ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಉತ್ತಮ ಬೋಧನೆಗೆ ವಿದ್ಯಾರ್ಥಿಗಳ ನಡೆವಳಿಕೆಯೂ ಕಾರಣ'

Vishwanath S
Updated On : 7 Feb 2014, 11:16 am

ಹೊಳೆನರಸೀಪುರ: ಶಾಲೆಗಳಲ್ಲಿ ಶಿಕ್ಷಕರ ಉತ್ತಮ ಬೋಧನೆಗೆ ವಿದ್ಯಾರ್ಥಿಗಳ ನಡೆವಳಿಕೆಯು ಕೂಡ ಒಂದು ಕಾರಣವಾಗಲಿದೆ ಎಂದು ಹಾಸನದ ಡಯಟ್‌ನ ಉಪ ನಿರ್ದೇಶಕಿ ಪಿ. ಪದ್ಮಮ್ಮ ಹೇಳಿದರು.
ತಾಲೂಕಿನ ಜೋಡಿಗುಬ್ಬಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ  ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಶಾಲೆ ಸುವರ್ಣ ಮಹೋತ್ಸವ ಆಚರಿಸುತ್ತಿರುವುದು ಸಂತಸದ ಸಂಗತಿ ಆಗಿದೆ ಎಂದ ಅವರು, ತಾವು ಶಿಕ್ಷಕರಾಗಿ 4 ವರ್ಷಗಳ ಕಾಲ ಮೊದಲು ಕರ್ತವ್ಯ ನಿರ್ವಹಿಸಿದ್ದು ಇದೇ ಶಾಲೆಯಲ್ಲಿ ಎಂಬುದನ್ನು ಈ ಸಂದರ್ಭದಲ್ಲಿ ವಿವರಿಸಿದರು.
ಪ್ರಶಂಸನೀಯ: ಪ್ರಸ್ತುತ ಶಾಲೆಯಲ್ಲಿನ ಶಿಕ್ಷಕರು ಒಗ್ಗಟ್ಟಿನಿಂದ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದು, ಹತ್ತನೆ ತರಗತಿಗೆ ವಿಶೇಷ ಆಸಕ್ತಿ ವಹಿಸಿ ವಿಶೇಷ ತರಗತಿಗಳನ್ನು ನಡೆಸಿ ಉತ್ತಮ ಫಲಿತಾಂಶಕ್ಕೆ ಶ್ರಮಿಸುತ್ತಿರುವ ಶಿಕ್ಷಕರ ಪಾತ್ರ ಪ್ರಶಂಸನೀಯ ಎಂದು ಅವರು ಬಣ್ಣಿಸಿದರು.
ವಿಶೇಷ: ಇದೇ ಸಂದರ್ಭದಲ್ಲಿ ಕಳೆದ ಐವತ್ತು ವರ್ಷಗಳ ಕಾಲ ಈ ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗವನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಅವರನ್ನು ಹಳೇ ವಿದ್ಯಾರ್ಥಿಗಳ ತಂಡ ಗೌರವಿಸಿ ಸನ್ಮಾನಿಸಿದ್ದು ವಿಶೇಷವಾಗಿತ್ತು.
ಸ್ಮರಣೆ: ಈ ಶಾಲೆಯಲ್ಲಿ ವ್ಯಾಸಂಗ ಮಾಡಿ ನಾನಾ ಹುದ್ದೆಗಳಲ್ಲಿರುವ ಹಿರಿಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಹಿಂದಿನ ನೆನಪುಗಳನ್ನು ಮೆಲುಕು ಹಾಕಿದ್ದು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತ್ತು. ಶಾಲಾ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ರಂಗ ಮಂಟಪದ ನಿರ್ಮಾಣಕ್ಕೆ ಹಳೆಯ ವಿದ್ಯಾರ್ಥಿಗಳು ತಮ್ಮ ಕೊಡುಗೆ ಮೂಲಕ ನಿರ್ಮಾಣಕ್ಕೆ ಕಾರಣೀಭೂತರಾದುದನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.
ಇದೇ ಸಂದರ್ಭದಲ್ಲಿ, ಶಾಲೆಯು ಸುವರ್ಣ ಸಂಭ್ರಮ ಆಚರಿಸುತ್ತಿರುವ ವೇಳೆ ಶಿಕ್ಷಕರಾದ ಕೆ. ಶಿವಕುಮಾರಾಚಾರ್ ಅವರ ಸಂಪಾದಕತ್ವದಲ್ಲಿ ಸಿದ್ಧಪಡಿಸಿದ 'ಸುವರ್ಣಧಾರಾ' ಸ್ಮರಣ ಸಂಚಿಕೆಯನ್ನು ಪ್ರಾಚಾರ್ಯರಾದ ಶ್ರೀನಿವಾಸ್ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಫಣಿರಾಜ್, ಸತೀಶ್, ಡಯಟ್ ಅಧಿಕಾರಿ ಇಂದಿರಮ್ಮ, ಹಿರಿಯ ಉಪನ್ಯಾಸಕ ಶಿವರಾಜ್, ಈ ಕಾರ್ಯಕ್ರಮದಲ್ಲಿ ಅಜ್ಜೂರು, ಬಂಡಿಗನಹಳ್ಳಿ, ಜೋಡಿಗುಬ್ಬಿ ಯಲಗಟವಳ್ಳಿ ಹಾಗೂ ಯಗಟಿ ಗ್ರಾಮಗಳಿಂದ ನೂರಾರು ಮಂದಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement