13ರಿಂದ ರಾಜ್ಯಮಟ್ಟದ ಶೈಕ್ಷಣಿಕ ಹಬ್ಬ: ನೊಂದಣಿಗೆ ಅರ್ಜಿ ಆಹ್ವಾನ
ಹಾಸನ: 12 ನೇ ರಾಜ್ಯಮಟ್ಟದ ಶೈಕ್ಷಣಿಕ ಹಬ್ಬವನ್ನು ಫೆ. 13 ಮತ್ತು 14ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ರಾಜ್ಯ ಭಾರತ ಜ್ಞಾನ ವಿಜ್ಞಾನ ಸಮಿತಿಯ ಆಯೋಜಿಸಿದೆ ಎಂದು ಜಿಲ್ಲಾ ಕಾರ್ಯದರ್ಶಿ ಗೋಪಾಲಕೃಷ್ಣ ತಿಳಿಸಿದ್ದಾರೆ.
ಪ್ರತಿನಿಧಿಗಳು ಭಾಗಿ: ಎರಡು ದಿನ ನಡೆಯುವ ಈ ಹಬ್ಬಕ್ಕೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ 1500 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದು, ಈ ಶೈಕ್ಷಣಿಕ ಹಬ್ಬದಲ್ಲಿ ಶಿಕ್ಷಣ ಹಕ್ಕು ಕಾಯ್ದೆಯ ಜಾರಿ, ಕರ್ನಾಟಕದ ಶೈಕ್ಷಣಿಕ ಸ್ಥಿತಿಗತಿಗಳು ಹಾಗೂ ಸುಧಾರಣೆ, ಶಿಕ್ಷಣ ಮತ್ತು ವೈಚಾರಿಕತೆ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ, ನಿರಂತರ ಕಲಿಕೆ ಮತ್ತು ನಿರಂತರ ಮೌಲ್ಯಮಾಪನ, ಹವಮಾನ ಬದಲಾವಣೆಯಂತಹ ಜ್ವಲಂತ ವಿಷಯಗಳ ಮೇಲೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸುತ್ತಿದೆ ಎಂದು ಹೇಳಿದ್ದಾರೆ. ಈ ಶೈಕ್ಷಣಿಕ ಹಬ್ಬದ ಉದ್ಘಾಟನೆಯನ್ನು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರು ನೆರವೇರಿಸಲಿದ್ದಾರೆ. ಹಾಸನ ಜಿಲ್ಲೆಯಿಂದ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿ ಮಾಡಬೇಕೆಂದು ಜಿಲ್ಲಾ ಭಾರತ ಜ್ಞಾನ- ವಿಜ್ಞಾನ ಸಮಿತಿ ವಿನಂತಿಸಿದೆ. ಆಸಕ್ತಿಯಿರುವ ಎಲ್ಲರೂ ಭಾಗವಹಿಸಬಹುದಾಗಿದ್ದು, ಭಾಗವಹಿಸುವ ಶಿಕ್ಷಕರಿಗೆ ಅನ್ಯ ಕಾರ್ಯ ನಿಮಿತ್ತ (ಓ.ಓ.ಡಿ) ಸೌಲಭ್ಯ ಇದ್ದು, ಊಟ ಮತ್ತು ವಸತಿ ವ್ಯವಸ್ಥೆಯನ್ನು ಮಾಡಲಾಗುವುದು. ಭಾಗವಹಿಸಲು ಇಚ್ಛಿಸುವ ಜಿಲ್ಲೆಯ ಆಸಕ್ತರು ರು. 200 ಶುಲ್ಕದೊಂದಿಗೆ ಫೆ. 8ರೊಳಗಾಗಿ ಹೆಸರನ್ನು ನೋಂದಾಯಿಸಿಕೊಳ್ಳಲು ಹಾಸನ ಜಿಲ್ಲಾ ಭಾರತ ಜ್ಞಾನ ವಿಜ್ಞಾನ ಸಮಿತಿಯ ಉಪಾಧ್ಯಕ್ಷ ಅಹಮದ್ ಅಗರೆ ( ದೂ. 9844776096) ಆಥವಾ ಕಾರ್ಯದರ್ಶಿ ಬಿ.ಜಿ.ಗೋಪಾಲ ಕೃಷ್ಣ (ದೂ. 9343431828) ಅವರನ್ನು ಸಂಪರ್ಕಿಸಲು ಕೋರಿದೆ.