ದಲಿತರಿಗೆ ಸಾಮಾಜಿಕ ನ್ಯಾಯ ದೊರೆತಿಲ್ಲ: ಸೋಮಶೇಖರ್
ಅರಕಲಗೂಡು: ತಾಲೂಕಿನ ಹಲವು ಗ್ರಾಮಗಳಲ್ಲಿ ದಲಿತರ ಮೇಲಿನ ದೌರ್ಜನ್ಯ ಇಂದಿಗೂ ಮುಂದುವರೆದಿದ್ದು, ದಲಿತರು ಸಂಘಟಿತರಾಗಿ ತಮ್ಮ ಮೇಲಿನ ದೌರ್ಜನ್ಯಗಳನ್ನು ಪ್ರತಿರೋಧಿಸಬೇಕು ಎಂದು ದಲಿತ ಸಂಘರ್ಷ ಸಮಿತಿಯ ಸಂಘಟನಾ ಸಂಚಾಲಕ ಸೋಮಶೇಖರ್ ತಿಳಿಸಿದ್ದಾರೆ.
ತಾಲೂಕಿನ ಮಲ್ಲಿಪಟ್ಟಣದಲ್ಲಿ ನಡೆದ ಹೋಬಳಿ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ದಲಿತ ಸಂಘಟನೆಗಳು ಹಲವು ಕಾರಣಗಳಿಂದ ಶಕ್ತಿ ಕಳೆದುಕೊಂಡಿದ್ದು, ಗ್ರಾಮೀಣ ಪ್ರದೇಶಗಳಿಂದ ದಸಂಸಕ್ಕೆ ಶಕ್ತಿ ತುಂಬುವ ಕೆಲಸ ಆಗಬೇಕಿದೆ. ಸಂಘಟನೆಯನ್ನು ಪುನಶ್ಚೇತನಗೊಳಿಸಿ ಸಂಘಟನೆಯನ್ನು ಬಲಗೊಳಿಸುವ ಅಗತ್ಯವಿದೆ ಎಂದರು.
ಸಂವಿಧಾನದ ಮೂಲ ಆಶಯದಂತೆ ಇಂದಿಗೂ ದಲಿತರಿಗೆ ಸಾಮಾಜಿಕ ನ್ಯಾಯ ದೊರೆತಿಲ್ಲ ಎಂದರು. ಈ ನಿಟ್ಟಿನಲ್ಲಿ ತಾಲೂಕು ಆಢಳಿತ ಮತ್ತು ಪೊಲೀಸರು ವಿಫಲರಾಗಿದ್ದಾರೆ ಎಂದರು. ಸಭೆಯ ಅಧ್ಯಕ್ಷತೆಯನ್ನು ದಸಂಸ ದ ಜಿಲ್ಲಾ ಸಂಘಟನಾ ಸಂಚಾಲಕ ಮೋಕಲಿ ಪುಟ್ಟರಾಜು ವಹಿಸಿದ್ದರು. ತಾಲೂಕು ಸಂಚಾಲಕರುಗಳಾದ ಮುತ್ತಿಗೆ ಬೊಮ್ಮಯ್ಯ, ರಾಮ ಅಜ್ಜೂರು, ವೆಂಕಟಾಚಲ ಇತರರು ಉಪಸ್ಥಿತರಿದ್ದರು.