ಇಂದಿನಿಂದ ಗುತ್ತಿಗೆ ಪೌರ ಕಾರ್ಮಿಕರ ಅನಿರ್ದಿಷ್ಟ ಧರಣಿ
ಹಾಸನ: ಗುತ್ತಿಗೆ ಪೌರ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಗುತ್ತಿಗೆ ಕಾರ್ಮಿಕ ಪದ್ದತಿ ರದ್ದುಗೊಳಿಸಿ, ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸಿ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಹಾಗೂ ರಾಜ್ಯ ಬಜೆಟ್ನಲ್ಲಿ ಅದಕ್ಕೆ ಹಣ ಮೀಸಲಿರುಸುವಂತೆ ಆಗ್ರಹಿಸಿ ಸಂಘದ ರಾಜ್ಯ ಸಮಿತಿ ತೀರ್ಮಾನದಂತೆ ಫೆ. 13ರಿಂದ ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅನಿರ್ದಿಷ್ಟ ದರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
ಹಾಸನದಲ್ಲಿಯೂ ಸಹ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಜಿಲ್ಲೆಯ ಎಲ್ಲಾ ಮುನ್ಸಿಪಾಲಿಟಿಗಳಲ್ಲಿ ಗುತ್ತಿಗೆ ಆದಾರದಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರು ಬೇಡಿಕೆ ಈಡೇರುವವರೆಗೂ ಅಹೋರಾತ್ರಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ಸಂಘದ ಜಿಲ್ಲಾಧ್ಯಕ್ಷ ಧರ್ಮೇಶ್ ತಿಳಿಸಿದ್ದಾರೆ.
ಜೀವನ ಭದ್ರತೆಯಿಲ್ಲ: ಕರ್ನಾಟಕ ರಾಜ್ಯದ ಎಲ್ಲಾ ನಗರ ಪಾಲಿಕೆ, ನಗರ ಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತ್ಗಳಲ್ಲಿ ಕಳೆದ 10-15 ವರ್ಷಗಳಿಂದ ಸಾವಿರಾರು ಜನರು ನೈರ್ಮಲ್ಯ, ಸ್ವಚ್ಛ, ಲೋಡರ್, ಯುಜಿಡಿ ಕಾರ್ಮಿಕರು, ವಾಟರ್ ಮ್ಯಾನ್, ಡ್ರೈವರ್, ಎಲೆಕ್ಟ್ರಿಷಿಯನ್ ಕಚೇರಿ ಸಹಾಯಕರಾಗಿ, ಕಂಪ್ಯೂಟರ್ ಆಪರೇಟರ್ಗಳಾಗಿ ದಿನಗೂಲಿ, ಗುತ್ತಿಗೆ ಹಾಗೂ ಹೊರಗುತ್ತಿಗೆ ಕಾರ್ಮಿಕರಾಗಿ ದುಡಿಯುತ್ತಾ ಬಂದಿದ್ದಾರೆ. ಈ ಕಾರ್ಮಿಕರಿಲ್ಲದೆ ನಗರ ಸ್ಥಳೀಯ ಸಂಸ್ಥೆಗಳ ಕೆಲಸಗಳು ನಡೆಯಲಾರವು. ಆದರೆ ಈ ಕಾರ್ಮಿಕರಿಗೆ ಉದ್ಯೋಗ ಭದ್ರತೆಯಿಲ್ಲದೆ, ಕಾರ್ಮಿಕ ಕಾನೂನುಗಳ ಪ್ರಯೋಜನವಿಲ್ಲದೆ, ಸಾಮಾಜಿಕ ಭದ್ರತೆಗಳಿಲ್ಲದೆ ಅತೀವ ಸಂಕಷ್ಟಮಯವಾದ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಸರ್ಕಾರ ಗಮನ ನೀಡುತ್ತಿಲ್ಲ: ಇಂತಹ ಕಾರ್ಮಿಕರನ್ನು ಸಿಐಟಿಯು ನೇತೃತ್ವದಲ್ಲಿ ರಾಜ್ಯಾದ್ಯಂತ ಸಂಘಟಿಸಿ ಅವರ ಹಕ್ಕುಗಳ ರಕ್ಷಣೆಗಾಗಿ ಸಂಘಟಿತ ಹೋರಾಟ ನಡೆಸಲಾಗುತ್ತಿದೆ. ಆದರೆ ಇದುವರೆವಿಗೂ ಇಂತಹ ಕಾರ್ಮಿಕರ ಕಲ್ಯಾಣಕ್ಕಾಗಲೀ, ಸಾಮಾಜಿಕ ಭದ್ರತೆಗಾಗಲೀ ಸರ್ಕಾರ ಯಾವುದೇ ಕಾರ್ಯಕ್ರಮ ಹಾಕಿಕೊಂಡಿಲ್ಲ. ನಾಗರಿಕ ಸಮಾಜದಲ್ಲಿ ಅತ್ಯಂತ ಕೆಳಹಂತದ ಕೆಲಸ ಮಾಡಿ ನಾಗರಿಕ ಸೇವೆ ಸಲ್ಲಿಸಿ, ಅತೀ ಕನಿಷ್ಟ ಮಟ್ಟದ ಜೀವನ ಸಾಗಿಸುತ್ತಿರುವ ಇವರ ಬಗ್ಗೆ ಸರ್ಕಾರಕ್ಕೆ ಕಾಳಜಿಯಿಲ್ಲ. ದಲಿತ ಹಾಗೂ ಹಿಂದುಳಿದ ಜಾತಿಗಳಿಗೆ ಸೇರಿರುವ ಇವರ ಏಳಿಗೆಗೆ ಸರ್ಕಾರ ಗಮನ ನೀಡುತ್ತಿಲ್ಲ ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಿಐಟಿಯು ನೇತೃತ್ವದ ಕರ್ನಾಟಕ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘದ ಅಡಿಯಲ್ಲಿ ಫೆ. 13ರಿಂದ ಗುತ್ತಿಗೆ ಪೌರ ಕಾರ್ಮಿಕರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ರಾಜ್ಯ ಸರ್ಕಾರದ ಬಜೆಟ್ನಲ್ಲಿ ಮುನ್ಸಿಪಲ್ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು, ಕಾಯಂಗೊಳಿಸಲು ಹಣ ಮೀಸಲಿರುಸುವಂತೆ ಆಗ್ರಹಿಸಿ, ರಾಜ್ಯಾದ್ಯಂತ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೇಡಿಕೆ ಈಡೇರುವವರೆಗೆ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ನಡೆಯಲಿದೆ. ಆದ್ದರಿಂದ ಜಿಲ್ಲೆಯ ಎಲ್ಲಾ ಮುನ್ಸಿಪಾಲಿಟಿಗಳಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ವಿಧವಾದ ಗುತ್ತಿಗೆ ಕಾರ್ಮಿಕರು ಈ ಹೋರಾಟದಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.