ಪಡಿತರ ವಿತರಣೆಯಲ್ಲಿ ಮೋಸ: ಗ್ರಾಮಸ್ಥರಿಂದ ಪ್ರತಿಭಟನೆ
ಹಾಸನ: ಪಡಿತರ ವಿತರಣೆಯಲ್ಲಿ ಸಾರ್ವಜನಿಕರಿಗೆ ಮೋಸ ಮಾಡುತ್ತಿರುವ ನ್ಯಾಯಬೆಲೆ ಅಂಗಡಿಯನ್ನು ರದ್ದು ಪಡಿಸುವಂತೆ ಆಗ್ರಹಿಸಿ ಅರಸೀಕೆರೆ ಕಸಬಾ ಹೋಬಳಿಯ ಯಾದಾಪುರ ಗ್ರಾಮಸ್ಥರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಕಾರರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೆಲ ಸಮಯ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಕಾಳಸಂತೆಯಲ್ಲಿ ಮಾರಾಟ: ಅರಸೀಕೆರೆ ತಾಲೂಕಿನ ಕಸಬಾ ಹೋಬಳಿಯ ಯಾದಾಪುರ ಗ್ರಾಮದಲ್ಲಿ ಶ್ರೀಕೆಂಚಾಂಬ ಮಹಿಳಾ ಸ್ವಸಹಾಯ ಸಂಘ ನ್ಯಾಯಬೆಲೆ ಅಂಗಡಿಯಲ್ಲಿ ಕಳೆದ ತಿಂಗಳು ಸಾರ್ವಜನಿಕರಿಗೆ ಸರಿಯಾಗಿ ಆಹಾರ ಧಾನ್ಯವನ್ನು ಪಡಿತರರಿಗೆ ನೀಡದೆ ವಂಚನೆ ಮಾಡಿದೆ.
ಈ ಬಗ್ಗೆ ತಹಸೀಲ್ದಾರ್ ಅವರು ಸ್ಥಳ ಪರಿಶೀಲನೆ ನಡೆಸಿ ಅವರು ಸಹ ಈ ನ್ಯಾಯ ಬೆಲೆ ಅಂಗಡಿಯಲ್ಲಿ ಸರಿಯಾಗಿ ಸಾರ್ವಜನಿಕರಿಗೆ ಆಹಾರ ಧಾನ್ಯವನ್ನು ನೀಡಿಲ್ಲ ಎಂದು ಸಾಬೀತು ಮಾಡಿದ್ದಾರೆ. ಆದರೂ, ಫೆಬ್ರವರಿ ತಿಂಗಳಿನ ಆಹಾರ ಧಾನ್ಯಗಳನ್ನು ಈಗಾಗಲೇ ಈ ನ್ಯಾಯಬೆಲೆ ಅಂಗಡಿಗೆ ದಾಸ್ತಾನು ಮಾಡಲಾಗಿದೆ.
ಆದ್ದರಿಂದ ಪುನಃನ್ಯಾಯಬೆಲೆ ಅಂಗಡಿ ಸಿಬ್ಬಂದಿ ಸಾರ್ವಜನಿಕರಿಗೆ ಧಾನ್ಯಗಳನ್ನು ಸರಿಯಾಗಿ ವಿತರಣೆ ಮಾಡದೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಆದ್ದರಿಂದ, ಈ ನ್ಯಾಯ ಬೆಲೆ ಅಂಗಡಿಯ ಪರವಾನಗಿಯನ್ನು ರದ್ದು ಪಡಿಸಿ ಬೇರೆಡೆ ನ್ಯಾಯಾಬೆಲೆ ಅಂಗಡಿಯನ್ನು ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಶ್ರೀಕೆಂಚಾಂಬ ಮಹಿಳಾ ಸ್ವಸಹಾಯ ಸಂಘ ನ್ಯಾಯಬೆಲೆ ಅಂಗಡಿಯ ಪರವಾನಗಿಯನ್ನು ರದ್ದು ಪಡಿಸದಿದ್ದರೆ ಈ ವಿರುದ್ಧ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ನಾರಾಯಣಮೂರ್ತಿ, ಶೇಖರಪ್ಪ, ಪ್ರದೀಪ್, ಸಿದ್ದೇಶ್, ರಾಮಚಂದ್ರ, ವೆಂಕಟೇಶ್, ಮಹೇಶ್, ಚೌಡಯ್ಯ, ರಮೇಶ್ ಹಾಗೂ ಇತರರು ಇದ್ದರು.