ಗುಂಡಿ ಬಿದ್ದ ರಸ್ತೆಗಳಿಂದ ಸಂಚಾರಕ್ಕೆ ಕಿರಿಕಿರಿ
ಹೊಳೆನರಸೀಪುರ: ಪಟ್ಟಣದ ಗಲ್ಲಿಗಳಿಗೆಲ್ಲಾ ಡಾಂಬರು ಮತ್ತು ಕಾಂಕ್ರಿಟ್ ರಸ್ತೆಯಾಗುವ ಭಾಗ್ಯ ಬಂದರೂ, ಇಲ್ಲಿನ 13ನೇ ವಾರ್ಡ್‌ಗೆ ಸೇರಿದ ದಾಸಗೌಡರ ಬೀದಿ ಹಾಗೂ ಗಾಂಧಿನಗರಕ್ಕೆ ಹೋಗುವ ರಸ್ತೆಗಳಿಗೆ ಮಾತ್ರ ಈ ಭಾಗ್ಯ ಬಂದಿಲ್ಲ.
ಈ ರಸ್ತೆ ಟಾರ್ ಹೊದಿಕೆ ಕಂಡು ಹಲವು ವರ್ಷಗಳೇ ಕಳೆದಿವೆ. ಕಾಂಕ್ರಿಟ್ ಮತ್ತು ಡಾಂಬರು ಕಾಣುವುದಿರಲಿ ಈ ಹಿಂದೆ ಕಾರಣಾಂತರಗಳಿಂದ ಅಲ್ಲಲ್ಲಿ ಅಗೆಯಲಾಗಿದ್ದು, ಅದನ್ನು ಸರಿಪಡಿಸುವ ಗೋಜಿಗೂ ಇಲ್ಲಿನ ಪುರಸಭೆ ಮುಂದಾಗಿಲ್ಲ.
ಪದೇ ಪದೇ ದುರಸ್ತಿ: ಒಂದಿಲ್ಲೊಂದು ಕಾಮಗಾರಿಯ ನೆಪದಲ್ಲಿ ದಾಸಗೌಡರ ಬೀದಿ ಮತ್ತು ಗಾಂಧಿನಗರಕ್ಕೆ ಹೋಗುವ ರಸ್ತೆಯನ್ನು ಪದೇ ಪದೇ ಅಗೆದು ಇದ್ದ ರಸ್ತೆಯನ್ನೂ ಹಾಳುಗೆಡವಲಾಗಿದೆ. ಪುರಸಭೆ ಮಾತ್ರ ಹಾಳಾದ ರಸ್ತೆಯ ದುರಸ್ತಿಯ ಬಗ್ಗೆ ಈವರೆಗೂ ಕೈ ಹಾಕಿಲ್ಲ.
ನಾಗರಿಕರ ಆಕ್ರೋಶ: ಈ ರಸ್ತೆ ಯಾವ ಮಟ್ಟಕ್ಕೆ ಹದಗೆಟ್ಟಿದೆಯೆಂದರೆ, ಇಲ್ಲಿ ವಾಹನ ಸಂಚಾರವಿರಲಿ ಜನಸಾಮಾನ್ಯರೂ ನಿರುಮ್ಮಳವಾಗಿ ನಡೆದಾಡಲೂ ಬಾರದಷ್ಟು ಹದಗೆಟ್ಟಿವೆ. ಇದು ಇಲ್ಲಿನ ಬಡಾವಣೆಯ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸಂಚಾರ ಸ್ಥಗಿತಗೊಂಡಿತ್ತು: ಹಲವು ವರ್ಷಗಳೇ ಕಳೆದರೂ ಅಭಿವೃದ್ಧಿಯ ಅವಕೃಪೆಗೆ ಒಳಗಾಗಿದ್ದ ಈ ರಸ್ತೆಯಲ್ಲಿ ಜನ ಹಾಗೂ ವಾಹನಗಳು ಹೇಗೋ ಸಂಚರಿಸುತ್ತಿದ್ದವು. ಆದರೆ, ಎರಡು ತಿಂಗಳ ಹಿಂದೆಯಷ್ಟೇ ಈ ರಸ್ತೆಯಲ್ಲಿ ಒಳಚರಂಡಿ ಕೈಕೊಟ್ಟ ಕಾರಣದಿಂದ ಇದ್ದ ರಸ್ತೆಯನ್ನೆಲ್ಲಾ ಬಗೆದು ತಿಂಗಳಾದರೂ ಕಾಮಗಾರಿಯನ್ನೇ ಕೈಗೊಳ್ಳದೇ ಹಾಗೆಯೇ ಬಿಟ್ಟ ಕಾರಣದಿಂದಾಗಿ ಈ ರಸ್ತೆಯಲ್ಲಿ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಕಡೆಗೆ ಒಳಚರಂಡಿ ಕಾಮಗಾರಿಯನ್ನು ಮುಗಿಸಿದ ಮೇಲಾದರೂ ರಸ್ತೆಗೆ ಸರಿಯಾಗಿ ಮಣ್ಣು ತುಂಬದೇ, ಹಾಗೆಯೇ ತೇಪೆ ಸಾರಿಸಿದ ಪರಿಣಾಮವಾಗಿ ಇದ್ದ ರಸ್ತೆ ಕೂಡ ಸಂಪೂರ್ಣ ಹಾಳಾಗಿ ಹೋಗಿ ವಾಹನಗಳು ಪ್ರಯಾಸದಿಂದ ಸಂಚರಿಸಬೇಕಾಗಿದೆ.
ನಿವಾಸಿಗಳ ದೂರು: ಒಳಚರಂಡಿ ಕಾಮಗಾರಿಯನ್ನು ಪುರಸಭೆಯು ಪೂರೈಸಿದ ಮೇಲೆ ಇದೇ ರಸ್ತೆಯಲ್ಲಿ ಕೆಲವರು ಒಳಚರಂಡಿಯನ್ನು ಮರಳಿ ದುರಸ್ಥಿಗೊಳಿಸಲು ಮುಂದಾದ ಕಾರಣದಿಂದಾಗಿ ಇದ್ದ ಹಳ್ಳದ ರಸ್ತೆ ಈಗ ಇನ್ನೂ ಹದೆಗೆಟ್ಟು ಹೋದರೂ ಸಂಬಂಧಿಸಿದ 13 ಮತ್ತು 14ನೇ ವಾರ್ಡ್‌ನ ಸದಸ್ಯರು ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಕಣ್ಣುಮುಚ್ಚಿ ಕುಳಿತಿದ್ದಾರೆ ಎಂದು ಬಡಾವಣೆಯ ನಿವಾಸಿಗಳು ದೂರುತ್ತಾರೆ.
ಬಿಗಿ ಇಲ್ಲದ ಆಡಳಿತ: ರಸ್ತೆ ಅಗೆಯುವಾಗ ಪುರಸಭೆಯ ಅನುಮತಿ ಪಡೆಯಬೇಕು ಎಂಬುದು ನಿಯಮವಾದರೂ ಇಲ್ಲಿ ಈ ಯಾವ ನಿಯಮಗಳಿಗೂ ಕಿಮ್ಮತ್ತಿಲ್ಲದೇ, ಸಿಕ್ಕ ಸಿಕ್ಕವರು ಸಿಕ್ಕ ಕಡೆಯಲ್ಲೆಲ್ಲಾ ರಸ್ತೆಯನ್ನು ಅಗೆದುಹಾಕಿದರೂ ಕೇಳುವವರೇ ಇಲ್ಲದ ಸ್ಥಿತಿ ಇಲ್ಲಿನ ಪುರಸಭೆಯಲ್ಲಿದೆ. ಇಲ್ಲಿನ ಪುರಸಭೆಗೆ ಹತ್ತಾರು ಯೋಜನೆಗಳಡಿಯಲ್ಲಿ ಕೋಟಿಗಟ್ಟಲೆ ಅನುದಾನ ಬಂದರೂ ಕೂಡ ಮಾಡಿದ ಕಾಮಗಾರಿಯನ್ನೇ ಮರಳಿ ಮಾಡುತ್ತಾ, ಹಾಕಿದ ರಸ್ತೆಗೇ ಕಾಂಕ್ರೀಟ್ ಹಾಕುತ್ತಾ, ಇದ್ದ ಚರಂಡಿಯನ್ನೇ ಮತ್ತೊಮ್ಮೆ ದುರಸ್ತಿಯ ನೆಪದಲ್ಲಿ ಕಿತ್ತು ಕಟ್ಟುವ ಚಾಳಿ ಇಲ್ಲಿನ ಪುರಸಭೆಯಲ್ಲಿ ನಡೆಯುತ್ತಿದೆ. ಆದರೆ, ಈ ರಸ್ತೆಗೆ ಮಾತ್ರ ಯಾವುದೇ ಯೋಜನೆಯಡಿಯಲ್ಲಿಯೂ ಒಂದು ನಯಾಪೈಸೆ ಅನುದಾನ ಬಾರದೇ ಹಳ್ಳಗಳಿಂದ ಕೂಡಿದ ರಸ್ತೆಯಲ್ಲಿಯೇ ಏಳುತ್ತಾ ಬೀಳುತ್ತಾ ಸಾಗಬೇಕಾದ ಅನಿವಾರ್ಯತೆ ಈ ವಾರ್ಡ್‌ನ ನಾಗರಿಕರಿಗೆ ಬಂದೊದಗಿದೆ.