ನಾನಾ ಇಲಾಖೆಗಳ ಖಾಲಿ ಹುದ್ದೆ ಭರ್ತಿಗೆ ಬಿಎಸ್ಪಿ ಆಗ್ರಹ
ಕ.ಪ್ರ. ವಾರ್ತೆ , ಹಾಸನ , ಫೆ 7
ಸರ್ಕಾರದ ನಾನಾ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಎಸ್ಪಿ ಜಿಲ್ಲಾಧ್ಯಕ್ಷ ಹಾಗೂ ವಕೀಲ ಬಿ.ಸಿ. ರಾಜೇಶ್ ಮಾತನಾಡಿ, ಸಮಾಜ ಕಲ್ಯಾಣ ಸಚಿವರು ರಾಜ್ಯದಲ್ಲಿ ಎಸ್ಸಿ ಎಸ್ಟಿ ಬ್ಯಾಕ್ ಲಾಗ್ನ ಸುಮಾರು 3 ಲಕ್ಷ ಹುದ್ದೆಗಳು ನಾನಾ ಇಲಾಖೆಗಳಲ್ಲಿ ಖಾಲಿ ಉಳಿದಿವೆ ಎಂದು ಹೇಳಿದ್ದು, ತಕ್ಷಣ ಯಾವ ಯಾವ ಇಲಾಖೆಗಳಲ್ಲಿ ಎಷ್ಟು ಹುದ್ದೆಗಳು ಖಾಲಿ ಉಳಿದಿವೆ ಎಂಬುದನ್ನು ಪ್ರಕಟಿಸಬೇಕು ಎಂದು ಆಗ್ರಹಿಸಿದರು.
ಇತರೆ ಹಿಂದುಳಿದ ಜಾತಿಗಳಲ್ಲಿಯೂ ಸಹ ಲಕ್ಷಾಂತರ ವಿದ್ಯಾವಂತ ನಿರುದ್ಯೋಗಿಗಳಿದ್ದು, ಅವರಿಗೆ ಶೇ. 27 ಮೀಸಲಾತಿ ಇದೆ. ಆದರೆ ಇದುವರೆಗೆ ಕೇವಲ ಶೇ.5ರಷ್ಟು ಮಾತ್ರ ಜಾರಿಯಲ್ಲಿ ಇದೆ.
ಆದ್ದರಿಂದ, ಸರ್ಕಾರ ತಕ್ಷಣ ಹಿಂದುಳಿದ ವರ್ಗಗಳಿಗೆ ಎಷ್ಟು ಲಕ್ಷ ಬ್ಯಾಕ್ಲಾಗ್ ಹುದ್ದೆಗಳಿವೆ ಎಂಬುದನ್ನು ಇಲಾಖಾವಾರು ಅಂಕಿ ಅಂಶಗಳನ್ನು ನೀಡಬೇಕು ಮತ್ತು ಸೂಕ್ತ ಕಾಲಮಿತಿಯಲ್ಲಿ ನೇಮಕ ಮಾಡಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದ ಅವರು, ಕೆಪಿಎಸ್ಸಿಯಲ್ಲಿ ಈಗಾಗಲೇ ಐಎಎಸ್ ಅಧಿಕಾರಿಗಳ ನೇಮಕಾತಿ ಅಂತಿಮಗೊಂಡಿದ್ದು, ಇದುವರೆಗೂ ಪ್ರಕಟಿಸಿಲ್ಲ. ಸಿಓಡಿ ವರದಿ ಪ್ರಕಾರ ಶೇ. 5ರಷ್ಟು ಭ್ರಷ್ಟಾಚಾರ ನಡೆದಿದೆ ಎಂದು ವರದಿ ನೀಡಿದೆ. ಅದನ್ನು ಹೊರತು ಪಡಿಸಿ ಪ್ರತಿಭಾವಂತ ಶೇ. 95 ವಿದ್ಯಾರ್ಥಿಗಳಿಗೆ ಅನ್ಯಾಯ ವಾಗದಂತೆ ಕೂಡಲೇ ಪಟ್ಟಿಯನ್ನು ಪ್ರಕಟಿಸಬೇಕು ಎಂದು ಒತ್ತಾಯಿಸಿದರು.
ನೇಮಕಾತಿ ಪಟ್ಟಿ ನೀಡಲು ಆಗ್ರಹ: ಈ ಬಾರಿ ಎಸ್ಸಿ ಎಸ್ಟಿ, ಅಲ್ಪಸಂಖ್ಯಾತರು ಮತ್ತು ಹಿಂದುಳಿದವರು ಸಾಮಾನ್ಯ ವರ್ಗದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ. ಇದನ್ನು ಸಹಿಸದ ಕೆಲವು ಪಟ್ಟಭದ್ರ ಹಿತಾಶಕ್ತಿಗಳು ಭ್ರಷ್ಟಾಚಾರದ ಹೆಸರಿನಲ್ಲಿ ಇಡೀ ನೇಮಕಾತಿಯನ್ನೇ ರುದ್ದಪಡಿಸಲು ಚಿತಾವಣೆ ನಡೆಸುತ್ತಿರುವುದು ಖಂಡನೀಯವಾಗಿದೆ. ಭ್ರಷ್ಟಾಚಾರ ಎಸಗಿರುವವರ ವಿರುದ್ಧ ಕ್ರಮವನ್ನುತೆಗೆದುಕೊಳ್ಳಲಿ. ಈ ಹಿಂದೆ ಕೆ ಪಿ ಎಸಸ್ಸಿ ನಡೆದಿರುವಂತಹ ಹಗರಣದಲ್ಲಿ ಭಾಗಿಯಾದವರ ವಿರುದ್ಧ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ ನೇಮಕಾತಿಯನ್ನು ರದ್ದು ಮಾಡಿದ್ದಲ್ಲ. ಆದ್ದರಿಂದ ಸರ್ಕಾರ ನೇಮಕಾತಿ ಪಟ್ಟಿಯನ್ನು ಕೂಡಲೇ ನೀಡಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಂಯೋಜಕ ಎ.ಪಿ. ಅಹಮ್ಮದ್, ಕುಮಾರ್ ಗೌರವ್, ಹರೀಶ್, ರಾಜು ಹಾಗೂ ಇತರರು ಇದ್ದರು.
ಅವಕಾಶ ಕಲ್ಪಿಸಿ
ರಾಜ್ಯ ಸರ್ಕಾರ ಸ್ಮಶಾನ ಭೂಮಿ ನೀಡಲು ತೆಗೆದುಕೊಂಡಿರುವ ತೀರ್ಮಾನ ಒಳ್ಳೆಯ ವಿಚಾರವಾಗಿದ್ದು, ಅದರೆ ಬಗರು ಹುಕುಂ ಸಾಗುವಳಿದಾರರ ಬಗ್ಗೆ ಮೌನವಹಿಸಿರುವ ಸರ್ಕಾರದ ಕ್ರಮ ಸರಿ ಇಲ್ಲ. ತಮ್ಮ ಜೀವನೋಪಾಯಕ್ಕಾಗಿ ಸರ್ಕಾರಿ ಜಮೀನನ್ನು ಸಾಗುವಳಿ ಮಾಡಿಕೊಂಡು ಬಂದಿರುವ ಎಲ್ಲಾ ಜಾತಿಯ ಬಡವರು ಹಾಗೂ ಕೃಷಿ ಕಾರ್ಮಿಕರಿಗೆ ಜಮೀನು ಹಕ್ಕು ಪತ್ರವನ್ನು ನೀಡಬೇಕು ಮತ್ತು ಬಗರ್ ಹುಕುಂ ಸಮಿತಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಮತ್ತು ಈಗಾಗಲೇ ಅರ್ಜಿ ಸಲ್ಲಿಸದವರಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದರು.