ಮಾನವ ಸೇವಾ ಪ್ರಶಸ್ತಿಗೆ ಅರ್ಹರಿಂದ ಅರ್ಜಿ ಆಹ್ವಾನ
ಹಾಸನ: ಭಾರತ ಸರ್ಕಾರ, ಮಕ್ಕಳ ಅಭಿವೃದ್ಧಿ, ಮಕ್ಕಳ ರಕ್ಷಣೆ ಹಾಗೂ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ 10 ವರ್ಷಕ್ಕಿಂತ ಹೆಚ್ಚಿನ ಸೇವೆಯನ್ನು ಸಲ್ಲಿಸಿರುವಂತಹ ವ್ಯಕ್ತಿಗಳನ್ನು ಗುರುತಿಸಿ ರಾಜೀವ್ ಗಾಂಧಿ ಮಾನವಸೇವಾ ಪ್ರಶಸ್ತಿಯನ್ನು 3 ವ್ಯಕ್ತಿಗಳಿಗೆ ನೀಡಿ ಗೌರವಿಸುತ್ತದೆ.ಈ ಪ್ರಶಸ್ತಿಯನ್ನು ಪ್ರತಿ ವರ್ಷ ದಿ. ರಾಜೀವ್ ಗಾಂಧಿಯವರ ಜನ್ಮ ದಿನವಾದ ಆ. 20 ರಂದು ಘೋಷಿಸಿ ಪ್ರದಾನ ಮಾಡಲಾಗುವುದು. ಪ್ರತಿ ವ್ಯಕ್ತಿಗೆ ನೀಡುವ ಪ್ರಶಸ್ತಿಯು 1 ಲಕ್ಷ ರು. ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ.ಈ ಪ್ರಶಸ್ತಿಗಾಗಿ ಆಯ್ಕೆ ಮಾಡುವ 3 ವ್ಯಕ್ತಿಗಳು ಮಕ್ಕಳ ಶ್ರೇಯೋಭಿವೃದ್ಧಿಗಾಗಿ 10 ವರ್ಷಗಳಿಗೂ ಮೇಲ್ಪಟ್ಟು ಕಾರ್ಯ ನಿರ್ವಹಿಸಿರಬೇಕು. ಸಂಘ-ಸಂಸ್ಥೆಗಳಲ್ಲಿ ವೇತನ ಪಡೆಯುವ ವ್ಯಕ್ತಿಗಳು ಈ ಪ್ರಶಸ್ತಿಗೆ ಅರ್ಹರಿರುವುದಿಲ್ಲ. ಈ ಪ್ರಶಸ್ತಿಗೆ ಆಯ್ಕೆ ಮಾಡಲು ಇರುವ ಒಂದೇ ಮಾನದಂಡ- ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ವ್ಯಕ್ತಿಗಳು ಮಾಡಿರುವ ಕೆಲಸದ ಗುಣಮಟ್ಟದ ಮೇಲೆ ಅವಲಂಬಿತವಾಗಿರುತ್ತದೆ.ಅದೇ ರೀತಿಯಲ್ಲಿ, ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಹಲವು ವರ್ಷ ಅಸಾಧಾರಣ ಸೇವೆ ಸಲ್ಲಿಸಿದ 3 ವ್ಯಕ್ತಿಗಳು ಹಾಗೂ 5 ಸಂಸ್ಥೆಗಳ ಸೇವೆ ಗುರುತಿಸಿ ಪ್ರಶಸ್ತಿ ನೀಡುವ ಯೋಜನೆಯನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿರುತ್ತದೆ. ಪ್ರತಿ ವ್ಯಕ್ತಿಗೆ ನೀಡುವ ಪ್ರಶಸ್ತಿಯು ರು. 1 ಲಕ್ಷ ಹಾಗೂ ಪ್ರಶಸ್ತಿ ಪತ್ರ ಮತ್ತು ಪ್ರತಿ ಸಂಸ್ಥೆಗೆ ನೀಡುವ ಪ್ರಶಸ್ತಿಯು ರು. 3 ಲಕ್ಷ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. ಅರ್ಜಿ ನಮೂನೆಗಳನ್ನು ಆಯಾ ಜಿಲ್ಲಾ ಉಪ ನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಕಚೇರಿಯಿಂದ ಪಡೆದು, ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೆ.ಆರ್.ಪುರಂ 9ನೇ ಅಡ್ಡ ರಸ್ತೆ, ಹಾಸನ ಇಲ್ಲಿಗೆ ಸಲ್ಲಿಸತಕ್ಕದ್ದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15.03.2014.