'ಯುವಶಕ್ತಿಗೆ ಮಾರ್ಗದರ್ಶನ ಅಗತ್ಯ'
ಹಾಸನ: ಯುವ ಜನರನ್ನು ಉತ್ತಮ ಮಾರ್ಗದಲ್ಲಿ ಕೊಂಡೂಯ್ಯುವ ಉಪನ್ಯಾಸಕರ ಪಾತ್ರ ಮುಖ್ಯವಾಗಿದೆ ಎಂದು ನಿವೃತ್ತ ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಕೆ.ಎಸ್.ಎನ್. ಮೂರ್ತಿ ತಿಳಿಸಿದ್ದಾರೆ.
ತಾಲೂಕಿನ ಮೊಸಳೆ ಹೊಸಹಳ್ಳಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಸಭಾಂಗಣದಲ್ಲಿ ಸರ್ಕಾರಿ ವಸ್ತು ಸಂಗ್ರಹಾಲಯ ಹಾಗೂ ಹೇಮಾವತಿ ಮಹಿಳಾ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಕೌಶಲ್ಯ ದಿನ ಆಚರಣೆ ಹಾಗೂ ವಾಸ್ತುಶಿಲ್ಪ ಶಿಲ್ಪಾಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು. ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಅಶಿಸ್ತು ಹೆಚ್ಚಾಗುತ್ತಿದೆ. ಉಪನ್ಯಾಸಕರು ವಿದ್ಯಾರ್ಥಿಗಳ ಅಶಿಸ್ತನ್ನು ಶಿಸ್ತಗಳಾಗಿ ಪರಿವರ್ತಿಸುವ ಮೂಲಕ ಸಮಾಜದಲ್ಲಿ ಉತ್ತಮ ಮನುಷ್ಯರನ್ನಾಗಿ ಮಾಡಬೇಕೆಂದು ಸಲಹೆ ನೀಡಿದರು. ನಾವೆಲ್ಲರೂ ಒಂದೇ ಎನ್ನುವ ಸಮಾನಂತರ ಮನೋ ಸ್ಥೈರ್ಯ ಹೆಚ್ಚಾಗುವಂತೆ ನೋಡಿಕೊಳ್ಳುವುದು ಅವಶ್ಯಕವಾಗಿದೆ. ಉತ್ತಮವಾದುದನ್ನು ಪ್ರೋತ್ಸಹಿಸಿ, ಸಮಾಜದ ವಿರೋಧದಂತಹ ಚಟುವಟಿಕೆಯನ್ನು ವಿರೋಧಿಸಬೇಕೆಂದು ಕಿವಿಮಾತು ಹೇಳಿದರು. ಪ್ರತಿ ವಿದ್ಯಾರ್ಥಿಗಳು ತಮ್ಮ ಸ್ವಂತಿಕೆ ಗುಣಗಳನ್ನು ಹೆಚ್ಚು ಹೆಚ್ಚಾಗಿ ಬೆಳೆಸಿಕೊಳ್ಳಬೇಕು ಎಂದರು.
ಹಾಸನಾಂಬ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ರವಿನಾಕಲಗೂಡು ಮಾತನಾಡಿ, ಗ್ರಾಮೀಣ ಜನರು ತಮ್ಮ ಪ್ರದೇಶ ಬಿಟ್ಟು ನಗರ ಪ್ರದೇಶಕ್ಕೆ ವಲಸೆ ಬರುತ್ತಿದ್ದಾರೆ. ಆದರೆ, ಈಗಿ ನ ಪರಿಸ್ಥತಿ ನೋಡಿದರೆ ನಗರ ಬಿಟ್ಟು ಮತ್ತೆ ಗ್ರಾಮೀಣ ಪ್ರದೇಶ ಸೇರುವ ದಿನ ಹತ್ತಿರದಲ್ಲಿಯೇ ಇದೆ ಎಂದು ಹೇಳಿದರು. ಹಿಂದೆ ಇದ್ದಂತಹ ಗ್ರಾಮೀಣ ಆಟಗಳು ಪುನ- ಮರುಕಳಿಸಲಿದೆ ಎಂದು ಸಂತೋಷ ವ್ಯಕ್ತಪಡಿಸಿದರು. ಇಂತಹ ವಾತವರಣದಲ್ಲಿ ನೀರು, ಗಾಳಿ ಎಲ್ಲಾವು ಉತ್ತಮವಾಗಿರುತ್ತದೆ. ನಗರದಲ್ಲಿ ಇಂತಹ ವಾತವರಣ ಲಭ್ಯವಾಗುವುದಿಲ್ಲ. ಗ್ರಾಮೀಣ ಭಾಗದ ಸೊಗಡು ಎಂದು ನಶೀಸಿ ಹೋಗುವುದಿಲ್ಲ. ಉತ್ತಮ ಸಮಾಜಕ್ಕೆ ನಾಂದಿಯಾಗಲಿದೆ ಎಂದು ಕರೆನೀಡಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ದೇಶ ಭಕ್ತಿಗೀತೆ ಹಾಡಿದರು. ಹೇಮಾವತಿ ಮಹಿಳಾ ಸಂಘದ ವತಿಯಿಂದ ಕ್ರೀಡೆಗೆ ಸಂಬಂಧಿಸಿದ ಉಪಕರಣ ವಿತರಿಸಲಾಯಿತು.
ಸರ್ಕಾರಿ ವಸ್ತು ಸಂಗ್ರಹಾಲಯ ಕ್ಯೂರೇಟರ್ ಎನ್. ಕಾವ್ಯಶ್ರೀ, ಮೊಸಳೆ ಹೊಸಹಳ್ಳಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಿ. ಶ್ರೀನಿವಾಸ್, ಜಿಪಂ ಮಾಜಿ ಉಪಾಧ್ಯಕ್ಷ ಎಸ್. ದ್ಯಾವೇಗೌಡ, ಇತಿಹಾಸ ವಿಭಾಗದ ಮುಖ್ಯಸ್ಥ ಎಂ.ಪಿ. ಗೋಪಾಲ್, ಹೇಮಾವತಿ ಮಹಿಳಾ ಸಂಘದ ಅಧ್ಯಕ್ಷೆ ಪದ್ಮಾ, ಚುಂಚೇಗೌಡ ಮತ್ತಿತರರು ಉಪಸ್ಥಿತರಿದ್ದರು.