'ಅಂಗನವಾಡಿ ಖಾಸಗೀಕರಣ ಬೇಡ'
ಸಕಲೇಶಪುರ: ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿಐಟಿಯುಸಿ ಸಂಯೋಜಿತ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ಸಹಯೋಗದಲ್ಲಿ ಅಂಗನವಾಡಿ ನೌಕರರು ಪಟ್ಟಣದ ಮಿನಿ ವಿಧಾನಸೌಧ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಪಾರ್ವತಿಯವರಿಗೆ ಮನವಿ ಸಲ್ಲಿಸಿದರು.
ವೇತನ ನಿಗದಿಗೆ ಒತ್ತಾಯ: ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಸಿಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಹರೀಶ್, ಶಿಕ್ಷಣ, ಆರೋಗ್ಯ, ವಸತಿ, ಆಹಾರ, ಸೇರಿದಂತೆ ಸಾಮಾಜಿಕ ಬದುಕಿನ ವಿಭಿನ್ನ ಕ್ಷೇತ್ರಗಳಲ್ಲಿನ ಖಾಸಗೀಕರಣ, ವ್ಯಾಪಾರೀಕರಣ ಇತ್ಯಾದಿಗಳ ಕರಿನೆರಳು ಆವರಿಸಿಕೊಂಡಿರುವುದರಿಂದ ಪ್ರಸ್ತುತ ನೀಡಲಾಗುತ್ತಿರುವ ಗೌರವ ಧನ, ಕೂಲಿ ಕಾರ್ಮಿಕರಿಗೆ ನೀಡುತ್ತಿರುವುದಕ್ಕಿಂತಲೂ ಕಡಿಮೆ ಇದೆ. ಈ ಬಗ್ಗೆ ಪ್ರಾಮಾಣಿಕ ಅಧ್ಯಯನ ಕೈಗೊಳ್ಳಲು ಸರ್ಕಾರಗಳು ಮುಂದಾಗಿಲ್ಲ. ಅಂಗನವಾಡಿ ನೌಕರರಿಗೆ ಕನಿಷ್ಠ ರು. 10 ಸಾವಿರ ವೇತನ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಸಂಘದ ತಾಲೂಕು ಅಧ್ಯಕ್ಷೆ ಪದ್ಮಾ, ಶಾರದ, ಕರ್ನಾಟಕ ರಾಜ್ಯ ಪ್ರಾಂತ್ಯ ರೈತ ಸಂಘದ ವಿರೂಪಾಕ್ಷ ಇದ್ದರು.
ಬುಡಕಟ್ಟುಆಯೋಗದ ಅಧ್ಯಕ್ಷರ ಸಭೆ 11ಕ್ಕೆ
ಹಾಸನ: ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷರಾದ ಇ.ಅಶ್ವತ್ ನಾರಾಯಣ ಜಿಲ್ಲೆಗೆ ಪ್ರವಾಸ ಕೈಗೊಂಡಿದ್ದು, ಫೆ. 11 ರಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೆ ಹೊಯ್ಸಳ ಸಭಾಂಗಣ, ಜಿಲ್ಲಾ ಪಂಚಾಯ್ತಿ , ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಪ.ಜಾತಿ, ಪ.ವರ್ಗದವರ ಕುಂದು ಕೊರತೆಗಳ ಬಗ್ಗೆ ಚರ್ಚಿಸಲಿದ್ದಾರೆ. ಮಧ್ಯಾಹ್ನ 2.30 ರಿಂದ ಸಂಜೆ 5.30 ರವರೆಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲೆಯ ಎಲ್ಲಾ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಇಲಾಖಾ ಪ್ರಗತಿ ಪರಿಶೀಲನೆ ಸಭೆ ನಡೆಸಲಿದ್ದು, ಈ ಸಭೆಗೆ ಜಿಲ್ಲೆಯ ವಿಧಾನಸಭಾ ಸದಸ್ಯರು, ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಾಗುವಂತೆ ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಕೋರಿದ್ದಾರೆ.
ಶಾಶ್ವತ ನೀರಾವರಿಗಾಗಿ ಭಗೀರಥ ಹೋರಾಟ ಸಮಿತಿ ಪ್ರತಿಭಟನೆ
ಅರಸೀಕೆರೆ: ತಾಲೂಕಿಗೆ ಶಾಶ್ವತ ನೀರಾವರಿ ಸೌಲಭ್ಯ ಒದಗಿಸುವಂತೆ ತಾಲೂಕಿನ ಗಂಡಸಿ ಸಂತೆ ಮೈದಾನದಲ್ಲಿ ಫೆ. 10 ರಂದು ಬೆಳಗ್ಗೆ 10ಕ್ಕೆ ಬೃಹತ್ ಪ್ರತಿಭಟನಾ ಸಭೆ ಆಯೋಜಿಸಲಾಗಿದೆ ಎಂದು ಭಗೀರಥ ಹೋರಾಟ ಸಮಿತಿಯ ಪದಾಧಿಕಾರಿ ವಕೀಲ ಯತೀಶ್, ಮುರುಳಿ, ರಾಘವೇಂದ್ರ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 5 ನದಿಗಳು ಹರಿದರೂ ಅರಸೀಕೆರೆ ತಾಲೂಕು ಸಂಪೂರ್ಣ ಬರಪೀಡಿತ ಪ್ರದೇಶದಿಂದ ಕೂಡಿದ್ದು ಜನ ಜಾನುವಾರುಗಳು ಕುಡಿಯಲು ನೀರಿಲ್ಲದೆ ಪರದಾಡುವಂತಾಗಿದೆ. ಮಳೆ ವೈಫಲ್ಯದಿಂದ ಅಂತರ್ಜಲದ ಮಟ್ಟ ಕುಸಿದು ತೆಂಗು- ಅಡಿಕೆ ಸೇರಿದಂತೆ ನಾನಾ ತೋಟಗಾರಿಕಾ ಬೆಳೆಗಳು ವಿನಾಶದ ಹಂಚಿಗೆ ತಲುಪಿವೆ. ಇದರಿಂದಾಗಿ ನಗರ ಪ್ರದೇಶಗಳಿಗೆ ಜನತೆ ಗುಳೇ ಹೋಗುವ ಪರಿಸ್ಥಿತಿ ಉದ್ಭವಿಸಿದೆ. ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಶಾಶ್ವತ ನೀರಾವರಿ ಸೌಲಭ್ಯಮೊಂದೇ ಮಾರ್ಗವಾಗಿದೆ. ಆದ್ದರಿಂದ ಈ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಳ್ಳಬೇಕೆಂದು ಪತ್ರಿಕಾ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.
15ರಿಂದ ಕ್ರಿಕೆಟ್ ಪಂದ್ಯಾವಳಿ
ಅರಸೀಕೆರೆ: ಸ್ಥಳೀಯ ದೈವಜ್ಞ ಬ್ರಾಹ್ಮಣ ಯುವಕ ಸಂಘದ ವತಿಯಿಂದ 9ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಸಮಾಜದ ಮುಖಂಡರಿಗೆ ಹಿರಿಯ ಮತ್ತು ಕಿರಿಯ ಮಕ್ಕಳಿಗೆ ಕ್ರಿಕೆಟ್ ಪಂದ್ಯಾವಳಿಯನ್ನು ಏರ್ಪಡಿಸಲಾಯಿತು. ಫೆ. 15 ರಂದು ದೈವಜ್ಞ ಬ್ರಾಹ್ಮಣರ ಮಠಾಧೀಶ ಶ್ರೀ ಸಚ್ಚಿದಾನಂದ ಜ್ಞಾನೇಶ್ವರಿ ಭಾರತಿ ಮಹಾಸ್ವಾಮಿಯವರು ಅರಸೀಕೆರೆಗೆ ಆಗಮಿಸಲಿದ್ದು ಸಮಾಜ ಬಾಂಧವರಿಗೆ ಆಶೀರ್ವಾದ ಮಂತ್ರಾಕ್ಷತೆ ನೀಡಲಿದ್ದಾರೆ. ಸೀತಾರಾಮ ಕಲ್ಯಾಣ ಮಂದಿರದಲ್ಲಿ ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಯುವಕ ಸಂಘದ ಅಧ್ಯಕ್ಷ ಶ್ರೀಕಾಂತ್ ತಿಳಿಸಿದ್ದಾರೆ.
ನಾಗರಿಕರಿಗೆ ತಾರಸಿ ತೋಟ ತರಬೇತಿ
ಹಾಸನ: ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಕೈತೋಟ ಮತ್ತು ತಾರಸಿ ತೋಟಗಳ ಉತ್ತೇಜನಎಂಬ ಕಾರ್ಯಕ್ರಮವನ್ನು ತಾಲೂಕಿನ ತೋಟಗಾರಿಕೆ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಹಾಸನ ನಗರ ಪ್ರದೇಶದಲ್ಲಿ ವಾಸಿಸುತ್ತಿರುವ ನಾಗರಿಕರಿಗೆ ಸಮತೋಲನ ಆಹಾರ ಒದಗಿಸಲು ಹಣ್ಣು ಮತ್ತು ತರಕಾರಿಯನ್ನು ತಾರಸಿ ಮತ್ತು ಕೈ ತೋಟದಲ್ಲಿ ಸ್ವತಃ ಬೆಳೆಸಿಕೊಳ್ಳಲು, ಕುಟುಂಬದ ಸದಸ್ಯರು ಅದರಲ್ಲೂ ಮಹಿಳೆಯರು ಮತ್ತು ಮಕ್ಕಳಲ್ಲಿ ತಾರಸಿ ಮತ್ತು ಕೈತೋಟಗಳಲ್ಲಿ ಆಸಕ್ತಿ ಮೂಡಿಸುವ ಸಲುವಾಗಿ ತೋಟಗಾರಿಕೆ ಇಲಾಖೆವತಿಯಿಂದ ಆಸಕ್ತ ಸಾರ್ವಜನಿಕರಿಗೆ ನೋಂದಣಿ ಮಾಡಿಸಲಾಗುತ್ತಿದೆ. ಆಸಕ್ತ ಸಾರ್ವಜನಿಕರು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ, ಸಿಲ್ವರ್ ಜುಬಿಲಿ ಪಾರ್ಕ್, ಬಿ.ಎಂ.ರಸ್ತೆ, ಹಾಸನ, ದೂ.ಸಂ. 08172-262390, ಇವರ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಳ್ಳಲು ಈ ಮೂಲಕ ಕೋರಲಾಗಿದೆ.
ಕಸಾಪ ಸಮ್ಮೇಳನಕ್ಕಾಗಿ ಕವನ, ಬರಹ ಆಹ್ವಾನ
ಹಾಸನ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹೊಯ್ಸಳ ಸಿರಿ ಎಂಬ ತ್ರೈಮಾಸಿಕವನ್ನು ಹೊರತರುತ್ತಿರುವುದು ತಮಗೆ ತಿಳಿದ ವಿಷಯವೇ ಆಗಿದೆ. ಹೊಯ್ಸಳ ಸಿರಿಯ 4ನೇ ಸಂಚಿಕೆ ಜಿಲ್ಲಾ ಸಮ್ಮೇಳನದ ಅಂಗವಾಗಿ ವಿಶೇಷವಾಗಿ ಮೂಡಿಬರಲಿದ್ದು, ಜಿಲ್ಲೆಯ ಲೇಖಕರು, ಕವಿಗಳಿಂದ ಬರಹಗಳನ್ನು ಆಹ್ವಾನಿಸಲಾಗಿದೆ ಎಂದು ಅಧ್ಯಕ್ಷ ಡಾ.ಎಚ್.ಎಲ್. ಜನಾರ್ಧನ್ ತಿಳಿಸಿದ್ದಾರೆ.
ಜಿಲ್ಲೆಯ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಪ್ರಜ್ಞೆಯನ್ನು ಪ್ರತಿಬಿಂಬಿಸುವ ವಿಶೇಷ ಲೇಖನಗಳು, ಸಾಹಿತ್ಯ ಚಟುವಟಿಕೆಗಳು, ಛಾಯಾಚಿತ್ರಗಳು, ಚಿತ್ರಕಲೆ, ಸ್ಥಳ ವಿಶೇಷತೆ, ಕಥೆ, ಕವನ, ಕಾದಂಬರಿ, ವೈಚಾರಿಕ ಲೇಖನಗಳು, ವಿಚಾರ ಪ್ರಚೋದಕ ಬರಹಗಳು, ವಿಮರ್ಶೆಗಳು, ನಗೆ ಬರಹಗಳು, ನಾಟಕಗಳನ್ನು ಸದಭಿರುಚಿಯ ನೆಲೆಗಟ್ಟಿನಲ್ಲಿ ಬಿಳಿಹಾಳೆಯ ಒಂದೇ ಬದಿಯಲ್ಲಿ ಬರೆದ ಕೈ ಬರಹ ಇಲ್ಲವೇ ಮುದ್ರಿತ ಪ್ರತಿಗಳನ್ನು ಕಳುಹಿಸಬಹುದು. ಎಲ್ಲಾ ಪ್ರಕಾರದ ಬರಹಗಳನ್ನು ಫೆ. 18 ರೊಳಗಾಗಿ ್ಟಣಡಛಟಛಡ್ಝ್ಠ್ಝಣ್ಜಟಛ್ಝಟ.್ಛ್ಟಟ ಅಥವಾ ಸಂಪಾದಕರು, ಹೊಯ್ಸಳ ಸಿರಿ ತ್ರೈಮಾಸಿಕ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಸಾಲಗಾಮೆ ರಸ್ತೆ, ಹಾಸನ ಜಿಲ್ಲೆ, ಹಾಸನ. ಇಲ್ಲಿಗೆ ಕಳುಹಿಸಬಹುದು.
ಇಂದು ಸಂವೇದನಾ ಕಾರ್ಯಾಗಾರ
ಹಾಸನ: ಕರ್ನಾಟಕ ನ್ಯಾಯಾಂಗ ಅಕಾಡೆಮಿ ಮತ್ತು ಕರ್ನಾಟಕ ಆರೋಗ್ಯ ಸಂವರ್ಧನ ಪ್ರತಿಷ್ಠಾನ ಸಹಯೋಗದಲ್ಲಿ ಫೆ. 8ರಂದು ಬೆಳಗ್ಗೆ 10ಕ್ಕೆ ಜಿಲ್ಲಾ ಪಂಚಾಯ್ತಿ ಹೊಯ್ಸಳ ಸಭಾಂಗಣದಲ್ಲಿ ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯ ನ್ಯಾಯಾಧೀಶರಿಗೆ ನಿರ್ಲಕ್ಷಿತ ಮಹಿಳೆಯರ ಮೇಲಿನ ದೌರ್ಜನ್ಯ, ಕಾನೂನು ಮತ್ತು ಸಾಮಾಜಿಕ ದೃಷ್ಠಿಕೋನಗಳು ಎಂಬ ವಿಷಯವಾಗಿ ಸಂವೇದನಾ ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ತಿಳಿಸಿದ್ದಾರೆ. ರಾಜ್ಯ ಉಚ್ಛನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಕರ್ನಾಟಕ ನ್ಯಾಯಾಂಗ ಅಕಾಡೆಮಿಯ ಅಧ್ಯಕ್ಷರಾದ ನ್ಯಾಯಮೂರ್ತಿ ಎನ್. ಕುಮಾರ್ ಕಾರ್ಯಕ್ರಮ ಉದ್ಘಾಟಿಸುವರು.
ಅಂಚೆ ಇಲಾಖೆ ಪರೀಕ್ಷೆ
ಹಾಸನ: ಭಾರತೀಯ ಅಂಚೆ ಇಲಾಖೆಯ, ಹಾಸನ ವಿಭಾಗದಲ್ಲಿ ಖಾಲಿ ಇರುವ ಅಂಚೆ ಪೇದೆ ಮತ್ತು ಮೈಲ್ ಗಾರ್ಡ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ನೇಮಕಾತಿ ಪರೀಕ್ಷೆಯನ್ನು ಫೆ. 9ರಂದು ಬೆಳಗ್ಗೆ 10.30ರಿಂದ 12ರವರೆಗೆ ನಗರದ ಎ.ವಿ.ಕೆ ಮಹಿಳಾ ಕಾಲೇಜಿನಲ್ಲಿ ನಡೆಸಲಾಗುತ್ತಿದೆ. ಸ್ವ ವಿಳಾಸ ಲಗತ್ತಿಸಿರುವ ಅಭ್ಯರ್ಥಿಗಳಿಗೆ ಪ್ರವೇಶ ಪತ್ರಗಳನ್ನು ಅಂಚೆ ಮೂಲಕ ಈಗಾಗಲೇ ರವಾನಿಸಲಾಗಿದೆ. ಪ್ರವೇಶ ಪತ್ರ ತಲುಪಿರುವ ಅರ್ಹ ಅಭ್ಯರ್ಥಿಗಳು ನಿಗದಿತ ಪರೀಕ್ಷಾ ಸಮಯಕ್ಕಿಂತ 30 ನಿಮಿಷಗಳು ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬೇಕೆಂದು ಹಾಸನ ವಿಭಾಗದ ಅಂಚೆ ಅಧೀಕ್ಷಕರು ಸೂಚಿಸಿದ್ದಾರೆ.
ಒಂದನೇ ತರಗತಿಗೆ ನೋಂದಣಿ
ಹಾಸನ: ಬಿ. ಕಾಟೀಹಳ್ಳಿಯಲ್ಲಿರುವ ಕೇಂದ್ರೀಯ ವಿದ್ಯಾಲಯದಲ್ಲಿ ಒಂದನೇ ತರಗತಿಗೆ ಫೆ. 10ರಿಂದ ನೋಂದಣಿ ಪ್ರಾರಂಭವಾಗಲಿದೆ. ಮಾರ್ಚ್ 10ಕ್ಕೆ ಮುಕ್ತಾಯವಾಗಲಿದೆ. ಆಸಕ್ತ ಪೋಷಕರು ಉಚಿತವಾಗಿ ದೊರೆಯುವ ಅರ್ಜಿಗಳನ್ನು ವಿದ್ಯಾಲಯದಿಂದ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ವಿದ್ಯಾಲಯದ ಜಾಲತಾಣ ಢಿಢಿಢಿ.್ಞಝಛಡಡಛಟಿ.್ಛ್ಟಟ ಸಂಪರ್ಕಿಸಿ ಪಡೆಯಬಹುದಾಗಿದೆ.
ಸಿಇಟಿ ಪರೀಕ್ಷೆಗೆ ತರಬೇತಿ
ಹಾಸನ: ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಶಾಖಾ ಮಠದ ವತಿಯಿಂದ ನಡೆಯತ್ತಿರುವ ಬಿ.ಜಿ.ಎಸ್. ಸ್ಟಡಿ ಸೆಂಟರ್ನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ತಾಂತ್ರಿಕ ಮತ್ತು ವೈದ್ಯಕೀಯ ಪ್ರವೇಶಕ್ಕಾಗಿ ಸಿಇಟಿ ಪರೀಕ್ಷೆಗೆ ರಾಜ್ಯದ ನಾನಾ ಜಿಲ್ಲೆಯಿಂದ ಸಂಪನ್ಮೂಲ ಅನುಭವಿ ಉಪನ್ಯಾಸಕರನ್ನು ಕರೆಸಿ ತರಬೇತಿ ನೀಡಲಾಗುವುದು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 8050839482, 9738334784.
ಇಂದು ಶತಾವಧಾನಿ ಗಣೇಶ್ರ 999ನೇ ಕಾರ್ಯಕ್ರಮ
ಹಾಸನ: ಜಿಲ್ಲೆಯ ಅವಧಾನಾಸಕ್ತರ ಬಳಗದಿಂದ ಫೆ.8 ರಂದು ಎವಿಕೆ ಕಾಲೇಜಿನ ಸಭಾಂಗಣದಲ್ಲಿ ಶತಾವಧಾನಿ ಡಾ.ರಾ. ಗಣೇಶ್ ಅವರ 999ನೇ ಅವಧಾನ ಕಾರ್ಯಕ್ರಮ ನಡೆಯಲಿದೆ ಎಂದು ಶೃಂಗೇರಿ ಶಂಕರಮಠದ ಧರ್ಮದರ್ಶಿ ಎಂ.ಎಸ್. ಶ್ರೀಕಂಠಯ್ಯ ತಿಳಿಸಿದ್ದಾರೆ.
ನಾಡಿನ ಪ್ರಾಚೀನ ಕಲೆಯಾದ ಅವಧಾನವನ್ನು ಎಲ್ಲರಿಗೂ ಪರಿಚಯಿಸುವ ಈ ಕಲೆಯನ್ನು ಉಳಿಸಿ ಬೆಳೆಸುವ ಹಿನ್ನಲೆಯಲ್ಲಿ ಈ ಕಾರ್ಯಕ್ರಮ ಮಹತ್ವಪೂರ್ಣದಾಗಿದ್ದು, ಸಂಜೆ 4.30ರಿಂದ ಆರಂಭವಾಗಿ ಸುಮಾರು 3 ಗಂಟೆಗಳ ಕಾಲ ನಿರಂತರವಾಗಿ ನಡೆಯಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅವಧಾನ ಎಂಬುದು ಅತ್ಯುನ್ನತ ಬೌದ್ದಿಕ ಪ್ರೌಢಿಮೆ ಪ್ರತಿಭೆ ಪಾಂಡಿತ್ಯ, ಸಮಯ ಸ್ಪೂರ್ತಿಗಳ ಸಂಗಮವಾಗಿರುವ ಮೌಖಿಕ ಕಲೆಯಾಗಿದ್ದು, ಶತಾವಧಾನಿ ಡಾ. ರಾ. ಗಣೇಶ್ ಅವರೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಪರಿಣಿತಿ ಹೊಂದಿರುವ ವಿದ್ವಾಂಸರುಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಹೇಳಿದರು.ಪ್ರಮುಖವಾಗಿ ಗಮಕ ವಿಧೂಷಿ ಗಂಗಮ್ಮ ಕೇಶವಮೂರ್ತಿ, ಸಂಖ್ಯಾ ಬಂಧದಲ್ಲಿ ವಿಶ್ವನಾಥ ರಾವ್ ಚವ್ಹಾಣ್, ಅಪ್ರಸ್ತುತ ಪ್ರಸಂಗದಲ್ಲಿ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಸಾಹಿತ್ಯ ಸಲ್ಲಾಪದಲ್ಲಿ ಖ್ಯಾತ ಅಂಕಣಕಾರ ಸೂರ್ಯಪ್ರಕಾಶ್ ಪಂಡಿತ್ ಭಾಗವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಅವಧಾನಾಸಕ್ತರ ಬಳಗದ ರಂಗನಾಥ್, ಸೀತಾರಾಂ, ಮಂಜುನಾಥ್ ಹಾಜರಿದ್ದರು.
ಎನ್ಎಸ್ಎಸ್ಶಿಬಿರ ಇಂದಿನಿಂದ
ಅರಕಲಗೂಡು: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಶನಿವಾರದಿಂದ ಏಶು ದಿನಗಳ ಕಾಲ ತಾಲೂಕಿನ ಕಸಬಾ ಹೋಬಳಿಯ ಹಾರೋಹಳ್ಳಿ ಗ್ರಾಮದಲ್ಲಿ ನಡೆಯಲಿದೆ.ಶಿಬಿರದ ಉದ್ಘಾಟನೆಯನ್ನು ಶಾಸಕ ಎ. ಮಂಜು ಅವರು ಉದ್ಘಾಟಿಸಲಿದ್ದು, ಕಾಲೇಜಿನ ಪ್ರಾಚಾರ್ಯ ಜನಾರ್ಧನಭಟ್ ಅಧ್ಯಕ್ಷತೆ ವಹಿಸುವರು.ಸಮಾರಂಭದ ವಿಶೇಷ ಆಹ್ವಾನಿತರಾಗಿ ತಹಸೀಲ್ದಾರ್ ಎಸ್.ಎಸ್. ಚಿದಾನಂದ, ಸಹಾಯಕ ಕಾರ್ಯಪಾಲಕ ಅಭಿಯಂತರ ಚಂದ್ರಶೇಖರ್ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಸದಸ್ಯ ವಿ.ಎ.ನಂಜುಂಡಸ್ವಾಮಿ,ತಾಲೂಕು ಪಂಚಾಯಿತಿ ಅಧ್ಯಕ್ಷೆ ಕಾಮಾಕ್ಷಮ್ಮ, ಉಪಾಧ್ಯಕ್ಷೆ ಸಾಕಮ್ಮ, ಹಿರಿಯ ಸದಸ್ಯ ಕೀರ್ತಿರಾಜು,ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಹೆಚ್.ಟಿ. ಮಂಜುನಾಥ ಇತರರು ಪಾಲ್ಗೊಳ್ಳುವರು.
ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ
ಅರಸೀಕೆರೆ: ಕುಡಿಯುವ ನೀರಿಗಾಗಿ ಗ್ರಾಮದಲ್ಲಿ ಹಾಹಾಕಾರ ಪರಿಸ್ಥಿತಿಯಿದ್ದರೂ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾಮದ ನೂರಾರು ಗ್ರಾಮಸ್ಥರು ಅದರಲ್ಲೂ ಹೆಚ್ಚಿನ ಸಂಖ್ಯೆಯ ಹೆಂಗಳೆಯರು ತಾಲ್ಲೂಕಿನ ಜಾವಗಲ್ ಹೋಬಳಿ, ಕೋಳಗುಂದ ಗ್ರಾಮ ಪಂಚಾಯ್ತಿ ಕಚೇರಿಗೆ ಮುತ್ತಿಗೆ ಹಾಕಿ ಕಚೇರಿಗೆ ಬೀಗ ಹಾಕಿ ಇತ್ತೀಚೆಗೆ ಪ್ರತಿಭಟಿಸಿದರು. ಗ್ರಾಮದಲ್ಲಿ ಸುಮಾರು 800 ಮನೆಗಳಿದ್ದು ಜನ ಜಾನುವಾರುಗಳಿಗೆ ಕೇವಲ ಒಂದು ಬೋರ್ವೆಲ್ನಿಂದ ನೀರನ್ನು ಪಡೆಯಬೇಕಿದೆ. ನೀರಿನ ಲಭ್ಯತೆಯಿಲ್ಲದೆ ಜನರು ನೀರಿಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಸಮಸ್ಯೆ ಬಗೆಹರಿಸುವತ್ತ ಜನಪ್ರತಿನಿಧಿಗಳು ಗಮನ ಹರಿಸಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಈಗ ಇರುವ ಬೋರ್ವೆಲ್ನಲ್ಲಿ ಸಾಕಷ್ಟು ನೀರಿಲ್ಲ. ಆದ್ದರಿಂದ, ತಕ್ಷಣವೇ ಇನ್ನೆರಡು ಕೊಳವೆ ಬಾವಿಗಳನ್ನು ಕೊರೆಸಿ ಪೈಪ್ಲೈನ್ ಮೂಲಕ ನೀರು ಸರಬರಾಜು ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸಂಬಂಧಪಟ್ಟ ಶಾಸಕರು ಹಾಗೂ ಅಧಿಕಾರಿಗಳು ತಕ್ಷಣ ಸೂಕ್ತ ಕ್ರಮ ಕೈಗೊಂಡು ಸಮಸ್ಯೆಯನ್ನು ಪರಿಹರಿಸದಿದ್ದರೆ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದಾಗಿ ಕೋಳಗುಂದ ಗ್ರಾಮಸ್ಥರು ಎಚ್ಚರಿಸಿದ್ದಾರೆ.
10ರಂದು ಭವಿಷ್ಯ ನಿಧಿ ಅದಾಲತ್
ಹಾಸನ: ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ, ಶ್ರಮ ಮಂತ್ರಾಲಯ, ಭಾರತ ಸರಕಾರವು ತನ್ನ ಉಪ ಕ್ಷೇತ್ರೀಯ ಕಚೇರಿಯನ್ನು ಯಶೋರಾಮ್ ಛೇಂಬರ್ಸ್, ರತ್ನಗಿರಿ ರಸ್ತೆ, ಚಿಕ್ಕಮಗಳೂರಿನಲ್ಲಿ ಹೊಂದಿದೆ. ಕ್ಷೇತ್ರೀಯ ಭವಿಷ್ಯನಿಧಿ ಆಯುಕ್ತರು ಫೆ. 10ರಂದು ಭವಿಷ್ಯನಿಧಿ ಅದಾಲತ್ ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ.
ಭವಿಷ್ಯನಿಧಿ ಉದ್ಯೋಗದಾತರು ಮತ್ತು ಸದಸ್ಯರು ತಮ್ಮ ದೂರುಗಳೇನಾದರೂ ಇದ್ದಲ್ಲಿ ತಮ್ಮ ಅರ್ಜಿಯನ್ನು ಖುದ್ದಾಗಿ ಫೆ. 10ರ ಬೆಳಗ್ಗೆ 11ಕ್ಕೆ ಅಥವಾ ಫೆ. 9, 2014ರೊಳಗೆ ಅಂಚೆಯ ಮೂಲಕ ನೋಂದಾಯಿಸಲು ಕೋರಿದ್ದಾರೆ. ಎಲ್ಲಾ ದೂರುಗಳನ್ನು ಅದೇ ದಿನ ಇತ್ಯರ್ಥಪಡಿಸಲು ಶ್ರಮ ವಹಿಸಲಾಗುತ್ತದೆ.
ಸದಸ್ಯರು ಹಾಗೂ ಉದ್ಯೋಗದಾತರು ಢಿಢಿಢಿ.ಜಠಜ್ಝ್ಜಿಟಡ.್ಜ್ಟಢ.್ಝಟಿ ಇಲ್ಲಿ ತಮ್ಮ ದೂರುಗಳನ್ನು ನೋಂದಾಯಿಸಬಹುದು. ನೋಂದಾಯಿಸಿದ ದೂರುಗಳನ್ನು 30 ದಿನಗಳೊಳಗೆ ಇತ್ಯರ್ಥ ಮಾಡಿಕೊಡುವಂತೆ ಕ್ರಮ ಕೈಗೊಳ್ಳಲಾಗುತ್ತದೆ. ಭವಿಷ್ಯನಿಧಿ ಮೊತ್ತವನ್ನು ಸದಸ್ಯರ ಖಾತೆಗೆ 24 ಗಂಟೆಗಳೊಳಗೆ ಜಮಾ ಮಾಡಲು ಹೊಸದಾಗಿ ಃಊಋಖಿ, ಈಇಖ ಸೌಲಭ್ಯವನ್ನು ಒದಗಿಸಲಾಗಿದೆ. ಆದ್ದರಿಂದ ಎಲ್ಲಾ ಸದಸ್ಯರು ತಮ್ಮ ಅರ್ಜಿಯ ಜೊತೆಗೆ ತಮ್ಮ ಬ್ಯಾಂಕ್ ಪುಸ್ತಕದ ನಕಲು ಪ್ರತಿಯನ್ನು ಲಗತ್ತಿಸುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಗ್ರಾಹಕ ಸೇವಾ ಕೇಂದ್ರವನ್ನು ಸಂಪರ್ಕಿಸಬಹುದು. ಎಂದು ಕ್ಷೇತ್ರೀಯ ಭವಿಷ್ಯ ನಿಧಿ ಆಯುಕ್ತ ಪ್ರಭಾವತಿ ಬಿ. ಜೋಶಿ ತಿಳಿಸಿದ್ದಾರೆ.
ದೂ: 08262-234106, ಫ್ಯಾಕ್ಸ್: 08262-237426, ಇ-ಮೇಲ್