20ರೊಳಗೆ ಆಲೂರು ಪಪಂ ಬಜೆಟ್
ಕ.ಪ್ರ.ವಾರ್ತೆ , ಆಲೂರು , ಫೆ. 7
ಫೆಬ್ರವರಿ ತಿಂಗಳ ಅಂತ್ಯದೊಳಗೆ ಚುನಾವಣೆ ದಿನಾಂಕ ಘೋಷಣೆಯಾಗುವ ಸಾಧ್ಯತೆಯಿದ್ದು ಫೆ. 20ರೊಳಗೆ ಬಜೆಟ್ ಮಂಡಿಸಲಾಗುವುದೆಂದು ಪಪಂ ಆಡಳಿತಾಧಿಕಾರಿ ತಹಸೀಲ್ದಾರ್ ಶಾರದಾಂಬ ತಿಳಿಸಿದರು.
ಪಪಂ ಸಭಾಂಗಣದಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೇಸಿಗೆ ಆರಂಭವಾಗಿರುವುದರಿಂದ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ನೂತನ ಸದಸ್ಯರ ಅಳಲು: ಸಭೆಯಲ್ಲಿ ಇದ್ದ ಪಂಚಾಯತ್‌ನ ನೂತನ ಸದಸ್ಯರು ಮಾತನಾಡಿ, ನಾವು ಚುನಾಯಿತರಾಗಿ ಆಯ್ಕೆಯಾಗಿ ವರ್ಷ ಕಳೆಯುತ್ತ ಬಂದಿದ್ದು ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯ ಸಂಬಂಧ ಪ್ರಕರಣ ಕೋರ್ಟ್‌ನಲ್ಲಿರುವ ಕಾರಣ. ನಾವು ಇದ್ದೂ ಇಲ್ಲದಂತಾಗಿದೆ. ಜೊತೆಗೆ ಅಧಿಕಾರಿಗಳು ಪಪಂಗೆ ಸಂಬಂಧಿಸಿದ ಯಾವುದೇ ವಿಚಾರಗಳನ್ನು ನಮಗೆ ತಿಳಿಸುತ್ತಿಲ್ಲ. ಹೊಸದಾಗಿ ಆಯ್ಕೆಯಾಗಿರುವ ನಮಗೆ ನಾಗರಿಕರಿಗೆ ದೊರೆಯುವ ಸವಲತ್ತುಗಳ ಬಗ್ಗೆ ಮಾಹಿತಿಯಿಲ್ಲ ಎಂದರು.
ತಹಸೀಲ್ದಾರ್ ಸ್ಪಂದನೆ: ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರರು ಎಲ್ಲಾ ರೀತಿಯ ಮಾಹಿತಿಗಳನ್ನು ಸದಸ್ಯರಿಗೆ ನೀಡುವುದು ಹಾಗೂ ನಿರಂತರ ಅವರೊಂದಿಗೆ ಸಂಪರ್ಕದಲ್ಲಿರುವಂತೆ ಮುಖ್ಯಾಧಿಕಾರಿಗಳಿಗೆ ತಿಳಿಸಿದರು.
ದೂರು: ಸಭೆಯಲ್ಲಿದ್ದ ಮಾಜಿ ಸದಸ್ಯರು, ನಾಗರಿಕರು, ಪಟ್ಟಣದಲ್ಲಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಗಮನ ಸೆಳೆದರಲ್ಲದೇ, ಗಣಪತಿ ಬಾವಿಯ ಆವರಣ ತ್ಯಾಜ್ಯ ವಿಲೇವಾರಿ ಕೇಂದ್ರವಾಗಿದೆ ಎಂದರಲ್ಲದೇ, ಕೆಲವು ಕಾಮಗಾರಿಯ ಆಶ್ವಾಸನೆಗಳು ಇನ್ನೂ ಪೂರ್ಣಗೊಂಡಿಲ್ಲ ಎಂದರು.
ಸೂಚನೆ: ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರರು ರಸ್ತೆ ಕಾಮಗಾರಿಯ ಬಗ್ಗೆ ಶೀಘ್ರ ಮಾಹಿತಿ ತರಿಸಿಕೊಡುವಂತೆ ಹಾಗು ಬೇಲೂರಿನ ಯುಜಿಡಿ ನೀರನ್ನು ಯಗಚಿ ಹೊಳೆಗೆ ಬಿಡದಂತೆ ಕ್ರಮ ಕೈಗೊಳ್ಳುವುದರ ಜೊತೆಗೆ ಬಜೆಟ್ಗೆ ಪೂರಕವಾಗಿ ನಾಗರೀಕರು, ಸದಸ್ಯರು ನೀಡಿದ ಸಲಹೆಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಮುಖ್ಯಾಧಿಕಾರಿಗಳಿಗೆ ತಿಳಿಸಿದರು.
ಪಪಂ ಸದಸ್ಯರಾದ ಜಯಣ್ಣ. ಶಿವಣ್ಣ, ನಂದೀಶ್, ಮಂಜುನಾಥ್, ಜಾಫರ್, ನೀಲೂಫರ್, ನಾಗರತ್ನಮ್ಮ, ಮಾಜಿ ಸದಸ್ಯರಾದ ಧರ್ಮರಾಜು, ಈಶ್ವರ್, ರಘು, ಅರಸಪ್ಪ, ಕಲೀಂ, ಅಬ್ದುಲ್ ಹಮೀದ್, ಮಲ್ಲೇಶ್, ಮಂಜು, ಪ್ರದೀಪ್ ಇತರರಿದ್ದರು.