ಪ್ರಶಂಸಿಸಿಕೊಂಡ ಮುಖಂಡರು; ಕಕ್ಕಾಬಿಕ್ಕಿಯಾದ ಕಾರ್ಯಕರ್ತರು
ದಯಾಶಂಕರ ಮೈಲಿ
ಹಾಸನ: ಅದು ಎರಡೂ ಪಕ್ಷಗಳ ಮುಖಂಡರು, ಕಾರ್ಯಕರ್ತರಿಗೆ ಅಚ್ಚರಿ, ಮುಜುಗರ ಅಲ್ಲದೇ, ಹೀಗೂ ಉಂಟೆ. ಈ ಪಾಟಿ ಹೊಗಳಾಡಿಕೊಂಡರೇ ಚುನಾವಣೆಯಲ್ಲಿ ಪರ- ವಿರೋಧ ಹೋರಾಟ ಮಾಡುವುದಾದರೂ ಹೇಗಪ್ಪಾ ಎಂದು ಪ್ರಶ್ನಿಸಿಕೊಳ್ಳುವಂತೆ ಇತ್ತು.
ಹಾಸನ ಜಿಲ್ಲೆಯಲ್ಲಿ ಹಿಂದಿನಿಂದಲೂ ಕಾಂಗ್ರೆಸ್- ಜೆಡಿಎಸ್ ಪರಸ್ಪರ ಬದ್ಧ ವೈರಿಗಳು. ಅವೆರೆಡೂ ಪಕ್ಷಗಳ ಕಾರ್ಯಕರ್ತರು ಪರಸ್ವರ ಟೀಕೆ, ಟಿಪ್ಪಣೆ, ಆರೋಪ, ಪ್ರತ್ಯಾರೋಪ ಏಕೆ ಹೊಡೆದಾಟ ಮಾಡಿಕೊಂಡೇ ಬರಲಿರುವ ಲೋಕಸಭೆ ಚುನಾವಣೆ ಎದುರಿಸಬೇಕು. ಆದರೆ ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಪಕ್ಷದ ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹಾದೇವಪ್ಪ ಮತ್ತು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮತ್ತು ಮಾಜಿ ಸಚಿವ ಎಚ್.ಡಿ. ರೇವಣ್ಣನವರು ತಮ್ಮ ಭಾಷಣದಲ್ಲಿ ಬೇರೆ ವಿಚಾರಕ್ಕಿಂತ ಹೆಚ್ಚಾಗಿ ಪರಸ್ಪರ ಹೊಗಳಿಕೊಳ್ಳಲು ಹೆಚ್ಚಿನ ಸಮಯ ಬಳಸಿಕೊಂಡರು.
ಇದು ನಡೆದಿದ್ದು ಹಾಸನ ನಗರದ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಸೋಮವಾರ ಹಾಸನ ಹಾಲು ಒಕ್ಕೂಟದ ಹಾಲು ಪ್ಯಾಕಿಂಗ್ ಘಟಕದ ಉದ್ಘಾಟನೆ ಸಮಾರಂಭದ ಅಂಗವಾಗಿ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ.
ಅಷ್ಟೇ ಅಲ್ಲ, ಕಾರ್ಯಕ್ರಮಕ್ಕೆ ಮಹಾದೇವಪ್ಪನವರ ಕಾರಿನಲ್ಲಿ ರೇವಣ್ಣ ವೇದಿಕೆಗೆ ಬಂದರೆ, ಮಹಾದೇವಪ್ಪನವರು ಹೋಗುವಾಗ ದೇವೇಗೌಡರ ಕಾರಿನಲ್ಲಿ ಹೋದರು.
ಈ ಮೂವರೂ ಹೊಗಳಿಕೊಂಡಿದ್ದರ ಝಲಕ್ ಹೀಗಿದೆ ನೋಡಿ...
ದೇವೇಗೌಡ: ಮಹಾದೇವಪ್ಪ, ಸಿದ್ದರಾಮಯ್ಯ ನನ್ನ ಸನ್ಮಿತ್ರರು. ಸನ್ಮಾನ್ಯ ಹೆಗಡೆ ಅವರ ಸಂಪುಟದಲ್ಲಿ ಒಟ್ಟಿಗೆ ಕೆಲಸ ಮಾಡಿ, ಜನಪರ ಕೆಲಸ ಮಾಡೋದು ಹೇಗೆ ಎಂಬುದನ್ನು ವಾಸ್ತವದಲ್ಲಿ ತೋರಿಸಿಕೊಟ್ಟಿದ್ದೇವೆ. ಆಗ ತತ್ವ, ಸಿದ್ದಾಂತಗಳ ಕಾಲ. ಈಗ ನೋಟಿನ ಕಾಲ. ಪರಿಸ್ಥಿತಿ ಸಂದರ್ಭಗಳಿಗೆ ಅನುಗುಣವಾಗಿ ನಾವೆಲ್ಲಾ ಬೇರೆ ಬೇರೆಯಾಗಿದ್ದೇವೆ. ಮಹಾದೇವಪ್ಪನವರ ಜನವರ ಕಾಳಜಿ ಪ್ರಶ್ನಿಸುವಂತಿಲ್ಲ. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದು ಬೇಡ. ಚುನಾವಣಾ ಅಖಾಡ ಇದ್ದೇ ಇದೆ. ಜನರು ತಮಗೆ ಇಷ್ಟ ಬಂದವರನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಹೊಂದಿದ್ದಾರೆ. ಮಹಾದೇವಪ್ಪ ಅವರು, ಬೆಂಗಳೂರಿನ ದೇವನಹಳ್ಳಿ ಸಮೀಪ ಇರುವ ಸಫಲ್ಗೆ ಭೇಟಿ ನೀಡಿ, ರೈತರ ಉತ್ಪನ್ನಗಳನ್ನು ಹೊರ ದೇಶಗಳಿಗೆ ಕಳುಹಿಸುವ ಮೂಲಕ ದೇಶಿಯ ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂಬುದನ್ನು ತಿಳಿಯಬೇಕು. ಈ ಮಾತು ಏಕೆ ಹೇಳುತ್ತೇನೆ ಅಂದ್ರೆ... ನಮ್ಮಂತ, ನಿಮ್ಮಂತವರಿಗೆ ಮಾತ್ರ ರೈತರ ಸಮಸ್ಯೆ ಅರ್ಥ ಆಗೋದು.
ಮಹದೇವಪ್ಪ: ನಾನು ಮತ್ತು ಸಿದ್ದರಾಮಯ್ಯ ಇಬ್ಬರೂ ಗೌಡರ ಗರಡಿಯಲ್ಲಿ ಪಳಗಿದವರು. ಚುನಾವಣೆ ಸಂದರ್ಭದಲ್ಲಿ ವಿಚಾರಗಳನ್ನು ಪ್ರಸ್ತಾಪಿಸಿ ಮತಗಳನ್ನು ಕೇಳುವುದು ಬೇರೆ. ಆದರೆ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಸಲ್ಲದು. ಶೂದ್ರ ಶಕ್ತಿಗಳು ರಾಜಕೀಯ ನಿರ್ಣಯ ಮಾಡುವ ಅಧಿಕಾರ ಹೊಂದಬೇಕು ಎಂಬುದು ಬಾಬಾ ಸಾಹೇಬ್ ಅಂಬೇಡ್ಕರ್ ಆಶಯವಾಗಿತ್ತು. ದೇವೇಗೌಡರು ಪ್ರಧಾನಿಯಾಗುವ ಮೂಲಕ ಅದನ್ನು ಈಡೇರಿಸಿದ್ದಾರೆ. ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ ಭಾಷಣ ಮಾಡಿದ ಏಕೈಕ ಕನ್ನಡಿಗ ಅಂದ್ರೆ ಗೌಡರು. ಗೌಡರು ಕೆಂಪುಕೋಟೆಯಲ್ಲಿ ಭಾಷಣ ಮಾಡುವುದನ್ನು ಕಂಡು ರೋಮಾಂಚನಗೊಂಡು ಸಂತೋಷಗೊಂಡಿದ್ದೆ. ಗೌಡರು ಧೀಮಂತ ರಾಜಕಾರಣಿ. ಅವರು ಪ್ರಧಾನಿಯಾಗಿದ್ದ ಜಾರಿಗೆ ಬಂದ ಗಂಗಾ- ಕಲ್ಯಾಣ ಯೋಜನೆಯಿಂದ ಪರಿಶಿಷ್ಟ ಕಾಲೋನಿಗಳು ರಸ್ತೆ ಕಾಣಲು ಸಾಧ್ಯವಾಯಿತು.
ರೇವಣ್ಣ ಬಗ್ಗೆ...: ಬೇಕಾದರೇ ರೇವಣ್ಣ, ಮಿನಿಸ್ಟ್ರುಗಿರಿ ಬೇಡ ಅಂದಾನು. ಆದರೆ, ಹಾಲು ಒಕ್ಕೂಟವನ್ನು ಮಾತ್ರ ಬೇಡ ಎನ್ನುವುದಿಲ್ಲ. ಏಕೆಂದರೆ, ಡೈರಿ ಮೂಲಕ ಗ್ರಾಮೀಣ ಜನರಿಗೆ ಸಹಾಯ ಮಾಡುವುದು ಎಂಬುದು ಗೊತ್ತಿದೆ. ಕಂಕಳಿಗೆ ಫೈಲ್ ಸಿಗಿಸಿಕೊಂಡು ವಿಧಾನಸೌಧಕ್ಕೆ ನುಗ್ಗಿದರೇ ರೇವಣ್ಣ, ಯಾವುದೇ ಪಕ್ಷದ ಮಂತ್ರಿಗಳಿದ್ದರೂ ಸಹಿ ಹಾಕಿಸಿಕೊಳ್ಳುತ್ತಾನೆ. ಆತನ ಅನುಭವದ ಮುಂದೆ ಯಾವ ಪಿಎಚ್ಡಿನೂ ಇಲ್ಲ. ಡಾಕ್ಟರೇಟ್ ಇಲ್ಲ.
ರೇವಣ್ಣ ಉವಾಚ: ನನಗೆ ಮಹಾದೇವಪ್ಪನವರು ಬೇರೆ ಪಕ್ಷದವರು ಎಂದು ಅನಿಸುವುದಿಲ್ಲ. ಏಕೋ ಗೊತ್ತಿಲ್ಲ. ಸುಮ್ಮನೆ ಹೇಳಬಾರ್ದು... ದೇವೇಗೌಡರ ಪತ್ರಕ್ಕೆ ಮನ್ನಣೆ ನೀಡಿ ಹಣ ಬಿಡುಗಡೆ ಮಾಡಿದ್ದಾರೆ. ರಸ್ತೆಗೆ 150 ಕೋಟಿ ರು. ಹಣ ನೀಡಿದ್ದಾರೆ. ಅಭಿವೃದ್ಧಿ ಆಗಬೇಕು ಅಷ್ಟೇ. ಪಕ್ಷ ಆಮ್ಯಾಲೆ.
ಹೀಗೆ ಮೂವರು ಕೊಂಡಾಡಿಕೊಂಡಿದ್ದನ್ನು ಕಿವಿಯಾರೇ ಕೇಳಿ, ಕಣ್ಣಾರೆ ಕಂಡ ಉಭಯ ಪಕ್ಷಗಳ ಕಾರ್ಯಕರ್ತರು, ಅಲ್ಲಿ ವಿತರಿಸಿದ ಬಿಸಿ ಬೆಳೆಬಾತ್ ಮತ್ತು ಮೊಸರನ್ನ ಸವಿದು ಹೊರಟರು.