ಜಾಗೃತಿ ಕೊರತೆಯಿಂದ ಎಚ್‌ಐವಿ ವೃದ್ಧಿ: ಡಾ. ನಟರಾಜ್
ಹಾಸನ: ಏಡ್ಸ್ ನಿಯಂತ್ರಣದ ಜಾಗೃತಿ ಇಲ್ಲದಿರುವುದರಿಂದ ವಿಶ್ವದಲ್ಲಿ ಈ ರೋಗ ಅತ್ಯಧಿಕವಾಗಿ ಹರಡಲು ಸಾಧ್ಯವಾಗಿದೆ ಎಂದು ರೆಡ್‌ರಿಬ್ಬನ್ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ. ನಟರಾಜ್ ತಿಳಿಸಿದ್ದಾರೆ.
ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರೆಡ್‌ರಿಬ್ಬನ್ ಕರ್ನಾಟಕ ಉದ್ಘಾಟಿಸಿ ಮಾತನಾಡಿದ ಅವರು, ಏಡ್ಸ್ ರೋಗ ದಿನನಿತ್ಯ ಹೆಚ್ಚಾಗುತ್ತಲೇ ಇದ್ದು, ಸಾರ್ವಜನಿಕರಿಗೆಅರಿವು ಮೂಡಿಸಬೇಕಾಗಿದೆ ಎಂದರು.
ಸೋಂಕು ಹರಡಲು ಕಾರಣ: ಯುವಕರಲ್ಲೇ ಈ ಕಾಯಿಲೆ ಹೆಚ್ಚಾಗಿ ಕಂಡು ಬರುತ್ತಿದ್ದು, ಯುವಕ- ಯುವತಿಯರು ವಿವಾಹಕ್ಕೆ ಮುನ್ನ ಲೈಂಗಿಕವಾಗಿ ಸೇರುವ ಸಂದರ್ಭ ಬಂದರೆ, ಅಗತ್ಯ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಇನ್ನೂ ಗ್ರಾಮೀಣ ಭಾಗದ ಜನರಲ್ಲಿ ತಿಳಿವಳಿಕೆ ಇಲ್ಲದೆ ಮತ್ತು ಕಾಯಿಲೆ ಬಗ್ಗೆ ನಿರ್ಲಕ್ಷ್ಯದಿಂದಾಗಿ ಎಚ್.ಐ.ವಿ. ಸೋಂಕು ಹರಡಲು ಕಾರಣವಾಗುತ್ತಿದೆ ಎಂದರು.
ಪರೀಕ್ಷೆಯ ಅವಶ್ಯಕತೆ: ಎನ್.ಎಸ್.ಎಸ್. ಅಧಿಕಾರಿ ಎಂ.ಕೆ. ಮಹೇಶ್ ಮಾತನಾಡಿ, ಎಚ್.ಐ.ವಿ. ಸೋಂಕಿನಿಂದ ಮನುಷ್ಯನ ಸಂಬಂಧ ಇಂದು ಹದಗೆಡುತ್ತಿದೆ. ಗಂಡ ಹೆಂಡತಿಯರ ನಡುವೆ ಅನುಮಾನ ಹುಟ್ಟಲು ಈ ಕಾಯಿಲೆ ಕಾರಣವಾಗಿದೆ. ಹಾಗಾಗಿ ಯುವಕ, ಯುವತಿಯರು ಮದುವೆಗೆ ಮುನ್ನ ಹಾಗೂ ಮದುವೆಯ ನಂತರವು ಕೂಡ ಪ್ರತಿ ವರ್ಷಕ್ಕೆ ಒಮ್ಮೆ ಎಚ್.ಐ.ವಿ. ಪರೀಕ್ಷೆ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ. ಎಚ್.ಎನ್. ರೂಪ್ ರಾಜ್ ಚಂದನ್ ಮಾತನಾಡಿ, ಯುವತಿಯರು ಮದುವೆಗೆ ಮುನ್ನವೇ ಎಚ್‌ಐವಿ ಕಾಯಿಲೆ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಯಾವುದೇ ಅಂಜಿಕೆಯನ್ನು ಇಟ್ಟುಕೊಳ್ಳದೆ ವೈದ್ಯರಿಂದ ಮಾಹಿತಿ ಪಡೆದುಕೊಂಡು ಈ ರೋಗದಿಂದ ದೂರವಿರಬೇಕು. ಮಹಿಳೆಯರಲ್ಲಿ ಜಾಗೃತಿ ಹೆಚ್ಚಾಗಿದ್ದಲ್ಲಿ ಕಾಯಿಲೆಯನ್ನು ತಡೆಗಟ್ಟಲು ಸಾಧ್ಯ ಎಂದರು.
ಕಾರ್ಯಕ್ರಮದ ಅಂಗವಾಗಿ ಬಿತ್ತಿ ಚಿತ್ರ, ಪ್ರಬಂಧ ಹಾಗೂ ಘೋಷಣಾ ಸ್ಪರ್ಧೆಗಳಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.
ಪ್ರಾಧ್ಯಾಪಕರಾದ ಡಾ.ಕೆ.ಜಿ. ಕವಿತಾ, ಪದ್ಮಿನಿ, ಉಪನ್ಯಾಸಕ ಎಚ್.ಕೆ. ದಿಲೀಪ್ ಕುಮಾರ್ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಎಂ.ಎ. ಪ್ರಕಾಶ್ ಮತ್ತಿತರರು ಇದ್ದರು.