'ರೆಡ್ಕ್ರಾಸ್ ಸಂಸ್ಥೆ ಸಮಾಜಮುಖಿ'
ಹಾಸನ: ರಕ್ತದ ಅವಶ್ಯಕತೆ ಇರುವಂತರಿಗೆ ರೆಡ್ಕ್ರಾಸ್ ಸಂಸ್ಥೆಯು ರಕ್ತದಾನ ಮಾಡುವ ಮೂಲಕ ಸಮಾಜಮುಖಿ ಕೆಲಸ ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಹೇಳಿದರು.
ನಗರದ ಎಂ. ಕೃಷ್ಣ ಅಂಧ ಮಕ್ಕಳ ಶಾಲೆ ಬಳಿ ಜಿಲ್ಲಾ ರೆಡ್ಕ್ರಾಸ್ ಭವನದ ಶಂಕುಸ್ಥ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ರಕ್ತದ ಕೊರತೆಯಿಂದ ಅನೇಕ ಪ್ರಾಣಹಾನಿಯಾಗುತ್ತಿದೆ. ಅಂತವರ ಪ್ರಾಣವನ್ನು ಉಳಿಸುವಂತಹ ಉತ್ತಮ ಕೆಲಸವನ್ನು ರೆಡ್ಕ್ರಾಸ್ ಸಂಸ್ಥೆ ಮಾಡುತ್ತಿರುವುದು ಶ್ಲಾಘಿನೀಯ. ಈ ಸಂಸ್ಥೆ ಸಂಘಟಿತವಾಗಿ ಪ್ರಗತಿಪರ ಕೆಲಸ ಮಾಡಲಿ ಎಂದು ಅವರು ಹಾರೈಸಿದರು.
ರಕ್ತ ಶೇಖರಣೆ ಕೇಂದ್ರಗಳು ಹೆಚ್ಚಾಗಿದ್ದು, ಜಿಲ್ಲಾ ಕೇಂದ್ರದಲ್ಲಿ ಮಾತ್ರ ಇಂತಹ ರಕ್ತನಿಧಿ ಘಟಕ ಮಾಡಿದರೆ ಇತರೆ ತಾಲೂಕುಗಳಿಂದ ಇಲ್ಲಿಗೆ ಬಂದು ರಕ್ತ ಪಡೆಯುವುದು ಜನರಿಗೆ ಕಷ್ಟಕರ. ಪ್ರತಿ ತಾಲೂಕುಗಳಲ್ಲಿ ರಕ್ತನಿಧಿ ಕೇಂದ್ರಗಳು ಸ್ಥಾಪನೆಯಾಗಲಿ ಎಂದು ಅವರು ಕರೆ ನೀಡಿದರು.
ಭವನ ನಿರ್ಮಾಣ: ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ಮಾತನಾಡಿ, ಸಮಾಜದಲ್ಲಿ ಮಾಡಬೇಕಾಗಿರುವಂತಹ ಅಭಿವೃದ್ಧಿ ಕೆಲಸಗಳನ್ನು ಸರ್ಕಾರದ ಒಂದರಿಂದಲೇ ಮಾಡಲು ಸಾಧ್ಯವಿಲ್ಲ. ರೆಡ್ಕ್ರಾಸ್ ಸೇವಾ ಸಂಸ್ಥೆಗಳಂಥ ಅನೇಕ ಸಂಸ್ಥೆಗಳಿಂದಲೂ ಸಹ ಕೆಲಸಗಳು ಆಗುತ್ತಿದೆ. ರಕ್ತದಾನದ ಮಾಡುವುದಕ್ಕೆ ಮತ್ತು ಪಡೆಯುವುದಕ್ಕೆ ಕಾನೂನು ಇಲ್ಲ. ರಕ್ತಧಾನ ಮಾಡುತ್ತಿರುವ ಇಂತಹ ರೆಡ್ಕ್ರಾಸ್ ಸಂಸ್ಥೆಯ ಭವನಕ್ಕೆ ನಗರಾಭಿವೃದ್ಧಿ ಪ್ರಾಧಿಕಾರದಿಂದ, ನಗರಸಭೆ, ಎಂಎಲ್ಸಿ ಹಾಗೂ ಜಿಲ್ಲಾಡಳಿತ ಸೇರಿದಂತೆ ಸಹಾಯ ಲಭ್ಯವಾಗುತ್ತಿದೆ. ಮೊದಲ ಹಂತದ ಕಟ್ಟಕ್ಕೆ ರು. 25ರಿಂದ 30 ಲಕ್ಷ ವೆಚ್ಚದಲ್ಲಿ ಭವನ ನಿರ್ಮಾಣಗೊಳ್ಳಲಿದೆ ಎಂದರು.
ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆಯ ಮುಖ್ಯಸ್ಥ ಎಚ್.ಪಿ. ಮೋಹನ್ ಮಾತನಾಡಿ, ಕಳೆದ 20 ವರ್ಷಗಳಿಂದ ಜಿಲ್ಲಾ ರೆಡ್ಕ್ರಾಸ್ ಬಹಳ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದೆ. ಮೊದಲು ಯುವಕ- ಯುವತಿಯರಲ್ಲಿ ಜಾಗೃತಿ ಮಾಡಿಸುವ ಸಲುವಾಗಿ ಈಗಾಗಲೇ ನಾನಾ ಕಾಲೇಜುಗಳಲ್ಲಿ ರೆಡ್ಕ್ರಾಸ್ ಘಟಕ ಸ್ಥಾಪಿಸುವ ಮೂಲಕ ಉತ್ತಮ ಕೆಲಸ ಕಾರ್ಯಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮೊದಲು ಜಿಲ್ಲಾ ರೆಡ್ಕ್ರಾಸ್ ಭವನ ನಿರ್ಮಿಸಲು ಗುರುತಿಸಲಾಗಿರುವ ಜಾಗದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ರೆಡ್ಕ್ರಾಸ್ ಸಂಸ್ಥೆಯ ವೈಸ್ ಛೇರ್ಮನ್ ಹಾಗೂ ವೈದ್ಯ ಗುರುರಾಜ್ ಹೆಬ್ಬಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಶಾಮಲಾ ದೇವಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಶಂಕರ್, ರಾಜ್ಯ ಶಾಖೆ ಸದಸ್ಯ ಶಬ್ಬೀರ್ ಅಹಮದ್, ಎಚ್.ಎಂ. ಶಿವಣ್ಣ, ವೈ.ಎಸ್. ವೀರಭದ್ರಪ್ಪ, ಪ್ರಸನ್ನ ಎನ್.ರಾವ್, ಕೆಎಸ್ಆರ್ಟಿಎಸ್ ಡಿಸಿ ಜಿ.ಆರ್. ವೆಂಕಟೇಶ್ ಹಾಗೂ ಇತರರು ಇದ್ದರು.