ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕುವೆಂಪು, ಬೇಂದ್ರೆ ನವೋದಯ ಕಣ್ಣುಗಳು

Vishwanath S
Updated On : 7 Feb 2014, 11:16 am

ಕ.ಪ್ರ. ವಾರ್ತೆ ,  ಹಾಸನ ,  ಫೆ 7
ಸಮೃದ್ಧ ಸಾಹಿತ್ಯ ಸೃಷ್ಟಿಯ ದೃಷ್ಟಿಯಿಂದ ಸುವರ್ಣ ಯುಗವೆನಿಸಿದ ಹೊಸಗನ್ನಡ ಸಾಹಿತ್ಯಚರಿತ್ರೆಯಲ್ಲಿ ಪ್ರಖರವಾಗಿ ಗೋಚರಿಸುವ ಕುವೆಂಪು ಮತ್ತು ಬೇಂದ್ರೆ ನವೋದಯ ಸಾಹಿತ್ಯದ ಎರಡು ಕಣ್ಣುಗಳು ಎಂದು ವಾಣಿ ವಿಲಾಸ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆಂಗ್ಲ ಉಪನ್ಯಾಸಕ  ಗೊರೂರು ಶಿವೇಶ್ ಅಭಿಪ್ರಾಯಪಟ್ಟರು.
ತಾಲೂಕಿನ ಮೊಸಳೆ ಹೊಸಹಳ್ಳಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಕುವೆಂಪು ಬೇಂದ್ರೆ ಸ್ಮರಣೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಕುವೆಂಪು  ಅವರ ಸಾಹಿತ್ಯದ ಪ್ರಮುಖ ಲಕ್ಷಣ- ಬೃಹತ್ತು ಮತ್ತು ಮಹತ್ತು. ಮಲೆನಾಡಿನ ಸಮೃದ್ಧ ಪ್ರಕೃತಿಯೊಡನೆ ಅವಿನಾಭಾವ ಸಂಬಂಧ ಹೊಂದಿದ್ದ ಕುವೆಂಪು ಅವರು ಭಾಷೆ ಹಾಗೂ ಭಾವನಾತ್ಮಕತೆಯ ಭಂಡಾರವಾಗಿದ್ದರು. ಶ್ರೀ ರಾಮಾಯಣ ದರ್ಶನಂ ಮೂಲಕ ಭಾರತೀಯ ರಾಮಾಯಣ ಪರಂಪರೆಗೆ ಹೊಸ ವ್ಯಾಖ್ಯಾನ ನೀಡಿದವರು ಕುವೆಂಪು ಎಂದರು.
ಬೇಂದ್ರೆಯಿಂದ ಕಾವ್ಯದ ಸಾರ:ಉತ್ತರ ಕರ್ನಾಟಕದ ದೇಸೀ ಭಾಷೆಗೆ ಮಾಂತ್ರಿಕ ಸ್ಪರ್ಷ ನೀಡಿ, ಜನಪದದ ಎಲ್ಲ ಸಾಧ್ಯತೆಗಳನ್ನು ಸೃಜಿಸಿ, ಆಡುನುಡಿಗೆ ಕಾವ್ಯದ ಕಲೆಯನ್ನು ತಂದುಕೊಟ್ಟವರು, ಅದಕ್ಕೆ ಶ್ರೇಷ್ಠತೆಯ ಹೊಳಪನ್ನು ನೀಡಿದ ಮೋಡಿಕಾರ ದ.ರಾ. ಬೇಂದ್ರೆ ಎಂದರು.
ಇಂದಿನ ಅಗತ್ಯ: ಕಾರ್ಯಕ್ರಮ ಉದ್ಘಾಟಿಸಿದ ಕಾಲೇಜಿನ ಪ್ರಾಂಶುಪಾಲ ಡಾ.ಡಿ. ಶ್ರೀನಿವಾಸ ಮಾತನಾಡಿ, ಎರಡು ಭಿನ್ನ ಸಂಸ್ಕೃತಿ ಹಾಗೂ ಪರಂಪರೆಗಳನ್ನು ಪ್ರತಿನಿಧಿಸಿದ ಕುವೆಂಪು ಹಾಗೂ ಬೇಂದ್ರೆಯವರು ಹೊಸಗನ್ನಡ ಸಾಹಿತ್ಯದ ಮೇರು ಶಿಖರಗಳು. ಜ್ಞಾನಪೀಠ ಪ್ರಶಸ್ತಿಗಳನ್ನು ತಂದುಕೊಡುವ ಮೂಲಕ ಕನ್ನಡವನ್ನು ವಿಶ್ವಮಾನ್ಯಗೊಳಿಸಿದವರು. ಇವರನ್ನು ಪರಸ್ಪರ ಹೋಲಿಸಿ ಶ್ರೇಷ್ಠತೆಯ ಶ್ರೇಣಿಯನ್ನು ನೀಡುವುದು ಮೂರ್ಖತನ. ಅದಕ್ಕೆ ಬದಲಾಗಿ ಅವರ ಸಾಹಿತ್ಯದ ಓದಿನ ಮೂಲಕ ನಮ್ಮ ಮನಸ್ಸಿನ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಇತಿಹಾಸ ವಿಭಾಗದ ಮುಖ್ಯಸ್ಥ ಎಂ.ಪಿ. ಗೋಪಾಲ್ ಮಾತನಾಡಿ,  ಕುವೆಂಪು ಮತ್ತು ಬೇಂದ್ರೆ ಎಂಬ ಹೆಸರುಗಳೇ ಸಹೃದಯರಲ್ಲಿ ರೋಮಾಂಚನವನ್ನು ಉಂಟುಮಾಡುತ್ತವೆ. ಅವರು ಸೃಜಿಸಿರುವ ಸಾಹಿತ್ಯ ಮುಂದಿನ ಜನಾಂಗಕ್ಕೆ ದಾರಿದೀಪವಾಗುವ ಶಕ್ತಿಯನ್ನುಳ್ಳದ್ದು. ಇಂದಿನ ಯುವಜನತೆ ಇದನ್ನು ಮನನ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಎಂ. ಮಾದೇಗೌಡ, ಗ್ರಂಥಪಾಲಕ ಎನ್. ಮಂಜುನಾಥ್, ಕನ್ನಡ ಉಪನ್ಯಾಸಕ ಜಿ.ಎಂ. ಕಾಂತರಾಜ್, ವಿದ್ಯಾರ್ಥಿಗಳಾದ ಶಿವಕುಮಾರ್ ಮತ್ತು ಭವಾನಿ ಮಾತನಾಡಿದರು.
ವಿದ್ಯಾರ್ಥಿಗಳು ಹಾಡಿದ ನಾಡಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಲಾಯಿತು. ವಿದ್ಯಾರ್ಥಿನಿ ರೋಜಾ ಸ್ವಾಗತಿಸಿದರು. ರೇಷ್ಮಾ ವಂದಿಸಿದರು. ಶ್ವೇತಾ ಮತ್ತು ದಿನೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಕುವೆಂಪು ಹಾಗೂ ಬೇಂದ್ರೆಯವರ ಗೀತೆಗಳನ್ನು ಕಾರ್ಯಕ್ರಮದಲ್ಲಿ ಗಾಯನ ಮಾಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement