ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಶಾಂತಿಸಭೆಯಲ್ಲಿ ಗೊಂದಲ, ಹೊಡೆದಾಟ

Vishwanath S
Updated On : 14 Feb 2014, 12:24 pm

ಬೇಲೂರು: ತಾಲೂಕಿನ ಗಂಗೂರು ಗ್ರಾಮದಲ್ಲಿ ದಲಿತರ ದೇಗುಲ ಪ್ರವೇಶ ಹಾಗೂ ಎಚ್ಪಿಎಸ್ ಶಾಲೆಯಲ್ಲಿ ಸಾಮೂಹಿಕ ಕ್ಷೌರ ಪ್ರಕರಣ ದಿನದಿಂದ ದಿನಕ್ಕೆ ತಿರುವು ಪಡೆದುಕೊಳ್ಳುತ್ತಿದ್ದು, ಗುರುವಾರ ಗ್ರಾಮಸ್ಥರು ಕರೆದಿದ್ದ ಶಾಂತಿ ಸಭೆ ಗೊಂದಲ ಉಂಟಾಯಿತು. ಇದರಿಂದ ಸಭೆ ಅರ್ಧಕ್ಕೇ ಮೊಟಕು ಗೊಂಡಿತು.
ಇದೇ ಸಂದರ್ಭದಲ್ಲಿ ಕ್ಷೌರ ಪ್ರಕರಣ ಆರೋಪಿ ಭಾಗ್ಯ ಮೇಲೆ ಹಲ್ಲೆ ನಡೆದಿದ್ದು   ಪ್ರಕರಣ ಮತ್ತೆ ಬೇರೆ ತಿರುವನ್ನು ಪಡೆದುಕೊಂಡಿದೆ.
ಕಳೆದ ವಾರ ನಡೆದ ದಲಿತರ  ದೇವಾಲಯ ಪ್ರವೇಶ ಹಾಗೂ 2 ದಿನ ಹಿಂದೆ ನಡೆದ  ಶಾಲಾ ಮಕ್ಕಳ ಕ್ಷೌರ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಶಾಂತಿಸಭೆಯನ್ನು ಗಂಗೂರಿನಲ್ಲಿ ಕರೆಯಲಾಗಿತ್ತು. ಸಭೆಗೆ ದಲಿತರು, ಸವರ್ಣೀಯರು, ಸಮಾಜಕಲ್ಯಾಣ ಇಲಾಖೆಯ ಅಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳು ಆಗಮಿಸಿದ್ದರು. ಶಾಂತಿ ಸಭೆಯ ಹಿನ್ನೆಲೆಯಲ್ಲಿ ಗ್ರಾಮದ ಎಲ್ಲಾ ವರ್ಗದವರೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗ ವೇದಿಕೆಗೆ ಜಮಾಯಿಸಿದ್ದರು.
ಅಧಿಕಾರಿಗಳ ಕಿವಿಮಾತು: ಸಭೆ ಬೆಳಿಗ್ಗೆ 11 ಗಂಟೆಗೆ ಆರಂಭವಾಗುತ್ತಿದ್ದಂತೆ ಹಳೇಬೀಡು ಸಬ್ ಇನ್ಸ್‌ಪೆಕ್ಟರ್ ಮಂಜು ಮಾತನಾಡಿದರು. ಸಭೆಗೆ ಬಂದಿದ್ದ ಗ್ರಾಮದ ದಲಿತ ಮಹಿಳೆಯರು, ತಾವು ಅನಾದಿ ಕಾಲದಿಂದಲೂ ಗ್ರಾಮದಲ್ಲಿ ಸೌಹಾರ್ದಯುತ ವಾತಾವರಣದಲ್ಲಿ ಜೀವನ ಸಾಗಿಸುತ್ತಿದ್ದೇವೆ. ಆದರೆ, ಇತ್ತೀಚಿನ ದಿನದಲ್ಲಿ ಸಾಮರಸ್ಯ ಜೀವನ ಕದಡಲು ಕೆಲವು ಪ್ರಯತ್ನಿಸುತ್ತಿದ್ದು ನಾವು ಸವರ್ಣೀಯರಿಗೆ ಬೆಂಬಲ ನೀಡುತ್ತಿದ್ದೇವೆ ಎಂದು ತಮ್ಮ ಮೇಲೆ ತಮ್ಮವರೇ ಹಲ್ಲೆ ಮಾಡಲು ಮುಂದಾಗಿದ್ದಾರೆ. ದಲಿತರು ಸವರ್ಣೀಯರು ಪರಸ್ಪರ ಸಹಬಾಳ್ವೆಯಿಂದ ಇರಬೇಕು ಎಂದು ಹೇಳಿದರು
ನಂತರ ಸಮಾಜ ಕಲ್ಯಾಣಾಧಿಕಾರಿ ಲಕ್ಷ್ಮೇಗೌಡ ಮಾತನಾಡಿ, ಎಲ್ಲರ ರಕ್ತ ಒಂದೇ, ಎಲ್ಲಾ ಜಾತಿಯಲ್ಲೂ ಒಳ ಜಾತಿ ಇದ್ದು ಅವರಲ್ಲೇ ಪರಸ್ವರ ಹೊಂದಾಣಿಕೆ ಇರುವುದಿಲ್ಲ. ಉದಾಹರಣೆ ದಲಿತರಲ್ಲೇ ಎಡಗೈ ಹಾಗೂ ಬಲಗೈ ಎಂಬ ಎರಡು ವರ್ಗವಿದ್ದು ಇವರಿಬ್ಬರ ಮಧ್ಯೆ ಕೊಟ್ಟು ತರುವ ವ್ಯವಸ್ಥೆ ಇಲ್ಲ. ಗ್ರಾಮಗಳು ಅಭಿವೃದ್ಧಿಯಾಗಬೇಕಾದರೆ ಸಾಮರಸ್ಯ ಜೀವನ ಬಹಳ ಮುಖ್ಯವಾಗಿದೆ ಎಂದರು.
ಆರೋಪಿಯನ್ನು ಬಂಧಿಸಲು ಆಗ್ರಹ: ಇದೇ ಸಂದರ್ಭದಲ್ಲಿ ಗ್ರಾಮದ ಅನ್ನಪೂರ್ಣ ಎಂಬ ಮಹಿಳೆ ಮಾತನಾಡಿ, ನಾವು ಗ್ರಾಮದಲ್ಲಿ ಬಹಳ ವರ್ಷದಿಂದ ಸಾಮರಸ್ಯ ಜೀವನ ನಡೆಸುತ್ತಿದ್ದೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಸೌಹಾರ್ದತೆಗೆ ಧಕ್ಕೆ ತರುವಂತಹ ಪ್ರಕರಣ ನಡೆದಿದ್ದು ಮಕ್ಕಳಿಗೆ ಕ್ಷೌರ ಮಾಡಿಸಿದ ಆರೋಪಿ ಪಟ್ಟಿಯಲ್ಲಿರುವ  ಭಾಗ್ಯಲಕ್ಷ್ಮಿ ಮತ್ತು ಚಂದ್ರಯ್ಯ ಅವರನ್ನು ಶಾಂತಿ ಸಭೆಗೆ ಕರೆತರುವ ಔಚಿತ್ಯವೇನಿತ್ತು ಎಂದು ಪ್ರಶ್ನಿಸಿದರು.  
ಮಹಿಳೆಯರ ಹೊಡೆದಾಟ: ಆಗ ಸಭೆಯಲ್ಲಿದ್ದ ಕೆಲವು ಮಹಿಳೆಯರು, ನಿನ್ನಿಂದಲೇ ತಮ್ಮ ಮಕ್ಕಳ ಕ್ಷೌರ ಆಗಿದ್ದು ಎಂದು ಭಾಗ್ಯಲಕ್ಷ್ಮಿ ಮೇಲೆ ಹಲ್ಲೆ ಮಾಡಲು ಮುಂದಾದರು. ಇವರ ಜೊತೆ ಕೆಲವು ದಲಿತ ಮಹಿಳೆಯರು ನಿನ್ನಿಂದ ನಾವು ಆತಂಕದಲ್ಲಿ ಬದುಕುವಂತಾಗಿದೆ ಎಂದು ಅವರೂ ಹಲ್ಲೆ ನಡೆಸಿದರು. ಆಗ, ಪೋಲಿಸರು ಮಧ್ಯೆ ಪ್ರವೇಶ ಮಾಡಿ ಭಾಗ್ಯಲಕ್ಷ್ಮಿ ಅವರನ್ನು ಜೀಪಿನಲ್ಲಿ ಕೂರಿಸಿ ಹಳೆಬೀಡಿಗೆ ಕಳಿಸಿಕೊಟ್ಟರು.
ಫೇರಾವ್: ದೇವಾಲಯ ಪ್ರವೇಶ ಹಾಗೂ ಮಕ್ಕಳಿಗೆ ಕ್ಷೌರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಲಕ್ಷ್ಮೇಗೌಡ ದ್ವಂದ್ವ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಶಾಂತಿಸಭೆಗೆ ಆರೋಪಿ ಪಟ್ಟಿಯಲ್ಲಿರುವ ಭಾಗ್ಯಲಕ್ಷ್ಮಿ ಹಾಗೂ ಚಂದ್ರಯ್ಯನನ್ನು ಅಧಿಕಾರಿಯ ಕಾರಿನಲ್ಲೇ ಕರೆತಂದಿದ್ದು ಏಕೆ ಎಂದು ಆಕ್ರೋಶ ವ್ಯಕ್ತಪಡಿಸಿದಾಗ ಉದ್ವಿಗ್ನ ವಾತಾವರಣ ಉಂಟಾಗಿ, ಕೆಲಕಾಲ ನೂಕಾಟ ತಳ್ಳಾಟ ನಡೆಯಿತು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯನ್ನು ಪೊಲೀಸರ ರಕ್ಷಣೆಯಲ್ಲಿ ಕರೆತಂದು ಕಾರಿಗೆ ಕೂರಿಸಿ ಕಳಿಸಿಕೊಡಲಾಯಿತು.
ನಿರ್ಲಿಪ್ತರಾಗಿದ್ದ ಶಾಸಕರು: ಇಷ್ಟೆಲ್ಲಾ ಪ್ರಕರಣ ತಿರುವು ಪಡೆಯುತ್ತಿದ್ದರೂ ಶಾಸಕರು ಮಧ್ಯಪ್ರವೇಶಿಸದೇ ಇದ್ದಿದ್ದಕ್ಕೆ ನೆರೆದಿದ್ದವರಿಗೆ ಆಶ್ಚರ್ಯ ಉಂಟಾಗಿತ್ತು.
ಹೊಸ ತಿರುವು: ಗಂಗೂರಿನಲ್ಲಿ ಗುರುವಾರ ನಡೆದ ಶಾಂತಿಸಭೆಯ ಸಂದರ್ಭದಲ್ಲಿ ಮಕ್ಕಳಿಗೆ ಕ್ಷೌರ ಪ್ರಕರಣದ ಆರೋಪಿ ಪಟ್ಟಿಯಲ್ಲಿರುವ ಭಾಗ್ಯಲಕ್ಷ್ಮಿ ಮೇಲೆ ನಡೆದ ಹಲ್ಲೆಯ ಘಟನೆ ಮಧ್ಯಾಹ್ನದ ವೇಳೆಗೆ ಹೊಸ ತಿರುವು ಪಡೆದಿಕೊಂಡಿತು. ಹಲ್ಲೆ ನಡೆಸಿದ ಸವರ್ಣೀಯರನ್ನು ಬಂಧಿಸುವಂತೆ ನಾನಾ ದಲಿತ ಸಂಘಟನೆಗಳು ಆಗ್ರಹಿಸಿವೆ. ಹಲ್ಲೆಗೊಳಗಾಗಿದ್ದ ಭಾಗ್ಯಲಕ್ಷ್ಮಿಯನ್ನು ಆರೋಗ್ಯ ವಿಚಾರಿಸಲು ಉಪ ವಿಭಾಗಾಧಿಕಾರಿ ಮಧುಕೇಶ್ವರ್, ತಹಸೀಲ್ದಾರ್ ಜಗದೀಶ್ ಹಾಗೂ ಸಂಘಟನೆಯ ಪ್ರಮುಖರು ಸರ್ಕಾರಿ ಆಸ್ಪತ್ರೆಗೆ ಆಗಮಿಸಿದ್ದರು.
ನಮ್ಮನ್ನು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಭೆಗೆ ಆಹ್ವಾನಿಸಿದ್ದರು. ಸಭೆಗೆ ಬಂದ ನಂತರ ನನ್ನನ್ನು ಅವಮಾನವೀಯವಾಗಿ ನಡೆಸಿಕೊಂಡು, ಹಲ್ಲೆ ಮಾಡಿದ್ದಲ್ಲದೆ ಅರೆವಸ್ತ್ರದಲ್ಲಿ ಓಡಾಡಿಸಿದ್ದಾರೆ. ಆಗ, ನನ್ನ ರಕ್ಷಣೆಗೆಯಾರೂ ಬರಲಿಲ್ಲ. ಗ್ರಾಮದಲ್ಲಿ ದಲಿತರು ಭಯ, ಆತಂಕದಿಂದ ಜೀವ ಮಾಡುವ ಪರಿಸ್ಥಿತಿಯಿದೆ ಎಂದು ಅಳಲು ತೋಡಿಕೊಂಡರು.
- ಭಾಗ್ಯಲಕ್ಷ್ಮಿ, ಹಲ್ಲೆಗೊಳಗಾದ ಮಹಿಳೆ
ತಾಲೂಕಿನಲ್ಲಿ ನಿಜವಾಗಿ ಈ ತರಹದ ಘಟನೆ ನಡೆದಿರುವುದು ನೋವಿನ ಸಂಗತಿಯಾಗಿದೆ. ಈ ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರಿರಲಿ, ಕೂಡಲೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
- ಮಧುಕೇಶ್ವರ್, ಉಪ ವಿಭಾಗಾಧಿಕಾರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement