ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮುಖ್ಯ ಶಿಕ್ಷಕ ಸೇರಿ 5 ಮಂದಿ ಬಂಧನ

Vishwanath S
Updated On : 13 Feb 2014, 1:20 am

ಬೇಲೂರು: ಗಂಗೂರಿನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ 12 ಮಕ್ಕಳಿಗೆ ಕ್ಷೌರ ಮಾಡಿಸಿದ ಮುಖ್ಯ ಶಿಕ್ಷಕ ಸೇರಿದಂತೆ 5 ಮಂದಿಯನ್ನು ಬಂಧಿಸಲಾಗಿದ್ದು, ಫೆ. 26ರವರೆಗೆ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಆದೇಶ ನೀಡಿದೆ. ಗಂಗೂರು ಗ್ರಾಮದಲ್ಲಿ ಬುಧವಾರವೂ ಬಿಗುವಿನ ವಾತಾವರಣವಿದ್ದು ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಧಾರಾವಾಹಿ ನಟ ಹಾಗೂ ಕ್ಷೌರಿಕ ಮುತ್ತುರಾಜ್, ಖಾಸಗಿ ಸುದ್ದಿ ವಾಹಿನಿ ಹಾಸನದ ವರದಿಗಾರ ಸೇರಿದಂತೆ 20 ಮಂದಿ ಮೇಲೆ ಹಳೆಬೀಡು ಪೊಲೀಸ್ ಠಾಣೆಯಲ್ಲಿ 143, 341, 355, 354, 114, 295 ರ ಕಾಯ್ದೆನ್ವಯ ದೂರು ದಾಖಲಾಗಿದೆ. ಮುಖ್ಯಶಿಕ್ಷಕ ಯಶೋಧರನಾಯ್ಕ, ಮಲ್ಲೇಶ್, ಮಹೇಶ್, ರವಿ, ರಂಗಸ್ವಾಮಿಯನ್ನು ದಸ್ತಗಿರಿ ಮಾಡಿ ನ್ಯಾಯಾಂಗ  ವಿಚಾರಣೆಗೆ ಒಪ್ಪಿಸಲಾಗಿದೆ.
ಗ್ರಾಮಸ್ಥರ ಪ್ರಶ್ನೆ: 12 ಮಕ್ಕಳಿಗೆ ಸಮಾನತೆ ಬಿಂಬಿಸುವ ಕಾರಣ ಕೊಟ್ಟು ಕ್ಷೌರ ಮಾಡಿಸಿದ ಘಟನೆಯಿಂದ ಗ್ರಾಮದಲ್ಲಿ ಪ್ರಕ್ಷುಬ್ದ ವಾತಾವರಣ ಉಂಟಾಗಿದೆ. ಇಡೀ ಗ್ರಾಮ ಬೂದಿ ಮುಚ್ಚಿದ ಕೆಂಡದಂತೆ ಇದ್ದು ಜಿಲ್ಲಾಧಿಕಾರಿ, ಎಸ್ಪಿ, ಡಿವೈಎಸ್ಪಿ, ಡಿಎಸ್‌ಪಿ, ಸರ್ಕಲ್ ಇನ್ಸ್‌ಪೆಕ್ಟರ್ ಹಾಗೂ ಬಿಇಓ ಬೇಟಿ ನೀಡಿ ಪರಿಸ್ಥಿತಿ ಸುಧಾರಿಸಲು ಪ್ರಯತ್ನಿಸುತ್ತಿದ್ದಾರೆ.
ಸರ್ಕಾರಿ ಶಾಲೆಗೆ ಒಂದು ಕೋಮಿನವರು ಟಿವಿ ಮಾಧ್ಯಮದವರನ್ನು ತಮ್ಮ ಜೊತೆ ಕರೆದುಕೊಂಡು ಬಂದು 4 ದಲಿತರು, 8 ಸವರ್ಣೀಯ ವಿದ್ಯಾರ್ಥಿಗಳಿಗೆ ಕ್ಷೌರ ಮಾಡಿಸಿದ್ದಾರೆ. ಯಾವ ಧೈರ್ಯದ ಮೇಲೆ ಇವರು ಮಕ್ಕಳನ್ನು ಬಲವಂತವಾಗಿ ಕರೆತಂದು ಕ್ಷೌರ ಮಾಡಿಸಿದರು ಎಂಬುದನ್ನು ಬಹಿರಂಗಪಡಿಸಿಬೇಕು. ಅಲ್ಲದೇ ಕೆಲವು ಮಾಧ್ಯಮಗಳಲ್ಲಿ ಈ ಪ್ರಕರಣದಲ್ಲಿ ಗ್ರಾಮಸ್ಥರದೇ ತಪ್ಪು ಎನ್ನುವಂತೆ ಬಿಂಬಿಸಲಾಗಿದ್ದು, ನಮ್ಮ ಮಕ್ಕಳ ಯೋಗಕ್ಷೇವು ವಿಚಾರಿಸಲು ಮುಂದಾಗಿದ್ದು ನಮ್ಮ ತಪ್ಪೇ ಎಂಬುದಾಗಿ ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.
ಹಾಜರಾತಿ ಇಳಿಮುಖ: ಗಂಗೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಸುಂದ್ರೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಾಲೆಯಲ್ಲಿ ಒಟ್ಟು 108 ಮಕ್ಕಳಿದ್ದು, ಬುಧವಾರ ಕೇವಲ 58 ಮಕ್ಕಳು ಬಂದಿದ್ದರು. ಕ್ಷೌರವನ್ನು ಮಾಡಿಸಿಕೊಂಡಿದ್ದು 12 ಮಕ್ಕಳಲ್ಲಿ 7 ಮಕ್ಕಳು ಶಾಲೆಗೆ ಗೈರು ಹಾಜರಿಯಾಗಿದ್ದರು. ಕ್ಷೌರ ಪ್ರಕರಣ ನಡೆದ ಹಿನ್ನಲೆಯಲ್ಲಿ ಕೆಲವು ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಲು ಹಿಂದೇಟು ಹಾಕುತ್ತಿದ್ದಾರೆ.
ಶಾಲೆಯಲ್ಲಿರುವ 5 ಶಿಕ್ಷಕರಲ್ಲಿ ಮುಖ್ಯಶಿಕ್ಷಕರು ನ್ಯಾಯಾಂಗ ಬಂಧನದಲ್ಲಿರುವುದರಿಂದ 4 ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಅವರಲ್ಲೂ ಆತಂಕ ಮನೆಮಾಡಿದ್ದು ಯಾವ ಕ್ಷಣದಲ್ಲಿ ಏನಾಗಬಹುದು ಎಂಬ ದುಗುಡ ಅವರಲ್ಲಿ ಮನೆ ಮಾಡಿತ್ತು. ಇದು ಸಾಲದು ಎಂಬಂತೆ ಕೆಲವು ಗ್ರಾಮಸ್ಥರು ಶಾಲೆಯ ಕಾರಿಡಾರ್, ಆವರಣದಲ್ಲಿ ಆಗಾಗ ಅಡ್ಡಾಡುತ್ತಾ ಶಾಲೆಗೆ ಬಂದು ಹೋಗುವವರನ್ನು ವಿಚಾರಣೆ ಮಾಡಿ ಮುಂದೆ ಬಿಡುತ್ತಿದ್ದರು.
ಬಿಇಓ ಭೇಟಿ, ಪರಿಶೀಲನೆ: ಕ್ಷೌರ ಪ್ರಕರಣದ ಹಿನ್ನಲೆಯಲ್ಲಿ ಗಂಗೂರಿನ ಹಿರಿಯ ಪ್ರಾಥಮಿಕ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ ನೀಡಿ ಮಕ್ಕಳ ಹಾಜರಾತಿ ಹಾಗೂ ಶಿಕ್ಷಕರ ಸಮಸ್ಯೆಯನ್ನು ಆಲಿಸಿದರು. ಈ ಸಂದರ್ಭದಲ್ಲಿ ಕನ್ನಪ್ರಭದೊಂದಿಗೆ ಮಾತನಾಡಿ, ಮಕ್ಕಳು ಯಾವುದೇ ಸಂದರ್ಭದಲ್ಲಿ ಶಿಕ್ಷಣದಿಂದ ವಂಚಿತರಾಗಬಾರದು ಎಂಬುದು ಸರ್ಕಾರದ ಉದ್ದೇಶ. ಈ ನಿಟ್ಟಿನಲ್ಲಿ ಇಂದಿಗಿಂತ ನಾಳೆಯೂ ಹಾಜರಾತಿ ಕಡಿಮೆಯಾದ ಪಕ್ಷದಲ್ಲಿ ಶಿಕ್ಷಕರೊಂದಿಗೆ ತಾವೇ ಖುದ್ದಾಗಿ ಪೋಷಕರ ಮನೆಗೆ ತೆರಳಿ ಶಾಲೆಗೆ ಕಳಿಸುವಂತೆ ಮನವೊಲಿಸಲಾಗುವುದು. ಕ್ಷೌರ ಮಾಡಿಸಲು ಅವಕಾಶ ಮಾಡಿಕೊಟ್ಟ ಮುಖ್ಯ ಶಿಕ್ಷಕ ಯಶೋಧರ ನಾಯ್ಕ ಅವರನ್ನು ಸೇವೆಯಿಂದ ವಜಾ ಮಾಡಲಾಗಿದೆ. ಅಲ್ಲದೇ ಈಗ ಅವರು ಇದೇ ಪ್ರಕರಣಕ್ಕೆ ನ್ಯಾಯಾಂಗ ಬಂಧನಕ್ಕೊಳಗಾಗಿದ್ದಾರೆ. ಈಗಾಗಲೇ ಅವರ ಕಾರ್ಯವೈಖರಿ ಹಾಗೂ ಪೊಲೀಸ್ ವರದಿಯನ್ನು ಮೇಲಾಧಿಕಾರಿಗೆ ಕಳಿಸಿಕೊಡಲಾಗಿದೆ ಎಂದರು.
ಬೇಜವ್ದಾರಿತನ: ಶಾಲಾ ಸಮಯದಲ್ಲಿ ಅಕ್ಷರ ದಾಸೋಹ ಇದ್ದಗ್ಯೂ ಶಾಲಾವರಣದಿಂದ ಮಕಳನ್ನು ಶಾಲೆಯ ಹೊರಗೆ ಕಳುಹಿಸಿದ್ದು, ಮಕ್ಕಳನ್ನು ಪೋಷಕರ ಪೂರ್ವಾನುಮತಿಯಿಲ್ಲದೆ ಇತರ ಯಾವುದೇ ಕೆಲಸ ಕಾರ್ಯಕ್ಕೆ, ಶಾಲೆಯಿಂದ ಮಕ್ಕಳನ್ನು ಹೊರ ಕಳುಹಿಸಬಾರದು ಎಂಬುದು ಇಲಾಖೆಯ ಸ್ಪಷ್ಟ ಆದೇಶವಿದೆ. ಆದೇಶ ಉಲ್ಲಂಘನೆ ಮಾಡಿರುವುದು ಮೇಲ್ನೋಟಕ್ಕೆ ಸ್ವಷ್ಟವಾಗಿದೆ ಎಂಬುದಾಗಿ ಬಿಇಓ ತಿಳಿಸಿದ್ದಾರೆ.


-ಎ.ರಾಘವೇಂದ್ರ ಹೊಳ್ಳ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement