ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪುರಸಭೆ ಸದಸ್ಯರಿಂದ ಅಸಭ್ಯ ವರ್ತನೆ: ಶಾಸಕರ ಟೀಕೆ

Rashmi Kasaragodu
Updated On : 18 Feb 2014, 2:14 am

ಅರಸೀಕೆರೆ: ಜನರಿಂದ ತಿರಸ್ಕತಗೊಂಡ ಕಾಂಗ್ರೆಸ್ ನಾಯಕರೊಬ್ಬರ ಚಿತಾವಣೆಯಿಂದ ಕಾಂಗ್ರೆಸ್ನ ಪುರಸಭಾ ಸದಸ್ಯರು ಅಸಭ್ಯ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾಜಿ ಸಚಿವ ಬಿ. ಶಿವರಾಂ ವಿರುದ್ಧ ವಾಗ್ದಾಳಿ ನಡೆಸಿದರು.
ಇತ್ತೀಚೆಗೆ ನಡೆದಿದ್ದ ಪುರಸಭೆಯ ಸಾಮಾನ್ಯ ಸಭೆಯಲ್ಲಿ, ಕಾಂಗ್ರೆಸ್ ಸದಸ್ಯರು ಗದ್ದಲ ನಡೆಸಿ, ಸಭಾತ್ಯಾಗ ಮಾಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಶಿವಲಿಂಗೇಗೌಡ ಸೋಮವಾರ ಸುದ್ದಿಗೋಷ್ಠಿ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಂಪ್ರದಾಯದಂತೆ ಶಾಸಕರಾದ ತಾವು ಸಭೆಯಲ್ಲಿ ಪುರಸಭೆಯಲ್ಲಿ ಭಾಗವಹಿಸಿದ್ದೆ. ಸಭೆ ನಡೆಯುವ ಮಾಹಿತಿ ತಿಳಿದ ಮಾಜಿ ಸಚಿವರೊಬ್ಬರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ ಸಾಮಾನ್ಯ ಸಭೆ ಸುಸೂತ್ರವಾಗಿ ನಡೆಯದಂತೆ ತಾಕೀತು ಮಾಡಿರುವುದರಿಂದ ಕಾಂಗ್ರೆಸ್ ಪಕ್ಷದ ಸದಸ್ಯರು ವಿಚಿತ್ರ ರೀತಿ ವರ್ತಿಸಿದ್ದಾರೆಂದು ದೂರಿದರು.
ಇದು ಸರಿಯಲ್ಲ: ಪಟ್ಟಣದ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಸಣ್ಣ ಮತ್ತು ಮಧ್ಯಮ ವರ್ಗಗಳ ಪಟ್ಟಣಾಭಿವೃದ್ಧಿಗೆ 30 ಕೋಟಿ ರು.ಗಳ ಅನುದಾನ ಬಿಡುಗಡೆ ಮಾಡಿಸಿದ್ದೇನೆ. ಇದನ್ನು ಸಹಿಸದ ಕೆಲವರು ಈ ರೀತಿ ವರ್ತಿಸುತ್ತಿದ್ದಾರೆ. ಇಂತಹ ಬೆದರಿಕೆಯ ತಂತ್ರಗಳಿಗೆ ಜಗ್ಗುವುದಿಲ್ಲ. ಎಂದು ಕಿಡಿಕಾರಿದರು.
ಎಚ್ಚರಿಕೆ: ಪುರಸಭಾಧ್ಯಕ್ಷ ಮೋಹನ್ ಕುಮಾರ್ ಮಾತನಾಡಿ, ಮುಂಬರುವ ಸಭೆಗಳನ್ನು ನಿಯಮಾನುಸಾರ ನಡೆಸಲಾಗುವುದು. ಸಭೆಯಲ್ಲಿ ಅನುಚಿತವಾಗಿ ವರ್ತಿಸುವವರ ವಿರುದ್ಧ ನಿಯಮಾವಳಿಯಂತೆ ಕ್ರಮ ಜರುಗಿಸಲಾಗುವುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement