ಅಕ್ರಮ ಮರಳುಗಾರಿಕೆ ನಡೆಸಿದರೆ ಕ್ರಿಮಿನಲ್ ಮೊಕದ್ದಮೆ: ಎಚ್ಚರಿಕೆ
ಸಕಲೇಶಪುರ: ಅಕ್ರಮ ಮರಳುಗಾರಿಕೆ ನಡೆಸುವವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಉಪವಿಭಾಗಾಧಿಕಾರಿ ಮಧುಕೇಶ್ವರ್ ಎಚ್ಚರಿಸಿದ್ದಾರೆ. ಮಂಗಳವಾರ ಅಕ್ರಮ ಮರಳುಗಾರಿಕೆಯ ತಡೆಗಟ್ಟಲು ಅಧಿಕಾರಿಗಳು ವಿಫಲರಾಗಿದ್ದಾರೆಂದು ಆರೋಪಿಸಿ ಕಾಂಗ್ರೆಸ್ ಮುಖಂಡರು ಧರಣಿಗೆ ಮುಂದಾದ ಸಂದರ್ಭದಲ್ಲಿ ಮಾತನಾಡಿದ ಅವರು, ಅಕ್ರಮ ಮರಳುಗಣಿಗಾರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಆದೇಶ ನೀಡಲಾಗಿದ್ದರೂ ಕರ್ತವ್ಯ ಲೋಪ ಎಸಗಿರುವ ಪಟ್ಟಣ ಠಾಣೆಯ ನಾಲ್ವರು ಪೊಲೀಸ್ ಪೇದೆಗಳು ಹಾಗೂ ಹಾನುಬಾಳ್, ಕಸಬಾ ಹೋಬಳಿ ಕಂದಾಯ ನಿರೀಕ್ಷರ ಮೇಲೆ ಕ್ರಮ ಕೈಗೊಳ್ಳವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದರು.
ಪರಿಶೀಲನೆ: ಮುಂದಿನ ದಿನಗಳಲ್ಲಿ ಅಕ್ರಮ ಮರಳುಗಾರಿಕೆ ನಡೆಸುವುದು ಕಂಡು ಬಂದರೆ ನಿರ್ದಕ್ಷಿಣ್ಯವಾಗಿ ಕ್ರಮಕೈಗೊಳ್ಳುವಂತೆ ಸ್ಥಳದಲ್ಲಿದ್ದ ತಹಸೀಲ್ದಾರ್ ಪಾರ್ವತಿ ಅವರಿಗೆ ಆದೇಶ ನೀಡಿದರು. ನಂತರ ಕಾಂಗ್ರೆಸ್ ಮುಖಂಡರೊಂದಿಗೆ ಪಟ್ಟಣದ ವಿವಿಧೆಡೆ ಮರಳು ಸಂಗ್ರಹಿಸಿರುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಹಾನುಬಾಳ್ ಬಾಸ್ಕರ್, ತುಳಸಿಪ್ರಸಾದ್, ಈಶ್ವರ್ ಆಳ್ವ, ಈಶ್ವರ್, ಪುರಸಭೆ ಸದಸ್ಯರಾದ ಮುಫೀಜ್, ಗೀರಿಶ್, ಕೌಶಲ್ಯ ಲಕ್ಷ್ಮಣೇಗೌಡ, ಸುಂದರಮ್ಮ ಮುಂತಾದವರಿದ್ದರು.