನಿಂದ ನೀಡಲಾಗುವ ಹಣವನ್ನು ಪ್ರೋತ್ಸಾಹ ಧನವೆಂದು ಪರಿಗಣಿಸಬೇಕೆಂದರು.
ಈ ಭಾಗದಲ್ಲಿ ಹಾದು ಹೋಗಿರುವ ಅನಿಲ ಸಾಗಾಣಿಕೆಯ ಪೈಪ್‌ಲೈನ್‌ಗೆ ರೈತರಿಂದ ಪಡೆದ ಭೂಮಿಗೆ ಅಲ್ಪ ಮೊತ್ತದ ಹಣ ನೀಡಿ ಕೈ ತೊಳೆದುಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ರೈತರು ಅವರಿಗೆ ತಮ್ಮ ಜಮೀನನ್ನು ಮಾರಬಾರದು. ಅದಕ್ಕೆ ಬದಲಾಗಿ ರೈತರಿಂದ ಪಡೆದಿರುವ ಜಮೀನಿಗೆ ಪ್ರತಿ ತಿಂಗಳು ಇಂತಿಷ್ಟು ಬಾಡಿಗೆಯನ್ನು ನಿಗದಿ ಪಡಿಸಿ ನೀಡಬೇಕು. ಇಲ್ಲಿರುವ ಗ್ಯಾಸ್‌ಲೈನ್‌ಗೆ ಯಾವುದೇ ಭದ್ರತೆ ಇಲ್ಲದಿರುವುದು ಆಡಳಿತ ವೈಖರಿಗಿಡಿದ ಕೈಗನ್ನಡಿಯಾಗಿದೆ. ಒಟ್ಟಾರೆಯಾಗಿ ರಾಜಕೀಯ ವ್ಯವಸ್ಥೆ ಬದಲಾಯಿಸಬೇಕೆಂದರು. ಪ್ರತಿಭಟನಾ ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಶಾರದಾಂಬ ಅವರಿಗೆ 10 ಬೇಡಿಕೆಗಳ ಒತ್ತಾಯ ಪತ್ರವನ್ನು ಪ್ರತಿಭಟನಾಕಾರರು ನೀಡಿದರು.
ಪಪಂ ಮಾಜಿ ಅಧ್ಯಕ್ಷ ಎಚ್.ಬಿ. ಧರ್ಮರಾಜ್, ಕಾರ್ಯಾಧ್ಯಕ್ಷ ಎಂ.ಕೆ.ಮಲ್ಲೇಶ್, ಕಾರ್ಯದರ್ಶಿ ಪುಟ್ಟರಾಜು, ರೈತ ಮುಖಂಡರಾದ ಗುರುದೇವ್ ನೇರಗಳಲೆ, ಚಲುವಣ್ಣ ಸೋಂಪುರ, ವಿಜಯ ಕುಮಾರ್ ಮೂಲೆಹೊಳೆ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement