ಶ್ರಮದಾನದ ಮೂಲಕ ಸ್ವಚ್ಛತೆ ಬಗ್ಗೆ ಅರಿವು
ಹಾಸನ: ನಗರದ ಸರ್ಕಾರಿ ಕಲಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಕಂಚಮಾರನಹಳ್ಳಿ ಗ್ರಾಮದಲ್ಲಿ ನಡೆಯುತ್ತಿದ್ದು, ಇತ್ತೀಚೆಗೆ ಮೈಸೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮದ ಸಂಯೋಜನಾಧಿಕಾರಿ ಹಾಗೂ ಪ್ರಶಿಕ್ಷಣಾಧಿಕಾರಿ ಡಾ.ಕೆ. ಕಾಳಚನ್ನೇಗೌಡ ಶಿಬಿರಕ್ಕೆ ಭೇಟಿ ನೀಡಿದ್ದರು.
ಶಿಬಿರದಿಂದಾಗುವ ಪ್ರಯೋಜನಗಳನ್ನು ತಿಳಿಸುತ್ತಾ, ಶ್ರಮದಾನದ ಮೂಲಕ ಜನರಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಬೇಕೆಂದು ಮಾರ್ಗದರ್ಶನ ಮಾಡಿದರು.
ವಿಷಾದ: ಗ್ರಾಮೀಣ ಬದುಕು ಮತ್ತು ಜನಪದ ಸಾಹಿತ್ಯ ವಿಷಯ ಆಧರಿಸಿ ವಿಶೇಷ ಉಪನ್ಯಾಸ ನೀಡಿದ ಎ.ವಿ.ಕೆ. ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕ ಡಾ. ಹೆಚ್.ಎಲ್. ಮಲ್ಲೇಶಗೌಡ ಮಾತನಾಡಿ, ಉಪನ್ಯಾಸದಲ್ಲಿ, ನಾವು ಹಳ್ಳಿಗಳನ್ನು ನಿರ್ಲಕ್ಷಿಸುತ್ತಾ, ಹಳ್ಳಿಗಾಡಿನ ಸೊಗಡನ್ನು ಹಾಳು ಮಾಡುತ್ತಿದ್ದೇವೆ. ಗ್ರಾಮೀಣ ಬದುಕು ಒಬ್ಬ ಮನುಷ್ಯನನ್ನು ಸದೃಢನನ್ನಾಗಿಸುತ್ತದೆ ಹಾಗೂ ಹಳ್ಳಿಗಳು ಭೌತಿಕವಾಗಿ ಅಭಿವೃದ್ಧಿ ಹೊಂದಿವೆ. ಆದರೆ, ಭಾವನಾತ್ಮಕವಾಗಿ ಬದಲಾಗಿವೆ ಎಂದರು. ಜಾನಪದ ಹಬ್ಬಗಳ ಸೊಗಡನ್ನು ಸ್ಮರಿಸುತ್ತಾ, ನಶಿಸುತ್ತಿರುವ ಹಬ್ಬಗಳ ಆಚರಣೆಯ ಬಗ್ಗೆ ವಿಷಾದಿಸಿದರು.
ಬದುಕು ಹಸನು: ಕಂಚಮಾರನಹಳ್ಳಿಯ ಸ್ಪಂದನ ಸಂಸ್ಥೆಯ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, ಯುವ ಜನರು ಈಗಿನಿಂದಲೇ ತಮ್ಮ ಬದುಕಿನ ಬಗ್ಗೆ ಜವಾಬ್ದಾರಿ ಹೊಂದಿದರೆ ತಮ್ಮ ಮುಂದಿನ ಬದುಕು ಹಸನಾಗುತ್ತದೆಂದು ತಿಳಿಸಿದರು.
ಕಿವಿಮಾತು: ಕಾಲೇಜಿನ ಭೂಗೋಳಶಾಸ್ತ್ರದ ವಿಭಾಗದ ಮುಖ್ಯಸ್ಥ ಸೋಮಶೇಖರ ದೇಸಾಯಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನಾ ಶಿಬಿರಾರ್ಥಿಗಳಿಗೆ ಇಂತಹ ಕಾರ್ಯಕ್ರಮಗಳು ನಿಮ್ಮ ಪ್ರತಿಭೆಯನ್ನು ಹೊರಹಾಕಲು ಇದೊಂದು ಸುಸಂದರ್ಭ ಎಂದು ಹೇಳದರು. ಆನಂತರ ವ್ಯಕ್ತಿಗಳು ತಮ್ಮ ತನವನ್ನು ತಾನು ಕಳೆದುಕೊಳ್ಳಬಾರದೆಂದು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ವಾಣಿಜ್ಯಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಹೆಚ್.ಎಸ್. ರಮೇಶ್, ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾಧಿಕಾರಿ ರಮೇಶ್, ಸಹ ಶಿಬಿರಾಧಿಕಾರಿ ಸಿ.ಆರ್. ನಿಂಗರಾಜು ಹಾಗೂ ಸಹ ಶಿಬಿರಾಧಿಕಾರಿ ಪದ್ಮಾವತಿ, ಗ್ರಾಮದ ಮುಖಂಡರು ಇದ್ದರು. ಶಿಬಿರಾರ್ಥಿಯಾದ ಮೋಹನ್ ಸ್ವಾಗತಿಸಿ, ಹರೀಶ್ ವಂದಿಸಿದರು. ಶಿಬಿರಾರ್ಥಿ ಯೋಗೇಶ್ವರಿ ಪ್ರಾರ್ಥಿಸಿದರು.