ವಿವಾದಕ್ಕೊಳಗಾದ ಜಮೀನು ಹಸ್ತಾಂತರ: ಗ್ರಾಪಂ ಆಕ್ರೋಶ
ಚನ್ನರಾಯಪಟ್ಟಣ: ತಾಲೂಕಿನ ನುಗ್ಗೇಹಳ್ಳಿ ಗ್ರಾಮದ ಸರ್ವೆ ನಂ. 274ರಲ್ಲಿ 13ಗುಂಟೆ ಜಮೀನನ್ನು ಗ್ರಾಮ ಪಂಚಾಯಿತಿ ತನ್ನದೆಂದು ಹೇಳಿಕೊಳ್ಳುತ್ತಿರುವ ಸಂದರ್ಭದಲ್ಲೇ ಕಂದಾಯ ಇಲಾಖೆ ಬಿಗಿ ಪೊಲೀಸ್ ಬಂದೋಬಸ್ತ್ನೊಂದಿಗೆ ಮಂಜೂರು ಮಾಡಿದ 6 ಮಂದಿಗೆ ಗುರುವಾರ ಬೆಳಗ್ಗೆ ಸ್ವಾಧೀನ ಪತ್ರ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.
ಗ್ರಾಮ ಪಂಚಾಯಿತಿ 70 ವರ್ಷದಿಂದ ಹಲವು ಯೋಜನೆಗಳು ಹಾಗೂ ಕಟ್ಟಡಗಳನ್ನು ವಿವಾದಿತ ಸರ್ವೆ ನಂಬರ್ನಲ್ಲಿ ಹೊಂದಿದ್ದರೂ ಅದೇ ಭೂಮಿಯನ್ನು 6 ಮಂದಿ ತಮಗೆ ಸೇರಿದ್ದೆಂದು ಮಂಜೂರು ಮಾಡಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ, 6 ಮಂದಿಗೆ ಜಮೀನಿನ ಸ್ವಾಧೀನ ಪತ್ರವನ್ನು ಹಾಸನ ಉಪ ವಿಭಾಗಾಧಿಕಾರಿಗಳು ನೀಡುವ ಜತೆಗೆ ಜಮೀನಿನಲ್ಲಿದ್ದ ತಂತಿ ಬೇಲಿ ತೆರವುಗೊಳಿಸಿ ಸ್ವಾಧೀನಕ್ಕೆ ನೀಡಿದರು.
ಗ್ರಾಮ ಪಂಚಾಯಿತಿ ಕಳೆದ 70 ವರ್ಷಗಳಿಂದ ಸ್ವಾಧೀನದಲ್ಲಿರುವ ಹಲವು ಕುರುಹುಗಳಿದ್ದರೂ ಯಾವುದೇ ಅಧಿಕೃತ ದಾಖಲೆಗಳಿಲ್ಲದ ಕಾರಣ ಮೂಲ ದಾಖಲಾತಿ ಹಾಗೂ ಮಂಜೂರು ಪತ್ರವಿದ್ದ 6 ಮಂದಿ ರೈತರಿಗೆ 13ಗುಂಟೆ ಜಮೀನಿನ ಸ್ವಾಧೀನ ಪತ್ರವನ್ನು ಹಾಸನ ಉಪವಿಭಾಗಾಧಿಕಾರಿ ಶರತ್ ನೀಡುವ ಮುಖೇನ ವಿವಾದಕ್ಕೆ ತೆರೆ ಎಳೆದರು.
ಗುರುವಾರ ಮಂಜಾನೆಯೇ ಜಮೀನಿನ ಸ್ವಾಧೀನ ನೀಡಲೆಂದು ಜಮೀನಿನಲ್ಲಿದ್ದ ಗ್ರಾಮ ಪಂಚಾಯಿತಿ ಕೆಲ ವಸ್ತುಗಳನ್ನು ತೆರವುಗೊಳಿಸಿ ಇದೇ ಸರ್ವೆ ನಂಬರ್ನಲ್ಲಿದ್ದ ಮೂರು ಗುಂಟೆ ಖರಾಬಿಗಿ ತಂತಿ ಬೇಲಿ ಹಾಕಿಸಿ 13 ಗುಂಟೆ ಜಮೀನನ್ನು ಮೂಲ ದಾಖಲಾತಿ ಹೊಂದಿರುವವರಿಗೆ ನೀಡಿದರು.
ಈ ಬಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಪ್ರತಿಕ್ರಿಯಿಸಿ, 13 ಗುಂಟೆ ಜಮೀನಿನಲ್ಲಿ ಗ್ರಾಮ ಪಂಚಾಯಿತಿಯ ಕೊಳವೆ ಬಾವಿ ಹಾಗೂ ಪಂಪ್ ಹೌಸ್ ಇದ್ದು, ಇದರ ಜತೆಗೆ ಹಿಂದೆ ಸಬ್ ರಿಜಿಸ್ಟ್ರಾರ್ ಕಚೇರಿ ಕೂಡ ಇತ್ತು. ಗ್ರಾಮ ಪಂಚಾಯಿತಿಗೆ ಸೇರಿದ ಆಸ್ತಿಯನ್ನು ಅಕ್ರಮವಾಗಿ ಕಂದಾಯ ಇಲಾಖೆಯವರು ಮಂಜೂರು ಮಾಡಿದ್ದಾರೆ ಎಂದು ಆಪಾದಿಸಿದರು. 13 ಗುಂಟೆ ಜಮೀನಿನ ವಿವಾದ ಹೀಗಾಗಲೇ ಹಾಸನದ ಸತ್ರ ನ್ಯಾಯಾಲಯದ ಮೆಟ್ಟಿಲೇರಿದ್ದು, ನ್ಯಾಯಾಲಯದ ಉಲ್ಲಂಘನೆ ಮಾಡಿ ಜಮೀನು ಸ್ವಾಧೀನ ನೀಡಿರುವುದು ನ್ಯಾಯಾಲಯಕ್ಕೆ ಅಪಮಾನಿಸಿದಂತಾಗಿದ್ದು ಈ ಬಗ್ಗೆ ಇಂದೇ ಪ್ರಶ್ನಿಸುವುದಾಗಿ ತಿಳಿಸಿದರು.