ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅಮೃತ ಮಹಲ್ ಅಭಿವೃದ್ಧಿಗೆ ಅಡ್ಡಗಾಲು

Rashmi Kasaragodu
Updated On : 18 Feb 2014, 2:16 am

ಅರಸೀಕೆರೆ: ಅಮೃತ ಮಹಲ್ ಕಾವಲ್ ಅಭಿವೃದ್ಧಿ ಪಡಿಸಲು ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡಲು ಅರಣ್ಯ ಇಲಾಖೆಯೊಂದಿಗೆ ತಾಲೂಕು ಆಡಳಿತ ಸಹಕಾರ ನೀಡುತ್ತಿಲ್ಲ ಎಂದು ಅಮೃತ ಮಹಲ್ ಬಿದಿರೆ ಕಾವಲುಗಾರ ಆಲದಹಳ್ಳಿ ಎ.ಎಸ್. ಹರೀಶ್ ಕುಮಾರ್ ಆರೋಪಿಸಿದರು.
ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ, ಇತ್ತೀಚಿನ ಬೆಳಗಾವಿ ಅಧಿವೇಶನದಲ್ಲಿ ರಾಜ್ಯದಲ್ಲಿನ 6 ಅಮೃತ್ ಮಹಲ್ ಕಾವಲುಗಳ ಅಭಿವೃದ್ಧಿಗೆ ಒಟ್ಟು ರು. 4.87 ಕೋಟಿ ಪ್ರಕಟಿಸಿದ್ದು, ಆದರಲ್ಲಿ ತಾಲೂಕಿನ ಗಂಡಸಿ ಹೋಬಳಿಯಲ್ಲಿನ ಅಮೃತ್ ಮಹಲ್ ಬಿದಿರೆ ಕಾವಲು ಸರ್ವೇ ನಂಬರ್ 4ರಲ್ಲಿ ಸುಮಾರು 785 ಎಕರೆ ಪ್ರದೇಶವಿದ್ದು, ಇದನ್ನು ಅರಣ್ಯ ಇಲಾಖೆ ಸಹಯೋಗದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ರು. 1.90 ಕೋಟಿ ಈಗಾಗಲೇ ಸರ್ಕಾರ ಬಿಡುಗಡೆ ಮಾಡಿದೆ ಎಂದರು.
ಮರಗಳು ಕಳ್ಳರ ಪಾಲಾಗುತ್ತಿದೆ: ಅಮೃತ್ ಮಹಲ್ ಕಾವಲಿನಲ್ಲಿ 80 ರಾಸುಗಳನ್ನು 40 ಕರುಗಳಿಗೆ ಮೇಯಲು ಮೇವಿನ ವ್ಯವಸ್ಥೆ ಮತ್ತು ತಂಗಲು ಶೆಡ್ಗಳ ವ್ಯವಸ್ಥೆಯನ್ನು ತಕ್ಷಣ ಮಾಡಬೇಕಾಗಿತ್ತು, ಆದರೆ ಕೇವಲ ಒಂದು ಕಚೇರಿ ಕೊಠಡಿ ಮತ್ತು ವಿಶ್ರಾಂತಿ ಗೃಹವನ್ನು ಕಟ್ಟಿಸಲಾಗಿದೆ. ಕುಡಿಯುವ ನೀರಿಗಾಗಿ ಕೊಳವೆ ಬಾವಿ ನಿರ್ಮಿಸಿರುವುದನ್ನು ಬಿಟ್ಟರೆ ಇನ್ನಿತರೆ ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳದ ತಾಲೂಕು ಆಡಳಿತ ಅವ್ಯವಸ್ಥೆಯಿಂದ ಇಲ್ಲಿನ ಬೆಲೆ ಬಾಳುವ ಮರಗಳು ಕಳ್ಳರ ಪಾಲಾಗುತ್ತಿದ್ದು, ಗೋಮಾಳದ ಭೂಮಿಯ ಒತ್ತುವರಿ ಕಾರ್ಯಗಳನ್ನು ಬಲಾಢ್ಯ ರಾಜಕೀಯ ಬೆಂಬಲಿತ ವ್ಯಕ್ತಿಗಳಿಂದ ನಡೆಯುತ್ತಿದೆ ಎಂದು ಆಪಾದಿಸಿದರು.
ಅಸಮಾಧಾನ: ತಾಲೂಕು ಆಡಳಿತ ಅಮೃತ್ ಮಹಲ್ ಕಾವಲು ಪ್ರದೇಶದ ಸರ್ವೇ ಕಾರ್ಯಗಳನ್ನು ಮಾಡುವ ಮೂಲಕ ಅಧಿಕೃತ ನಕಾಶೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ನೀಡಿದ್ದರೆ, ಆಕ್ರಮ ಭೂಮಿಯ ಒತ್ತುವರಿ ಕಾರ್ಯಕ್ಕೆ ಕಡಿವಾಣ ಹಾಕಬಹುದಾಗಿದೆ. ಆದರೆ ಅಧಿಕೃತ ನಕಾಶೆ ಮಾಡಿಕೊಡುವಲ್ಲಿ ಮಾತ್ರ ಇಲ್ಲಿನ ತಾಲೂಕು ಆಡಳಿತ ಹೆಚ್ಚಿನ ಆಸಕ್ತಿ ವಹಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಕ್ರಮ ಪ್ರವೇಶ: ರಕ್ಷಿತ ಕಾವಲು ಪ್ರದೇಶದ ಸುತ್ತಲೂ ಕಾಲುವೆ ನಿರ್ಮಾಣ ಕಾರ್ಯಕ್ಕೆ ಈಗಾಗಲೇ ಟೆಂಡರ್ ಕರೆದು ರು. 7.5 ಲಕ್ಷ ಕಾಮಗಾರಿಗೆ ಶ್ರೀನಿವಾಸ್ ಎಂಬುವರಿಗೆ ಗುತ್ತಿಗೆ ನೀಡಲಾಗಿದೆ. ಕೇವಲ 100 ಮೀಟರ್ ದೂರದ ಕಾಲುವೆ ನಿರ್ಮಿಸಿರುವ ಗುತ್ತಿಗೆದಾರರು ತಮ್ಮ ಇ.ಎಂ.ಡಿ. ಹಣವನ್ನು ವಾಪಸ್ಸು ಪಡೆದು ಹೋಗಿದ್ದಾರೆ. ಇಲ್ಲಿನ ಸ್ಥಳೀಯ ರಾಜಕೀಯ ಬಲಾಢ್ಯರು ಯಾವುದೇ ಪಕ್ಷ ಭೇದವಿಲ್ಲದೆ ಸಮಾನರಾಗಿ ತಮ್ಮ ಹಣಬಲ ಮತ್ತು ತೊಳ್ಬಲದ ಮೂಲಕ ದಬ್ಬಾಳಿಕೆ ಮಾಡಿಕೊಂಡು ಅಮೃತ್ ಮಹಲ್ ಕಾವಲು ವ್ಯಾಪ್ತಿ ಪ್ರದೇಶದಲ್ಲಿ ಸ್ವಂತಕ್ಕೆ ಇಟ್ಟಿಗೆ ಕಾರ್ಖಾನೆ ಮಾಡಿಕೊಂಡು ಇಟ್ಟಿಗೆ ತಯಾರು ಮಾಡುತ್ತಿದ್ದಾರೆ. ಅಲ್ಲದೆ ಕೊಳವೆ ಬಾವಿಗಳನ್ನು ತೆಗೆಸಿಕೊಂಡು ಆಕ್ರಮ ಪ್ರವೇಶ ಮಾಡುತ್ತಿದ್ದಾರೆ ಎಂದು ದೂರಿದರು.
ಅರಣ್ಯ ಇಲಾಖೆ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಅತ್ಯಂತ ಬೆಲೆಬಾಳುವ ಆಕೇಷಿಯಾ ಮತ್ತು ನೀಲಗಿರಿ ಮರಗಳು ಸರ್ವನಾಶವಾಗುತ್ತಿದ್ದರೂ, ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕಾದ ಅರಣ್ಯ ಇಲಾಖೆ ಕೆಲವು ಅಧಿಕಾರಿಗಳು ಈ ಪ್ರದೇಶದಲ್ಲಿ ದನಗಳನ್ನು ಮೇಯಿಸಲು ಬಂದ ಅಮಾಯಕ ಜನರ ಮೇಲೆ ತಮ್ಮ ಪ್ರಭಾವವನ್ನು ತೊರುತ್ತಿರುವುದು ನಾಚೀಕೆಗೇಡಿನ ಸಂಗತಿ ಎಂದು ಹರಿಹಾಯ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement