ಉಪನ್ಯಾಸಕರ ಪರ ಬೀದಿಗಿಳಿದ ಎಬಿವಿಪಿ
ಅರಸೀಕೆರೆ: ಅತಿಥಿ ಉಪನ್ಯಾಸಕರು ಹೋರಾಟ ನಡೆಸಿದರೂ ಅದಕ್ಕೆ ಸ್ಪಂದಿಸದೆ ಅಗೌರವದಿಂದ ನಡೆಸಿಕೊಳ್ಳುತ್ತಿರುವುದನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ತಾಲ್ಲೂಕು ಕಚೇರಿ ಎದುರು ಧರಣಿ ನಡೆಸಿ ತಹಶೀಲ್ದಾರ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಪದವಿ ಪೂರ್ವ ಹಾಗೂ ಪದವಿ ಕಾಲೇಜಿನ ಅರೆಕಾಲಿಕ ಉಪನ್ಯಾಸಕರಿಗೆ ವೇತನವನ್ನು ಹೆಚ್ಚಿಸಬೇಕು. ಅರೆಕಾಲಿಕ ಉಪನ್ಯಾಸಕರಿಗೆ ಪ್ರತಿ ತಿಂಗಳು (ತಿಂಗಳಿಗೊಮ್ಮೆ) ವೇತನ ನೀಡಬೇಕು. ತಕ್ಷಣವೇ ಪಿಯುಸಿ ಹಾಗೂ ಪದವಿ ಕಾಲೇಜಿಗಳಿಗೆ ಖಾಲಿ ಇರುವ ಖಾಯಂ ಉಪನ್ಯಾಸ ಹುದ್ದೆಗೆ ನೇಮಕ ಮಾಡಬೇಕು. ಕಾಲೇಜುಗಳ ಮೂಲಭೂತ ಸೌಕರ್ಯಗಳನ್ನು ತುರ್ತಾಗಿ ಒದಗಿಸಬೇಕು.
ಆಗ್ರಹ: ಹೊಸ ವಿಶ್ವವಿದ್ಯಾಲಯಗಳಿಗೆ ಮೂಲಭೂತ ಸೌಕರ್ಯಕ್ಕಾಗಿ ತಕ್ಷಣವೇ ಹಣ ಬಿಡುಗಡೆಗೊಳಿಸಬೇಕು. ಉನ್ನತ ಶಿಕ್ಷಣ ನಿಜವಾದ ಅರ್ಥದಲ್ಲಿ ಉನ್ನತ ಶಿಕ್ಷಣವಾಗಬೇಕಾದರೆ ಕೂಡಲೇ ರಾಜ್ಯದ ಎಲ್ಲಾ ಹೊಸ ಸರ್ಕಾರಿ ವಿಶ್ವವಿದ್ಯಾಲಯಗಳಿಗೆ ಅಗತ್ಯ ಮೂಲಭೂತ ಸೌಕರ್ಯಕ್ಕಾಗಿ ಕೂಡಲೇ ಹೆಚ್ಚಿನ ಹಣದ ಅನುದಾನವನ್ನು ನೀಡಿ ರಾಜ್ಯದ ವಿದ್ಯಾರ್ಥಿಗಳಿಗೆ ಪ್ರಾಮಾಣಿಕವಾಗಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಬೇಕೆಂದು ಧರಣಿ ನಿರತರು ಆಗ್ರಹಿಸಿದರು.
ಶೈಕ್ಷಣಿಕ ಗುಣಮಟ್ಟವಿಲ್ಲ: ಧರಣಿ ನಿರತನ್ನುದ್ದೇಶಿಸಿ ಮಾತನಾಡಿದ ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಮಂಡಳಿ ಸದಸ್ಯ ಪೂಲ್ಚಂದ್ ಖಾಯಂ ಉಪನ್ಯಾಸಕರ ನೇಮಕ ಮಾಡದೆ ಅತಿಥಿ ಉಪನ್ಯಾಸಕರ ಮೂಲಕ ಪಾಠ ಪ್ರವಚನಗಳು ನಡೆಯುತ್ತಿವೆಯಾದರೂ ಸಮರ್ಪಕವಾದ ವೇತನ ನೀಡದಿರುವುದರಿಂದ ಪ್ರತಿ ದಿನ 2ರಿಂದ 3 ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕರಿಗೂ ಸಮರ್ಪಕವಾದ ಶೈಕ್ಷಣಿಕ ಗುಣಮಟ್ಟ ಕಾಯ್ದುಕೊಳ್ಳಲಾಗುತ್ತಿಲ್ಲ.
ಒತ್ತಾಯ: ಅತಿಥಿ ಉಪನ್ಯಾಸಕರಿಲ್ಲವೆಂದರೆ ಬಹುತೇಕ ಕಾಲೇಜುಗಳನ್ನು ಮುಚ್ಚಬೇಕಾಗುತ್ತದೆ. ಅತಿಥಿ ಉಪನ್ಯಾಸಕರಿಗೆ ವಾರಕ್ಕೆ 16 ಗಂಟೆ ಪಾಠ, ತಿಂಗಳಿಗೆ 25,000 ರು. ಸಂಬಳವನ್ನು ನೀಡಿ ಗೌರವದಿಂದ ನಡೆಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಧರಣಿಯಲ್ಲಿ ಧರಣೇಶ್, ವೀರೇಶ್, ಎಚ್.ಎಸ್.ನಾಗೇಂದ್ರ, ಪೃಥ್ವಿ, ರಾಖೇಶ್, ಶ್ರೀಧರ, ಕೆ.ವಿ. ಮಂಜುನಾಥ್, ಅಣ್ಣಪ್ಪ, ಗಿರೀಶ್, ಅಭಿಷೇಕ್ ಇನ್ನಿತರರು ಭಾಗವಹಿಸಿದ್ದರು.