ನರಭಕ್ಷಕ ಚಿರತೆ ಹಿಡಿಯಿರಿ
ಹಾಸನ: ಚಿರತೆ ದಾಳಿಯಿಂದ ಬಾಲಕ ತೇಜಸ್ ಸಾವಿಗೀಡಾದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಬಾಲಕನ ಕುಟುಂಬ ಹಾಗೂ ಶಾಂತಿಗ್ರಾಮ ಹೋಬಳಿಯ ಸುತ್ತಲಿನ ಜನತೆ, ಗುರುವಾರ ಚಿರತೆ ಹಾವಳಿ ಸಮಸ್ಯೆಯಿಂದ ತಮ್ಮನ್ನು ಪಾರುಮಾಡುವಂತೆ ಮೃತ ಬಾಲಕನ ಶವವನ್ನಿಟ್ಟು ಧರಣಿ ನಡೆಸಿದರು.
ಚಿರತೆಯನ್ನು ಹಿಡಿಯಬೇಕು ಅಥವಾ ಅದನ್ನು ಕೊಲ್ಲಬೇಕು ಎಂದು ಆಗ್ರಹಿಸಿದ ಗ್ರಾಮಸ್ಥರು, ಈ ಭಾಗದಲ್ಲಿ ಚಿರತೆ ಕಾಟ ಜಾಸ್ತಿಯಾಗಿದ್ದು, ಜನರು ಭೀತಿಯಿಂದ ಜೀವಿಸುವಂತಾಗಿದೆ ಎಂದು ದೂರಿದ ಗ್ರಾಮಸ್ಥರು, ಬಾಲಕನ ಶವ ಪತ್ತೆಯಾದ ನಂತರ ಗ್ರಾಮಸ್ಥರು ಶವ ಇಟ್ಟುಕೊಂಡು ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಶಾಸಕರು ಬರಬೇಕು ಎಂದು ಪಟ್ಟು ಹಿಡಿದರು. ಅಧಿಕಾರಿಗಳು ಸ್ಥಳಕ್ಕಾಗಮಿಸುವವರೆಗೂ ಶವ ತೆಗೆಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ತೇಜಸ್ ಬುಧವಾರ ಸಂಜೆ ತಂದೆ ಅಣ್ಣೇಗೌಡರೊಂದಿಗೆ ಜಮೀನಿನಲ್ಲಿ ಇದ್ದ ಸಂದರ್ಭದಲ್ಲಿ ದಾಳಿ ನಡೆಸಿದ ಚಿರತೆ ಬಾಲಕನನ್ನು ಹೊತ್ತೊಯ್ದಿತ್ತು. ಆ ಸಂದರ್ಭದಲ್ಲಿ ಚಿರತೆಯಿಂದ ಮಗುವನ್ನು ಬಿಡಿಸಲು ಹಿಂಬಾಲಿಸಿದ್ದರು. ಆದರೆ ಚಿರತೆ ಯಾರಿಗೂ ಕಾಣದಂತೆ ಬಾಲಕನನ್ನು ಹೊತ್ತುಕೊಂಡು ಹೋಗಿ ನಾಪತ್ತೆಯಾಗಿತ್ತು. ಆ ಸಂದರ್ಭದಲ್ಲಿ ಅರಣ್ಯ ಇಲಾಖೆ ಹಾಗೂ ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ಬಾಲಕನನ್ನು ಹುಡುಕಿದ್ದರೂ ಬಾಲಕ ಪತ್ತೆಯಾಗಿರಲಿಲ್ಲ. ಮತ್ತೆ ಬಾಲಕನನ್ನು ಪತ್ತೆ ಹಚ್ಚಲು ಗುರುವಾರ ಬೆಳಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಕಾರ್ಯಾಚರಣೆಯನ್ನು ಮುಂದುವರೆಸಿದ್ದರು. ಬಾಲಕನ ರಕ್ತದ ಗುರುತನ್ನು ಹಿಂಬಾಲಿಸಿಕೊಂಡು ಹೋದಾಗ ಅಣ್ಣೇಗೌಡರ ಪಕ್ಕದ ಜಮೀನಿನ ಪೊದೆಯೊಳಗೆ ಚಿರತೆ ತಿಂದು ಹಾಕಿದ್ದ ಬಾಲಕನ ಮೃತದೇಹ ಪತ್ತೆಯಾಗಿತ್ತು.
ಚಿರತೆಯ ಚಲನವಲನ ಪತ್ತೆಯಾಗಿದ್ದು, ಅದು ಒಂದೆರಡು ಬಾರಿ ಕಣ್ಣಿಗೆ ಕಾಣಿಸಿಕೊಂಡಿದೆ. ಚಿರತೆಯನ್ನು ಹಿಡಿಯಲು ಸಲಕರಣೆಯೊಂದಿಗೆ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಜೀವಂತವಾಗಿ ಹಿಡಿಯಲು ಕ್ರಮಕೈಗೊಳ್ಳಲಾಗುತ್ತಿದೆ.
- ಅಪ್ಪುರಾವ್, ಉಪ ಅರಣ್ಯ ಸಂರಕ್ಷಣಾಧಿಕಾರಿ
ಮತ್ತೆ ಇಬ್ಬರ ಮೇಲೆ ದಾಳಿ
ಏತನ್ಮಧ್ಯೆ, ಬಾಲಕ ತೇಜಸ್ನನ್ನು ಎಳೆದೊಯ್ದು ತಿಂದು ಹಾಕಿ ಭೀತಿಯ ವಾತಾವರಣ ಸೃಷ್ಟಿಸಿರುವ ಚಿರತೆ, ಗುರುವಾರ ಮತ್ತಿಬ್ಬರ ಮೇಲೆ ದಾಳಿ ಮಾಡುವ ಮೂಲಕ ಶಾಂತಿಗ್ರಾಮ ಹೋಬಳಿಯ ಸುತ್ತಲಿನ ಜನ ಭಯದಿಂದ ಜೀವಿಸುವಂತೆ ಮಾಡಿದೆ. ಚಿರತೆ ಇರುವ ಜಾಗವನ್ನು ಪತ್ತೆಹಚ್ಚುವ ಸಂದರ್ಭದಲ್ಲಿ ಜನರ ಕಣ್ಣಿಗೆ ಒಂದೆರಡು ಬಾರಿ ಕಾಣಿಸಿಕೊಂಡಿದೆ. ಜನರ ದಟ್ಟಣೆ ಹೆಚ್ಚಾಗಿದ್ದರಿಂದ ಗಾಬರಿಗೊಂಡ ಚಿರತೆ ಜನಗಳತ್ತ ನುಗ್ಗಿ ಇಬ್ಬರ ಮೇಲೆ ದಾಳಿ ನಡೆಸಿದೆ ಎನ್ನಲಾಗಿದೆ. ಮತ್ತೆ ಆ ಚಿರತೆ ಅಲ್ಲಿಂದ ನಾಪತ್ತೆಯಾಗಿದೆ.
ಹಳ್ಳಿಗಳಲ್ಲೂ ತಂದೆ, ತಾಯಿಯರು ವೃದ್ಧಾಶ್ರಮಕ್ಕೆ: ವಿಷಾದ
ಹಾಸನ: ಇತ್ತೀಚಿಗೆ ನಗರ ಪ್ರದೇಶಗಳಲ್ಲದೇ, ಗ್ರಾಮೀಣ ಪ್ರದೇಶಗಳಲ್ಲೂ ತಂದೆ-ತಾಯಿಯರನ್ನು ವೃದ್ಧಾಶ್ರಮಕ್ಕೆ ಸೇರಿಸುವುದು ಹೆಚ್ಚಾಗಿ ಕಂಡುಬರುತ್ತಿದೆ ಎಂದು ವಕೀಲ ಎಂ.ಟಿ. ತಿಮ್ಮೇಗೌಡ ವಿಷಾದಿಸಿದರು.
ನಗರದ ಸರ್ಕಾರಿ ಕಲಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ತಾಲೂಕಿನ ಕಂಚಮಾರನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವಾರ್ಷಿಕ ವಿಶೇಷ ಶಿಬಿರದಲ್ಲಿ ಜೀವನಾಂಶ ಮತ್ತು ಆಸ್ತಿಯ ಹಕ್ಕು ಎಂಬ ವಿಷಯ ಆದರಿಸಿ ವಿಶೇಷ ಉಪನ್ಯಾಸ ನೀಡಿದ ಅವರು, ತಂದೆ, ತಾಯಿಯನ್ನು ಪೋಷಿಸುವುದು ಮಕ್ಕಳ ಆದ್ಯ ಕರ್ತವ್ಯ ಎಂದು ಹೇಳಿದರು.
ಜೀವನಾಂಶ ಎಂದರೆ ಮನುಷ್ಯ ತನ್ನ ಜೀವನ ಮತ್ತು ಬದುಕಿನ ರಕ್ಷಣೆಯನ್ನು ಮಾಡಿಕೊಳ್ಳುವುದೇ ಜೀವನಾಂಶ ಎಂದ ಅವರು, ಜೀವನಾಂಶವನ್ನು ಒಬ್ಬ ವ್ಯಕ್ತಿ ತನ್ನ ತಂದೆ, ತಾಯಿಗೆ, ಹೆಂಡತಿಗೆ ಮತ್ತು ಮಕ್ಕಳಿಗೆ ಜೀವನ ಮತ್ತು ಬದುಕಿನ ರಕ್ಷಣೆಯನ್ನು ನೀಡದಿದ್ದಾಗ, ಅವರು ಜೀವನಾಂಶ ಪಡೆದುಕೊಳ್ಳಬಹುದು ಮತ್ತು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯ ಮೇಲೆ ಹಕ್ಕಿರುತ್ತದೆಯೇ ಹೊರತು ಸ್ವಯಾರ್ಜಿತ ಆಸ್ತಿಯ ಮೇಲಲ್ಲ. ಎಂದು ತಿಳಿಸಿದರು.
ಆನಂತರ, ಗ್ರಾಮಸ್ಥರು ಕೇಳಿದ ಸಮಸ್ಯೆಗಳನ್ನು ಪರಿಹರಿಸಿದರು.
ಕನ್ನಡ ಸಹ ಪ್ರಾಧ್ಯಾಪಕ ಶಿವಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಸ್ತಿಗೋಸ್ಕರ ಸಂಘರ್ಷದ ಬದುಕನ್ನು ನಡೆಸದೇ, ವಿದ್ಯೆಯ ಮೂಲಕ ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕೆಂದು ತಿಳಿಸಿದರು.