ಮೂಲ ಸವಲತ್ತು ಒದಗಿಸಲು ಒತ್ತಾಯ
ಸಕಲೇಶಪುರ: ಸಾರಿಗೆ, ವಿದ್ಯುತ್, ರಸ್ತೆ ಹಾಗೂ ಕಾಡಾನೆ ಸಮಸ್ಯೆಗಳ ಬಗ್ಗೆ ಹೆತ್ತೂರು ಗ್ರಾಪಂ ಅವರಣದಲ್ಲಿ ನಡೆದ ಹೋಬಳಿ ಮಟ್ಟದ ಜನಸಂಪರ್ಕ ಸಭೆಯಲ್ಲಿ ಪ್ರಮುಖವಾಗಿ ಚರ್ಚೆ ನಡೆಸಲಾಯಿತು.
ಪಶ್ಚಿಮಘಟ್ಟಕ್ಕೆ ಹೊಂದಿಕೊಂಡಿರುವ ಹೆತ್ತೂರು ಹೋಬಳಿಯಲ್ಲಿ ಬಹುತೇಕ ಜಿಪಂ ಹಾಗೂ ಲೋಕೋಪಯೋಗಿ ರಸ್ತೆಗಳು ಆಧೋಗತಿಗೆ ಇಳಿದಿದ್ದು, ವಾಹನ ಸಂಚಾರ ದುಸ್ತರವಾಗಿದೆ. ಈ ನಿಟ್ಟಿನಲ್ಲಿ ಶೀಘ್ರವೇ ದುರಸ್ತಿ ಕಾರ್ಯ ಆರಂಭಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು. ಹೋಬಳಿಯಲ್ಲಿ ವಿದ್ಯುತ್ ಸೌಲಭ್ಯ ಮರೀಚಿಕೆಯಾಗಿದೆ. ಒಮ್ಮೆ ವಿದ್ಯುತ್ ಹೋದರೆ ವಾರವಾದರೂ ದುರಸ್ತಿಯಾಗುವುದಿಲ್ಲ. ಈ ಹೋಬಳಿಯಲ್ಲಿ ತಲೆಮಾರುಗಳ ಹಿಂದೆ ಹಾಕಲಾಗಿರುವ ವಿದ್ಯುತ್ ಪರಿವರ್ತಕಗಳಿಗೆ ಇಂದಿಗೂ ಇದ್ದು, ವಿದ್ಯುತ್ ವ್ಯತ್ಯಯಕ್ಕೆ ಇವೇ ಪ್ರಮುಖ ಕಾರಣವಾಗಿದೆ ಎಂದು ಆರೋಪಿಸಿದರು.
ಶಾಸಕ ಎಚ್.ಕೆ. ಕುಮಾರಸ್ವಾಮಿ ಮಾತನಾಡಿ, ಸರ್ಕಾರ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಬಿಡುಗಡೆ ಮಾಡದಿರುವುದೇ ಈ ಎಲ್ಲಾ ಸಮಸ್ಯೆಗಳಿಗೆ ಕಾರಣವಾಗಿದೆ. ಭೌಗೋಳಿಕ ವ್ಯಾಪ್ತಿಗೆ ಅನುಗುಣವಾಗಿ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿದರೆ ಸಮಸ್ಯೆಗಳು ಬಗೆಹರಿಸಲು ಸಾಧ್ಯ. ಈಗಾಗಾಲೇ ಹೆತ್ತೂರು ಹೋಬಳಿಯಲ್ಲಿ ಹಾದು ಹೋಗಿರುವ ಜನ್ನಾಪುರ-ವಣಗೂರು, ಯಸಳೂರು-ಹೆತ್ತೂರು ಮುಖ್ಯರಸ್ತೆ ಅಭಿವೃದ್ಧಿಗೆ ಚಾಲನೆ ದೊರೆತ್ತಿದ್ದು ಇನ್ನೂ ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭವಾಗಲಿದೆ. ಚಿಕ್ಕಮಗಳೂರು ವಿಭಾಗಕ್ಕೆ ಸಕಲೇಶಪುರ ಸಾರಿಗೆ ಘಟಕ ಸೇರ್ಪಡೆಯಾಗಿರುವುದರಿಂದ ಸಾರಿಗೆ ಬಸ್‌ಗಳು ದುಸ್ಥಿತಿಗೆ ಈಡಾಗಿವೆ. ಈ ಬಗ್ಗೆ ಸಾರಿಗೆ ಸಚಿವರೊಂದಿಗೆ ಮಾತನಾಡಿದ್ದು, ಶೀಘ್ರವೇ ಸ್ಥಳೀಯ ಸಾರಿಗೆ ಘಟಕವನ್ನು ಹಾಸನ ವಿಭಾಗಕ್ಕೆ ಸೇರ್ಪಡೆಗೊಳಿಸುವ ಭರವಸೆ ನಿಡಿದ್ದಾರೆ ಎಂದರು.
ಹೆತ್ತೂರು ಗ್ರಾಪಂ ಅಧ್ಯಕ್ಷ ಕೃಷ್ಣಪ್ಪ, ಜಿಪಂ ಸದಸ್ಯ ಬೈರಮುಡಿ ರಾಮಚಂದ್ರು, ತಾಪಂ ಸದಸ್ಯ ಮಂಜುನಾಥ್, ತಹಸೀಲ್ದಾರ್ ಪಾರ್ವತಿ, ವೃತ್ತ ನಿರೀಕ್ಷಕ ಗುರುರಾಜ್ ಮತ್ತಿತರರು ಉಪಸ್ಥಿತರಿದ್ದರು.