ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಮಕ್ಕಳ ಇತಿಮಿತಿ ಅರಿಯಲು ತರಗತಿ ಅಗತ್ಯ'

Vishwanath S
Updated On : 6 Feb 2014, 12:51 pm

ಹಾಸನ: ಪೋಷಕರು ಮಕ್ಕಳ ಬೌದ್ಧಿಕ ಇತಿ-ಮಿತಿಗಳನ್ನು ಅರ್ಥೈಸಿಕೊಂಡು ಸೂಕ್ಷ್ಮವಾಗಿ ವ್ಯವಹರಿಸಲು ಸಾಧ್ಯವಾಗಬೇಕು. ಈ ನಿಟ್ಟಿನಲ್ಲಿ ಪೋಷಕರಿಗೆ ತರಗತಿಯ ಅಗತ್ಯ ಇದೆ ಎಂದು ಮಹಿಳೆ ಮತ್ತು ಮಕ್ಕಳ ಜಿಲ್ಲಾ ರಕ್ಷಣಾಧಿಕಾರಿ ಗೀತಾ ಹೇಳಿದರು.
ನಗರದ ಬಸವೇಶ್ವರ ಕಲ್ಯಾಣ ಮಂಟಪದ ಹೊರ ಆವರಣದಲ್ಲಿ ಇತ್ತೀಚೆಗೆ  ಉತ್ತರ ಬಡಾವಣೆಯ ಎಸ್.ಜಿ.ಆರ್ ಶಾಲೆಯ ದಶಮಾನೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಎಂದರೆ ಕೇವಲ ಎಂಜಿನಿಯರಿಂಗ್ ಅಥವ ಮೆಡಿಕಲ್ ಅಲ್ಲ. ಈ ಎರಡೂ ಮಾದರಿಯ ಶಿಕ್ಷಣದ ಹಿಂದೆ ಬಿದ್ದು ಪೋಷಕರು ಮಕ್ಕಳನ್ನು ಮಾನಸಿಕವಾಗಿ ಒತ್ತಡ ಹೇರುವುದರಿಂದ ಮಕ್ಕಳಲ್ಲಿ ಮಾನಸಿಕ ಖಿನ್ನತೆ ಹೆಚ್ಚಾಗಿ ಜೀವನದ ಪ್ರೀತಿಯನ್ನೇ ಕಳೆದು ಕೊಳ್ಳಬಹುದು ಎಂದರು.
ಓದುವ ಹವ್ಯಾಸ ಬೆಳೆಸಿ: ಭಾರತ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಅಹಮದ್ ಮಾತನಾಡಿ, ಶಾಲಾ ವಾರ್ಷಿಕೋತ್ಸವಗಳು ಮಕ್ಕಳ ಪ್ರತಿಭೆಯನ್ನು ಹುರಿದುಂಬಿಸುವಲ್ಲಿ ಹೆಚ್ಚಿನ ಪಾತ್ರವಹಿಸುತ್ತಿವೆ. ಈ ಪಾಲ್ಗೊಳ್ಳುವಿಕೆಯಲ್ಲಿ ಪೋಷಕರು ಆಸಕ್ತಿಯಿಂದ ತೊಡಗಿಸಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿವೆ ಇಂತಹ ಭಾಗವಹಿಸುವಿಕೆ ಮಕ್ಕಳಲ್ಲಿ ಶೈಕ್ಷಣಿಕವಾಗಿ ಬೆಳೆಯಲು ಸಹಕಾರಿಯಾಗುತ್ತವೆ ಎಂದರು. ಮಕ್ಕಳನ್ನು ಟಿ.ವಿ, ಮೊಬೈಲ್‌ಗಳಿಂದ ದೂರವಿರಿಸಿ, ಓದುವ ಹವ್ಯಾಸ ಬೆಳೆಸಲು ಗ್ರಂಥಾಲಯದಕಡೆಗೆ ಹೊರಳಿಸಬೇಕು ಎಂದರು.
ಮಂಡ್ಯಜಿಲ್ಲೆಯ ಶಿಕ್ಷಕ ದೇವರಾಜು ಮಾತನಾಡಿ, ಅಂಕ ಗಳಿಕೆಗಿಂತ ಹೆಚ್ಚಾಗಿ ಮಗು ಮಾನವಂತನಾಗಿ ಬೆಳೆಯುವುದೇ ಶ್ರೇಷ್ಠವಾದುದ್ದು ಎಂದರು.
ಪೋಷಕರು ಅರಿತುಕೊಳ್ಳಬೇಕು: ಲೇಖಕಿ ರೂಪಾ ಹಾಸನ, ಮಕ್ಕಳ ಸಮಗ್ರ ಬೆಳವಣಿಗೆಯಲ್ಲಿ ಶಿಕ್ಷಣದ ಮಾನದಂಡ, ನೈತಿಕತೆ ಹಾಗೂ ಮಾನವೀಯತೆ ಅಂಕಕ್ಕಿಂತಲೂ ಮಿಗಿಲಾಗಿರಬೇಕು. ಇದನ್ನು ಪೋಷಕರು ಅರಿತುಕೊಳ್ಳಬೇಕಿದೆ ಎಂದರು.
ಹಾರೈಕೆ: ನಿವೃತ್ತ ಶಿಕ್ಷಕಿ ಶಾರದಮ್ಮ ಮಾತನಾಡಿ, ಶಾಲೆ, ಮನೆ, ಮಗು, ಪೋಷಕರು, ವ್ಯವಸ್ಥಾಪಕರು  ಹಾಗೂ ಶಿಕ್ಷಕರ ನಡುವಿನ ಸಮರಸ ಬೆಳವಣಿಗೆ ನೈತಿಕ ಶಿಕ್ಷಣ ಅಂಕದ ಶಿಕ್ಷಣವನ್ನು ಮೀರಿ ಮುನ್ನಡೆಯುತ್ತವೆ. ಈ ನಿಟ್ಟಿನಲ್ಲಿ ಶಿಕ್ಷಣ ಸಾಗಲಿ ಎಂದು ಹಾರೈಸಿದರು.
ಎಸ್.ಜಿ.ಆರ್. ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲೆ ಮಮತಾ ಶಿವು ಮಾತನಾಡಿ, ಕಳೆದ 10 ವರ್ಷಗಳಲ್ಲಿ ಎಸ್.ಜಿ.ಆರ್. ಸಂಸ್ಥೆ ಬಡಮಕ್ಕಳನ್ನು ವಿದ್ಯಾಭ್ಯಾಸ ಪಡೆಯಲು ಹುರಿದುಂಬಿಸುತ್ತಿದೆ ಎಂದರು.
್ಡಹಿತೈಷಿಗಳ ಕೊಡುಗೆ: ಸಂಸ್ಥೆಯ ವ್ಯವಸ್ಥಾಪಕ ಬಿ. ಶಿವಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸಂಸ್ಥೆ ಬಡ ಹಾಗೂ ಮಧ್ಯಮ ವರ್ಗದ ಮಕ್ಕಳಿಗೆ ಹೊಸಕಾಲದ ಶಿಕ್ಷಣ ನೀಡಲು ಆದ್ಯತೆಯನ್ನು ಕಳೆದ 10 ವರ್ಷಗಳಿಂದಲೂ ನೀಡುತ್ತಿದೆ. ಇಂತಹ ಸಾಧನೆಗೆ ಶಿಕ್ಷಕರ ಹಾಗೂ ಹಿತೈಷಿಗಳ ಕೊಡುಗೆ ಬಹಳ ಇದೆ ಎಂದು ಸ್ಮರಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಮಧುಶ್ರಿ ಹಾಗು ಸಂತೋಷ್ ನೆರವೇರಿಸಿದರು. ಶಿಕ್ಷಕಿ ರೇಷ್ಮಾ ಸ್ವಾಗತಿಸಿದರು. ಶಿಕ್ಷಕಿ ದಿವ್ಯ ವಂದಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement