ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

7.5 ಲಕ್ಷ ಜಾನುವಾರುಗಳಿಗೆ ಲಸಿಕೆ

Rashmi Kasaragodu
Updated On : 18 Feb 2014, 2:14 am

ಹೊಳೆನರಸೀಪುರ: ಒಂದು ತಿಂಗಳ ಅವಧಿಯೊಳಗೆ ಹಾಸನ ಹಾಲು ಒಕ್ಕೂಟ ಹಾಗೂ ಪಶು ವೈದ್ಯಕೀಯ ಇಲಾಖೆಯ ಸಹಯೋಗದಲ್ಲಿ ಜಿಲ್ಲೆಯಾದ್ಯಂತ 7.5 ಲಕ್ಷ ಜಾನುವಾರುಗಳಿಗೆ ಕಾಲು ಬಾಯಿ ರೋಗದ ಲಸಿಕೆಯನ್ನು ಹಾಕುವ ಗುರಿಯನ್ನು ಹೊಂದಲಾಗಿದೆ ಎಂದು ಶಾಸಕ ಎಚ್.ಡಿ. ರೇವಣ್ಣ ಇಲ್ಲಿ ತಿಳಿಸಿದರು.
ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಗೆ ಸೇರಿದ ಮೂಡಲಹಿಪ್ಪೆ ಗ್ರಾಮದಲ್ಲಿ ಶನಿವಾರದಂದು ರಾಷ್ಟ್ರೀಯ ಕಾಲು ಬಾಯಿ ಜ್ವರ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ 6ನೇ ಸುತ್ತಿನ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಾನುವರುಗಳಿಗೆ ಲಸಿಕೆ ಹಾಕುವ ಕಾರ್ಯಕ್ರಮಕ್ಕಾಗಿ ಜಿಲ್ಲೆಯಾದ್ಯಂತ ಸುಮಾರು ಒಂದು ಕೋಟಿ ರು.ಗಳನ್ನು ವೆಚ್ಚ ಮಾಡುತ್ತಿದ್ದು, ರೈತರು ತಮ್ಮ ಜಾನುವಾರುಗಳಿಗೆ ಕಡ್ಡಾಯವಾಗಿ ಕಾಲು ಬಾಯಿ ರೋಗ ನಿರೋಧಕ ಲಸಿಕೆಗಳನ್ನು ಹಾಕಿಸುವಂತೆ ಕರೆನೀಡಿದರು.
4 ವೈದ್ಯರ ತಂಡ ರಚನೆ: ಜಾನುವಾರಗಳಿಗೆ ಕಾಲು ಬಾಯಿ ರೊಗ ನಿರೋಧಕ ಲಸಿಕೆಯನ್ನು ಹಾಕಿಸುವ ಮೂಲಕ ರೈತರು ತಮ್ಮ ಹೈನುಗಾರಿಕೆಗೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆಯನ್ನು ವಹಿಸುವ ಜೊತೆಗೆ ತಮ್ಮ ಅಮೂಲ್ಯ ಜಾನುವಾರು ಸಂಪತ್ತನ್ನು ಸಂರಕ್ಷಿಸುವಂತೆ ತಿಳಿಸಿದ ಅವರು, ತಾಲೂಕಿನಾದ್ಯಂತ ಪಶು ವೈದ್ಯಕೀಯ ಇಲಾಖೆಯ ತಜ್ಞ ವೈದ್ಯರನ್ನೊಳಗೊಂಡ 4 ತಂಡಗಳನ್ನು ರಚಿಸಲಾಗಿದ್ದು, ಒಂದು ತಿಂಗಳ ಅವಧಿಯಲ್ಲಿ ತಾಲೂಕಿನಾದ್ಯಂತ ಜಾನುವಾರುಗಳಿಗೆ ಲಸಿಕೆ ಹಾಕಲಾಗುವುದು ಎಂದರು.
ಕರೆ: ಕಾಲು ಬಾಯಿ ರೋಗ ನಿರೋಧಕ ಲಸಿಕೆಯನ್ನು ಹಾಕುವ ಸಿಬ್ಬಂದಿಗಳಿಗೆ ಇಲಾಖೆಯ ವತಿಯಿಂದ ಹಾಗೂ ಡೈರಿಯ ಕಡೆಯಿಂದ ಒಂದು ರು.ಸಹಾಯಧನ ನೀಡಲಾಗುವುದು ಎಂದು ತಿಳಿಸಿದ ಶಾಸಕ ರೇವಣ್ಣ , ಸರ್ಕಾರದ ಈ ಯೋಜನೆಯನ್ನು ರೈತರು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಪಶುವೈದ್ಯಕೀಯ ಇಲಾಖೆಯ ಉಪ ನಿರ್ದೇಶಕ ಶ್ರೀನಿವಾಸ್, ತಾಲೂಕು ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಮುರಳಿ, ಜಿಪಂ ಸದಸ್ಯ ಎಚ್.ಎನ್. ದೇವೇಗೌಡ(ಪಾಪಣ್ಣಿ), ಕೆಎಂಎಫ್ನ ವೈದ್ಯರಾದ ಡಾ.ವಸಂತರಾಜ್ ಹಾಗೂ ಡಾ. ರಕ್ಷಿತ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement