ನೀರಾ'ವರಿ' ಹೆಚ್ಚಲು ಗೌಡರ ಕುಟುಂಬ ಕಾರಣ ಅಲ್ಲ
ಕ.ಪ್ರ.ವಾರ್ತೆ , ಅರಸೀಕೆರೆ , ಫೆ. 5
ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳು ಕುಂಠಿತಗೊಳ್ಳಲು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಅವರ ಮಕ್ಕಳು ಕಾರಣ ಎಂಬ ಮಾಜಿ ಸಚಿವ ಬಿ. ಶಿವರಾಂ ಆರೋಪ ಸತ್ಯಕ್ಕೆ ದೂರವಾದದ್ದು. ಇವರು 20 ವರ್ಷ ಶಾಸಕರಾಗಿ, 2 ವರ್ಷ ಸಚಿವರಾಗಿ ಜಿಲ್ಲೆಗೆ ಇವರ ಕೊಡುಗೆ ಏನು ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಪ್ರಶ್ನಿಸಿದ್ದಾರೆ.
ಬುಧವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದು 67 ವರ್ಷಗಳಲ್ಲಿ 50ಕ್ಕೂ ಹೆಚ್ಚು ವರ್ಷ ಕಾಂಗ್ರೆಸ್ ಸರ್ಕಾರವೇ ಆಡಳಿತ ನಡೆಸಿದ್ದು, ವೇ ಹೊರತು ದೇವೇಗೌಡರ ಕುಟುಂಬವಾಗಲಿ, ಜೆಡಿಎಸ್ ಆಗಲಿ ಕಾರಣವಲ್ಲ ಎಂದು ಪ್ರತಿಪಾದಿಸಿದ್ದಾರೆ.
ಆರೋಪ: 2 ದಶಕಗಳ ಕಾಲ ಶಾಸಕರಾಗಿ ಆಯ್ಕೆಗೊಂಡು, ಒಮ್ಮೆ ಸಚಿವರಾಗಿ ಕಾರ್ಯ ನಿರ್ವಹಿಸಿ ಒಂದು ಹನಿ ನೀರನ್ನು ತಮ್ಮ ಕ್ಷೇತ್ರಕ್ಕಾಗಲಿ, ಜಿಲ್ಲೆಗಾಗಲಿ ತರಲಾಗದವರು ಚುನಾವಣೆಗಳಲ್ಲಿ ಜನರಿಂದ ತಿರಸ್ಕೃತಗೊಂಡಿರುವ ವ್ಯಕ್ತಿಯೊಬ್ಬರು ಮತ್ತೆ ಜನರಲ್ಲಿ ಗುರುತಿಸಿಕೊಳ್ಳಲು ಪದೇ ಪದೇ ದೇವೇಗೌಡರ ಕುಟುಂಬದ ವಿರುದ್ಧ ಟೀಕೆ ಮಾಡುವ ಮೂಲಕ ಜನರನ್ನು ದಾರಿ ತಪ್ಪಿಸಿ ರಾಜಕೀಯ ಲಾಭ ಪಡೆಯುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಸರ್ಕಾರ ಕಾರಣ: ಎತ್ತಿನ ಹೊಳೆ ಯೋಜನೆ ಅನುಷ್ಠಾನಕ್ಕೆ ಹಿಂದಿನ ಬಿಜೆಪಿ ಸರ್ಕಾರ ಕಾರಣ. ಅಂದಿನ ನೀರಾವರಿ ಸಚಿವರಾಗಿದ್ದ ಬಸವರಾಜು ಬೊಮ್ಮಾಯಿಯವರ ಆಶೀರ್ವಾದ ಹಾಗೂ ನನ್ನ ಅವಿರಥ ಹೋರಾಟದಿಂದ ತಾಲ್ಲೂಕಿನ ಕೆರೆ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಅನುಮೋದನೆ ದೊರೆತಿದೆ. ಇದಕ್ಕಾಗಿ ನನ್ನೊಂದಿಗೆ ಸಹಕರಿಸಿದ ಬಸವರಾಜು ಬೊಮ್ಮಾಯಿಯವರಿಗೆ ತಾವು ಚಿರಋಣಿ. ಇದೀಗ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದು, ಆ ಯೋಜನೆಗೆ ಮತ್ತಷ್ಟು ಹಣವನ್ನು ಹೆಚ್ಚಿಸಿ ಆಡಳಿತಾತ್ಮಕ ಮಂಜೂರಾತಿ ನೀಡಿದೆ. ಇದನ್ನು ಮರೆಮಾಚಲು ಮುಂದಾಗಿರುವ ಕಾಂಗ್ರೆಸ್ ಮುಖಂಡರು ಈ ಸಾಧನೆ ತಮ್ಮದೇ ಎಂದು ಹೇಳಿಕೊಳ್ಳುತ್ತಿರುವುದು ಹಾಸ್ಯಾಸ್ಪದ ಸಂಗತಿ ಎಂದರು.
ಸಾಲಗಾಮೆ ಹೋಬಳಿ ಕ್ಯಾತನಹಳ್ಳಿ ಏತ ನೀರಾವರಿ ಯೋಜನೆ ಅನುಷ್ಟಾನಕ್ಕೆ ತರುವುದಾಗಿ 1993ರಲ್ಲಿ ಶಂಕುಸ್ಥಾಪನೆ ನೆರವೇರಿಸಿ ಜನರಿಗೆ ಪೊಳ್ಳು ಭರವಸೆ ನೀಡಿ ಚುನಾವಣೆಯಲ್ಲಿ ಮತಗಳಿಸಿ ಇಲ್ಲಿಯವರೆಗೂ ಮಾಜಿ ಸಚಿವರು ಮೌನ ತಾಳಿದ್ದೇಕೆ ಎಂದು ಪ್ರಶ್ನಿಸಿದ ಅವರು, ಕಳೆದ 20 ವರ್ಷಗಳಿಂದ ಗಂಡಸಿ ವಿಧಾನಸಭಾ ಕ್ಷೇತ್ರದ ಜನತೆಗೆ ನೀರಾವರಿ ಅನುಷ್ಟಾನದ ಭೂಪಟವಿಡಿದು ವಂಚಿಸಿ ಮತ ಪಡೆದವರು ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಮತ್ತೆ ಬೊಬ್ಬೆ ಹೊಡೆಯಲಾರಂಭಿಸಿದ್ದಾರೆ ಎಂದು ಕುಟುಕಿದರು.
ಎತ್ತಿನ ಹೊಳೆ ಯೋಜನೆಯನ್ನು ಕೇಂದ್ರ ಸ್ಥಾನದಲ್ಲಿ ಉದ್ಘಾಟಿಸದೆ ಮತ ಗಳಿಕೆಗಾಗಿ ಚಿಕ್ಕಬಳ್ಳಾಪುರದಲ್ಲಿ ಉದ್ಘಾಟಿಸಿರುವುದು ದುರದೃಷ್ಟಕರ ಹಾಗೂ ಈ ಭಾಗದ ಜನತೆಗೆ ದ್ರೋಹವೆಸಗಿದಂತಾಗಿದೆ ಎಂದು ವೀರಪ್ಪ ಮೊಯ್ಲಿಯವರ ಕಾರ್ಯವೈಖರಿ ಬಗ್ಗೆ ಪ್ರಶ್ನಿಸಿದರು. ಈ ಸಂದರ್ಭದಲ್ಲಿ ತಾಪಂ ಸದಸ್ಯ ಸೂಳೇಕೆರೆ ಶಿವಕುಮಾರ್, ಜೆಡಿಎಸ್ನ ಹಿರಿಯ ಮುಖಂಡ ಕಲ್ಲುಸಾದರಹಳ್ಳಿ ಶಿವಮೂರ್ತಿ ಇದ್ದರು.