ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸದಸ್ಯತ್ವ ಉಳಿಸಿಕೊಳ್ಳಲು ಪುರಸಭೆ ಇಒಗೆ ಆಮಿಷ

Vishwanath S
Updated On : 9 Feb 2014, 12:51 pm

ಸಕಲೇಶಪುರ: ಪುರಸಭೆಯ ಕಾಯ್ದೆ ಉಲ್ಲಂಘಿಸಿ ಸದಸ್ಯತ್ವ ಕಳೆದು ಕೊಳ್ಳುವ ಭೀತಿಯಲ್ಲಿ ಇರುವ ಸಂತೋಷ್ ಕುಮಾರ್ ಜೈನ್, ಮುಖ್ಯಾಧಿಕಾರಿಗೆ ಆಮಿಷ ಒಡ್ಡಿ ಸದಸ್ಯತ್ವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ನಾಗರಿಕ ಸಂರಕ್ಷಣೆ ಸಮಿತಿ ಅಧ್ಯಕ್ಷ ರವಿಕುಮಾರ್ ಆರೋಪಿಸಿದರು.
ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂತೋಷ್ ಕುಮಾರ್ ಜೈನ್, ಪುರಸಭೆ ಕಾಯ್ದೆಯ ಅನ್ವಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಅಡೆ- ತಡೆ ಮಾಡುವಂತಿಲ್ಲ. ಈ ರೀತಿ ವರ್ತಿಸಿದರೆ, ಪುರಸಭೆಯ ಕಾಯ್ದೆ ಉಲ್ಲಂಘನೆ ಯಾಗುತ್ತದೆ. ಕುಶಾಲನಗರ ಬಡಾವಣೆಗೆ ರಸ್ತೆ (ನೇತಾಜಿ ರಸ್ತೆ) ಪಕ್ಕದಲ್ಲಿ ಖಾಸಗಿ ವ್ಯಕ್ತಿಯೋರ್ವರು, ರಸ್ತೆಗೆ ಜಾಗ ಬಿಡದೆ ಕಾನೂನು ಬಾಹಿರವಾಗಿ ಕಟ್ಟಡದ ನಿರ್ಮಿಸಿದ ಮೇರೆಗೆ, ಕಟ್ಟಡದ ಒತ್ತುವರಿ ಭಾಗವನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಆದೇಶ ನೀಡಿದ್ದರು. ಈ ಆದೇಶದಂತೆ ಕಳೆದ ಕೆಲ ದಿನಗಳ ಹಿಂದೆ ಪುರಸಭೆ ಸಿಬ್ಬಂದಿ ಕರ್ತವ್ಯ ನಿರ್ವಹಿಸುವಾಗ ಕಟ್ಟಡ ಮಾಲಿಕರ ಬೆಂಬಲಕ್ಕೆ ನಿಂತಿದ್ದ ಸಂತೋಷ್ ಅವರು ಕರ್ತವ್ಯಕ್ಕೆ ಅಡ್ಡಿ ಉಂಟು ಮಾಡಿದ್ದರು. ಈ ಬಗ್ಗೆ ತನ್ನ ಬಳಿ ವಿಡಿಯೋ ಮತ್ತು ಪೋಟೋಗಳ ದಾಖಲೆಗಳಿವೆ. ಅಲ್ಲದೇ, ಲಿಖಿತ ದೂರನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದ್ದೇನೆ. ದೂರಿಗೆ ಸಂಬಂಧಿಸಿದಂತೆ, ಜಿಲ್ಲಾ ನಗರಾಭಿವೃದ್ಧಿಕೋಶ ಇಲ್ಲಿಯ ಪುರಸಭೆಗೆ, ಈ ಪ್ರಕರಣಕ್ಕೆ ಸಂಬಂದಿಸಿದಂತೆ ವರದಿ ಕೇಳಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಇತ್ತೀಚಿಗೆ ಪುರಸಭೆ ಮುಖ್ಯಾಧಿಕಾರಿಯಾಗಿ ಅಧಿಕಾರ ವಹಿಸಿಕೂಂಡಿರುವ ಕೆ. ರಾಮಚಂದ್ರನ್, ಬುಧವಾರ ರಾತ್ರಿ 8.30 ರಿಂದ 9.30ವರೆಗೆ, ಸಂತೋಷ್ ಕುಮಾರ್ ಜೈನ್ ಅವರೊಂದಿಗೆ ಔತಣ ಕೂಟದಲ್ಲಿ ಭಾಗವಹಿಸಿದ್ದರು ಎಂದು ಅವರು ವಿವರಿಸಿದರು.
ಮುಚ್ಚಿಹಾಕುವ ಹುನ್ನಾರ?: ಔತಣ ಕೂಟದಲ್ಲಿ ಭಾಗವಹಿಸಿರುವ ಬಗ್ಗೆ ತನ್ನ ಅಭ್ಯಂತರವಿಲ್ಲ. ಆದರೆ ಆರೋಪಿ ಸ್ಥಾನದಲ್ಲಿರುವ ಪುರಸಭೆ ಸದಸ್ಯನೊಂದಿಗೆ ತನಿಖೆ ಮಾಡಬೇಕಾಗಿರುವ ಅಧಿಕಾರಿ ಔತಣ ಕೂಟದಲ್ಲಿ ಭಾಗವಹಿಸಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಾನು ಕಳೆದ ಫೆ. 3ರಂದು ಮುಖ್ಯಾಧಿಕಾರಿಗಳಿಗೆ ಭೇಟಿಮಾಡಿ ಪ್ರಕರಣಕ್ಕೆ ಸಂಬಂದಿಸಿದಂತೆ ವಿವರಿಸಿದ್ದೇನೆ. ಈ ಸಂದರ್ಭದಲ್ಲಿ ಸಂಬಂಧಪಟ್ಟ ಕೇಸ್‌ವರ್ಕರ್ ಅವರನ್ನು ಕರೆದು ಮಾಹಿತಿಯನ್ನು ಮುಖ್ಯಾಧಿಕಾರಿಯೇ ಪಡೆದಿದ್ದರು. ಆದರೂ ಸಂತೋಷ್ ಕುಮಾರ್ ಜೈನ್ ಅವರು ಒಡ್ಡಿರುವ ಆಮಿಷಕ್ಕೆ ಒಳಗಾಗಿ ಈ ರೀತಿ ಔತಣ ಕೂಟದಲ್ಲಿ ಭಾಗವಹಿಸಿರುವ ಅನುಮಾನಗಳಿವೆ. ಇದರಿಂದ ಪ್ರಕರಣ ಮುಚ್ಚಿಹಾಕು ಹುನ್ನಾರವೂ ನಡೆದಿರಬಹುದು ಎಂಬ ಆತಂಕ ಎದುರಾಗಿದೆ ಎಂದರು.
ಕಟ್ಟಡ ತೆರವು ಸಂದರ್ಭದಲ್ಲಿ ನಡೆದ ಘಟನೆಯ ಸತ್ಯಾಸತ್ಯತೆಯನ್ನು ಪುರಸಭೆಯ ಅಧಿಕಾರಿಗಳು, ಪರ್ತಕರ್ತರು, ಸಾರ್ವಜನಿಕರು, ಪುರಸಭೆ ಸದ್ಯರು ಹಾಗೂ ಅಧ್ಯಕ್ಷರು ಸಾಕ್ಷಿಯಾಗಿದ್ದಾರೆ. ಈ ಪ್ರಕರಣದಲ್ಲಿ ವಾಸ್ತವ ವರದಿ ನೀಡದಿದ್ದರೆ ನಾಗರಿಕ ಸಂರಕ್ಷಣಾ ಸಮಿತಿ ಬೀದಿಗಿಳಿದು ಹೊರಾಟ ನಡೆಸುವುದಾಗಿ ಎಚ್ಚರಿಸಿದರು.
ಆರೋಪಿ ಸ್ಥಾನದಲ್ಲಿರುವ ಪುರಸಭೆ ಸದಸ್ಯನೊಂದಿಗೆ ತನಿಖೆ ಮಾಡಬೇಕಾಗಿರುವ ಅಧಿಕಾರಿ ಔತಣ ಕೂಟದಲ್ಲಿ ಭಾಗವಹಿಸಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
- ರವಿಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement