ಚಹಾ ವಿತರಿಸಿ ಬಿಜೆಪಿ 'ನಮೋ' ಪರ ಪ್ರಚಾರ
ಸಕಲೇಶಪುರ: ಪಟ್ಟಣದ ಊರ ದೇವರಾದ ಸಕಲೇಶ್ವರಸ್ವಾಮಿ ರಥೋತ್ಸವದ ಅಂಗವಾಗಿ ನಮೋ ಬ್ರಿಗೇಡ್ ಕಾರ್ಯಕರ್ತರು ಸಾರ್ವಜನಿಕರಿಗೆ ಚಹಾ ಹಂಚಿ ನರೇಂದ್ರ ಮೋದಿ ಪರ ಪ್ರಚಾರ ಮಾಡಿದರು.
ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ನಮೋ ಟೀ ಸ್ಟಾಲ್ ನಿರ್ಮಾಣ ಮಾಡಿದ ನಮೋ ಬ್ರಿಗೇಡ್ ಕಾರ್ಯಕರ್ತರು ಸಕಲೇಶಪುರ ರಥೋತ್ಸವದ ಅಂಗವಾಗಿ ಬಂದಿದ್ದ ಸಾವಿರಾರು ಭಕ್ತರಿಗೆ ಒಂದು ರು. ದರದಲ್ಲಿ ಟೀ ಹಂಚಿದರು. ಹಲವಾರು ನಮೋ ಬ್ರಿಗೇಡ್ ಕಾರ್ಯಕರ್ತರು ಮೋದಿಯವರ ಪರ ಘೋಷಣೆ ಹಾಕಿ ಸಾರ್ವಜನಿಕರನ್ನು ಟೀ ಕುಡಿಯಲು ಆಹ್ವಾನಿಸುತ್ತಿದ್ದರು. ಮತಬೇಧವಿಲ್ಲದೇ, ಜನರು ಆಗಮಿಸಿ ಚಹಾ ಸವಿದಿದ್ದು ವಿಶೇಷವಾಗಿತ್ತು.
ನಮೋ ಟೀ ಸ್ಟಾಲ್ನ ಉದ್ಘಾಟನಾ ಕಾರ್ಯಕ್ರಮದಲ್ಲಿ ನಮೋ ಬ್ರಿಗೇಡ್ ಮುಖಂಡ ದೀಪಕ್ ಮಾತನಾಡಿ, ಕಾಂಗ್ರೆಸ್ನ ಸಚಿವ ಮಣಿಶಂಕರ್ ಅಯ್ಯರ್ ಅವರು ಸೋನಿಯ ಗಾಂಧಿಯವರನ್ನು ಓಲೈಸಲು ಈ ದೇಶದ ಭವಿಷ್ಯದ ಪ್ರಧಾನಿಯೆಂದೇ ಬಿಂಬಿತರಾಗಿರುವ ನರೇಂದ್ರ ಮೋದಿ, ಕೇವಲ ಚಹಾ ಮಾರುವುದಕ್ಕೆ ಲಾಯಕ್ಕು ಎಂದು ಹೇಳಿ ನರೇಂದ್ರ ಮೋದಿ ಅವರನ್ನು ಹಾಗೂ ಚಹಾ ಮಾರುವವರನ್ನು ಅವಮಾನಿಸಿದ್ದಾರೆ ಎಂದರು.
ಚಹಾ ಮಾರುವುದು ಒಂದು ಗೌರವದ ವೃತ್ತಿಯಾಗಿದ್ದು ಪ್ರತಿಯೊಬ್ಬರನ್ನು ಕಾಂಗ್ರೆಸ್ನವರು ಮೊದಲು ಗೌರವ ಕೊಡುವುದು ಕಲಿಯಲಿ ಎಂದು ಅವರು ಹೇಳಿದರು. ಇಂದಿನ ರಥೋತ್ಸವದಲ್ಲಿ ಸಾವಿರಾರು ಮಂದಿ ಸ್ವಯಂ ಪೇರಿತರಾಗಿ ಬಂದು ಒಂದು ರು. ನೀಡಿ ಟೀ ಕುಡಿದಿರುವುದು ಮೋದಿರವರ ಜನಪ್ರಿಯತೆಗೆ ಸಾಕ್ಷಿ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ನಮೋ ಬ್ರಿಗೇಡ್ ಸಂಚಾಲಕರಾದ ಸಂದೇಶ್ ಶೆಟ್ಟಿ, ರಮೇಶ್ ಅಗ್ರಹಾರ, ವಿಕ್ರಮ್, ಪ್ರಕಾಶ್ ಕದಬನಹಳ್ಳಿ, ಕೌಶಿಕ್, ಶ್ರೀಕಾಂತ್ ಹಾಗೂ ಇನ್ನು ಅನೇಕ ಮಂದಿ ಹಾಜರಿದ್ದರು.