ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಆಲೂರು: ಬರಪೀಡಿತ ತಾಲೂಕು ಎಂದು ಘೋಷಿಸಿ'

Vishwanath S
Updated On : 7 Feb 2014, 12:51 pm

ಆಲೂರು: ಆಲೂರು ತಾಲೂಕನ್ನು ಬರ ಪೀಡಿತವೆಂದು ಘೋಷಿಸುವಂತೆ ಸರ್ಕಾರವನ್ನು ಒತ್ತಾಯಿಸುವುದಾಗಿ ಶಾಸಕ ಕುಮಾರ ಸ್ವಾಮಿ ತಿಳಿಸಿದ್ದಾರೆ.
ತಾಪಂ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೇಸಿಗೆ ಕಾಲ ಆರಂಭವಾಗಿದ್ದು ಬೇಸಿಗೆ ಬೆಳಗ್ಗೆ ವಾಟೆಹೊಳೆ ಜಲಾಶಯದಿಂದ ಫೆ. 10 ರಿಂದ ಹತ್ತು ದಿನಗಳಿಗೊಮ್ಮೆಯಂತೆ ನಾಲೆಗಳಿಗೆ ನೀರು ಬಿಡುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಕುಡಿಯುವ ನೀರಿಗೆ ಹಲವಾರು ಗ್ರಾಮಗಳಲ್ಲಿ ಸಮಸ್ಯೆ ತಲೆದೋರಿದೆ. ಅಂತರ್ಜಲ ಮಟ್ಟ ಕುಸಿದ ಪರಿಣಾಮ 11 ಕಿರು ನೀರು ಸರಬರಾಜು ಕೊಳವೆ ಬಾವಿಗಳು ಬತ್ತಿಹೋಗಿದ್ದು, ಅಂತಹ ಗ್ರಾಮಗಳಲ್ಲಿ ಪುನಃ ಕೊಳವೆ ಬಾವಿಗಳನ್ನು ಕೊರೆಸಲಾಗಿವುದು ತಾಲೂಕಿನಾದ್ಯಂತ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳನ್ನು ಗುರ್ತಿಸಿ ಗ್ರಾಮಸ್ಥರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಮುಂಜಾಗ್ರತೆ ಕ್ರಮ: ಕೆಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಇಲ್ಲದೇ, ಕಿರಿ ನೀರು ಸರಬರಾಜು ಕೇಂದ್ರಗಳು ಪ್ರಾರಂಭವಾಗಿಲ್ಲ. ಅಂತಹ ಗ್ರಾಮಗಳಿಗೆ ತ್ವರಿತ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಸೆಸ್ಕ್ ಅಧಿಕಾರಿಗಳಿಗೆ ಸೂಚಿಸಿದರು. ಬೇಸಿಗೆಯಲ್ಲಿ ಟ್ರಾನ್ಸ್‌ಫಾರ್ಮರ್‌ಗಳಸಮಸ್ಯೆ ಉದ್ಭವಿಸಿದ್ದು ಇದಕ್ಕೆ ಬೇಕಾದ ಮುಂಜಾಗ್ರತೆ ಕೈಗೊಳ್ಳುವಂತೆ ತಿಳಿಸಿದರು.
ಕಿರು ನೀರು ಸರಬರಾಜು ಬಾವಿಗಳಿಗೆ ಅಳವಡಿಸಿರುವ ಆಟೋ ಸ್ಟಾರ್ಟರ್‌ಗಳನ್ನು ಬದಲಿಸಿ ಮಾಮೂಲಿ ಸ್ಟಾರ್ಟರ್‌ಗಳನ್ನು ಅಳವಡಿಸುವಂತೆ ಸೂಚಿಸಿದರು.
ಶಿಕ್ಷಣಾಧಿಕಾರಿಗಳಿಗೆ ಸೂಚನೆ: ಮಗ್ಗೆ ಗ್ರಾಮದಲ್ಲಿ ಇಡಿ ತಾಲೂಕಿಗೆ ಒಂದೇ ಒಂದುವಿದ್ಯುತ್ ವಿತರಣಾ ಕೇಂದ್ರವಿದ್ದು ಬೈರಾಪುರದಲ್ಲಿ ಶೀಘ್ರ ವಿತರಣಾ ಕೇಂದ್ರವನ್ನು ಪ್ರಾರಂಭಿಸಲಾಗುವುದು. ತಾಲೂಕಿನಲ್ಲಿ 8 ಶಾಲೆಗಳಲ್ಲಿ ಶಿಕ್ಷಕರಿಲ್ಲದೆ ಶಾಲೆ ಮುಚ್ಚುವಂತಾಗಿದೆ ತಕ್ಷಣ ಅಂತಹ ಶಾಲೆಗಳಿಗೆ ಶಿಕ್ಷಕರನ್ನು ನೇಮಿಸುವಂತೆ ಶಿಕ್ಷಣಾಧಿಕಾರಿಗೆ ಸೂಚಿಸಿದರು.
10ರಿಂದ ಕಾರ್ಯಾಚರಣೆ: ಕಳೆದ ಬಾರಿ ಕಾಡಾನೆ ಹಿಡಿದ ಸಂದರ್ಭದಲ್ಲಿ ಆದ ಖರ್ಚು ವೆಚ್ಚದ ಮಾಹಿತಿಯನ್ನು ನೀಡುವಂತೆ ಅರಣ್ಯಾಧಿಕಾರಿಗೆ ತಿಳಿಸಿದರು ಶೀಘ್ರ ಕಾಡಾನೆಗಳನ್ನು ಹಿಡಿಯುವ ಕಾರ್ಯಾ ಪ್ರಾರಂಭಿಸುವಂತೆ ಸದನದಲ್ಲಿ ಒತ್ತಾಯಿಸಿದ್ದು, ಅರಣ್ಯ ಸಚಿವರು ಫೆ.5ರಿಂದ ಕಾರ್ಯಾಚರಣೆ ಪ್ರಾರಂಭಿಸುವುದಾಗಿ ತಿಳಿಸಿದ್ದರು. ಆದರೆ ಕಾರಣಾಂತರಗಳಿಂದ ಫೆ.10ರಿಂದ ಕಾರ್ಯಾಚರಣೆ ಪ್ರಾರಂಭಿಸಲಾಗುವುದೆಂದು ಡಿಎಫ್‌ಓ ತಿಳಿಸಿದ್ದಾರೆ.
ಕ್ರಮಕ್ಕೆ ಸೂಚನೆ: ಕಾಲು ಬಾಯಿ ಜ್ವರದಿಂದ ಈಗಾಗಲೇ 2 ರಾಸುಗಳು ಮೃತಪಟ್ಟಿದ್ದು, ಲಸಿಕಾ ಕಾರ್ಯಕ್ರಮವನ್ನು ಫೆ.15 ರಿಂದ ಪ್ರಾರಂಭಿಸುವಂತೆ ಪಶುವೈದ್ಯರಿಗೆ ತಿಳಿಸಿದರು. ಕೃಷಿ ಹಾಗೂ ತೋಟಗಾರಿಕೆ ಇಲಾಖೆಯಲ್ಲಿ ರೈತರಿಗೆ ತರಬೇತಿ ಕಾಯಾಗಾರಗಳನ್ನು ಆಯೋಜಿಸಿ ಸರ್ಕಾರಿ ಸವಲತ್ತುಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಕ್ರಮ ಕೈಗೊಳ್ಳಲು ತಿಳಿಸಿದರು.
ಜಿಪಂ ಸದಸ್ಯ ಪುರುಷೋತ್ತಮ್, ತಾಪಂ ಅಧ್ಯಕ್ಷೆ ಯಶೋಧ ಹರೀಶ್, ತಾಪಂ ಮುಖ್ಯಾಧಿಕಾರಿ ಚಂದ್ರಶೇಖರ್ ಹಾಗೂ ಎಲ್ಲಾ ಇಲಾಖೆಯ ಅಧಿಕಾರಿಗಳು ವರದಿ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement