ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ನಾನಾ ಬೇಡಿಕೆಗಳಿಗಾಗಿ ಜೈನ ಸಂಘ, ಕಾಂಗ್ರೆಸ್ ಪ್ರತಿಭಟನೆ

Vishwanath S
Updated On : 7 Feb 2014, 12:52 pm

ಹಾಸನ: ನಗರದಲ್ಲಿ ಗುರುವಾರ ನಾನಾ ಬೇಡಿಕೆಗಳನ್ನು ಈಡೇರಿಸುಂತೆ ಆಗ್ರಹಿಸಿ ಪ್ರತ್ಯೇಕವಾಗಿ ಹಾಸನ ಜೈನ ಸಂಘ ಹಾಗೂ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಕಾರರು ನಗರದ ಹೇಮಾವತಿ ಪ್ರತಿಮೆಯಿಂದ ಮೆರಣಿಗೆ ಪ್ರಾರಂಭಿಸಿ ಎನ್.ಆರ್. ವೃತ್ತ, ಬಿ.ಎಂ.ರಸ್ತೆಯ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಬಂದು ಕೆಲ ಸಮಯ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಜೈನ ಸಂಘಗಳ ಪ್ರತಿಭಟನೆ: ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಅಂಗಡಿ ಗ್ರಾಮದ ಜೈನ ಬಸದಿಯಲ್ಲಿ ಜೈನ ತೀರ್ಥಂಕರ ಮೂರ್ತಿಗಳ ಕಳವನ್ನು ಪತ್ತೆ ಹಚ್ಚಿ ಜೈನ ಬಸದಿಗಳಿಗೆ ಸೂಕ್ತ ಭದ್ರತೆ ನೀಡಬೇಕು ಎಂದು ಆಗ್ರಹಿಸಿ ಜೈನ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕಳವು ಪ್ರಕರಣಗಳಿಂದ ಆತಂಕ: ಇತಿಹಾಸ ಪ್ರಸಿದ್ಧ ಹೊಯ್ಸಳ ವಂಶದ ಉಗಮ ಸ್ಥಾನವಾದ ಅಂಗಡಿ ಗ್ರಾಮದಲ್ಲಿ ಜೀರ್ಣೋದ್ಧಾರ ಹಂತದಲ್ಲಿ ಎರಡು ಜೈನ ಬಸದಿಗಳಲ್ಲಿದ್ದ 900 ವರ್ಷಗಳ ಪ್ರಾಚೀನವಾದ ನಾಲ್ಕು ತೀರ್ಥಂಕರರ ಮೂರ್ತಿಗಳನ್ನು ಕೆಲ ದಿವಸಗಳ ಹಿಂದೆ ಕಳವು ಮಾಡಲಾಗಿದೆ. ತಿಂಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆ ಜೈನ ಕ್ಷೇತ್ರದಲ್ಲಿ ಕೋಟ್ಯಾಂತರ ರು. ಬೆಲೆ ಬಾಳುವ ವಿಗ್ರಹ ಕಳುವು ಆಗಿದ್ದು, ಅದೃಷ್ಟವಶಾತ್ ವಿಗ್ರಹಗಳು ಮತ್ತೆ ದೊರಕಿವೆ. ಈ ಘಟನೆ ಮುನ್ನವೇಮತ್ತೊಂದು ಕಳವು ಪ್ರಕರಣ ಆಗಿತ್ತು. ಈ ಘಟನೆಗಳಿಂದಾಗಿ ಜೈನಧರ್ಮೀಯರಲ್ಲಿ ಆಘಾತ ಮಾಡಿದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.
ಮನವಿ: ಸಂಬಂಧಪಟ್ಟ ಇಲಾಖೆಯಿಂದ ಶೀಘ್ರವೇ ಕ್ರಮಕೈಗೊಂಡು ಕಳುವಾಗಿರುವ ಪ್ರಾಚೀನ ವಿಗ್ರಹಗಳನ್ನು ಪತ್ತೆಹಚ್ಚಿಕೊಡಬೇಕು ಹಾಗೂ ಅಲ್ಪಸಂಖ್ಯಾತರಾದ ಜೈನ ಸಮುದಾಯದವರ ಬಸದಿಗಳಲ್ಲಿ ಆಗಾಗ್ಗೆ ನಡೆಯುತ್ತಿರುವ ಇಂತಹ ಕಳವು ಪ್ರಕರಣ ಮರುಕಳಿಸದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಜೈನ ಸಂಘದ ಅಧ್ಯಕ್ಷ ಅಜಿತ್ ಕುಮಾರ್, ಕಾರ್ಯದರ್ಶಿ ಎಚ್.ಎಸ್. ಸುರೇಶ್ ಹಾಗೂ ಇತರರು ಇದ್ದರು.
ಕಾಂಗ್ರೆಸ್ ಪ್ರತಿಭಟನೆ: ನಗರಸಭೆ ಆಯುಕ್ತ ಕೃಷ್ಣಮೂರ್ತಿಗೆ ಅವರಿಗೆ ಶಾಸಕ ಎಚ್.ಡಿ. ರೇವಣ್ಣ ಬೆದರಿಕೆ ಹಾಕಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಕರ್ತವ್ಯಕ್ಕೆ ಅಡ್ಡಿ: ನಗರಸಭೆ ಆಯುಕ್ತ ಕೃಷ್ಣಮೂರ್ತಿ ಅವರಿಗೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ ದೂರವಾಣಿ ಮೂಲಕ ಧಮಕಿ ಹಾಕಿ ವರ್ಗಾವಣೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಜೊತೆಗೆ ನಗರಸಭೆ ಕೆಲ ಸದಸ್ಯರು ಸೇರಿ ಆಯುಕ್ತರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ನಗರಕ್ಕೆ ವರ್ಗಾವಣೆಗೊಂಡು ಬಂದಿರುವ ಆಯುಕ್ತರು ನಗರಸಭೆಯಲ್ಲಿ ದಕ್ಷ ಆಡಳಿತಗಾರರಾಗಿದ್ದಾರೆ. ಇಂತಹ ಅಧಿಕಾರಿಗಳಿಗೆ ಬೆದರಿಕೆ ಹಾಕುವ ಮೂಲಕ ಕರ್ತವ್ಯಕ್ಕೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ಕಾರ್ಯಕರ್ತರು ಆರೋಪಿಸಿದರು.
ಈ ಘಟನೆ ಬಗ್ಗೆ ತಕ್ಷಣ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಎಚ್. ನಾರಾಯಣಗೌಡ, ಮುಖಂಡರಾದ ಮಹಂತೇಶ್, ವಿಜಯಕುಮಾರ್, ಮುಬ್ಬಶೀರ್ ಅಹಮದ್, ನಗರಸಭೆ ಸದಸ್ಯ ಯಶವಂತ್, ತಂಬ್ಲಪುರ ಗಣೇಶ್ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement