ಲಕ್ಷ್ಮೀನರಸಿಂಹಸ್ವಾಮಿ ಧ್ವಜಸ್ತಂಭ ಮಹೋತ್ಸವ
ಹೊಳೆನರಸೀಪುರ: ಇಲ್ಲಿನ ಪುರದೈವವಾದ ಶ್ರೀ ಲಕ್ಷ್ಮೀನರಸಿಂಹಸ್ವಾಮಿಯವರ ದೇವಸ್ಥಾನದ ನೂತನ ಧ್ವಜಸ್ತಂಭ ಪ್ರತಿಷ್ಠಾ ಸಂಪ್ರೋಕ್ಷಣ ಮಹೋತ್ಸವವು ಸೋಮವಾರ ವಿಜೃಂಭಣೆಯಿಂದ ನೆರವೇರಿತು.
ದೇವಾಲಯದಲ್ಲಿದ್ದ ಧ್ವಜಸ್ಥಂಭ ಕಳೆದ ವರ್ಷ ಶಿಥಿಲವಾಗಿದ್ದ ಕಾರಣದಿಂದಾಗಿ ಮುರಿದು ಬಿದ್ದಿತ್ತು. ನಂತರದಲ್ಲಿ ದೇವಾಲಯದ ಆಡಳಿತ ಹಾಗೂ ನಾಗರಿಕರ ಒತ್ತಾಸೆಯಂತೆ ಶಾಸಕ ಎಚ್.ಡಿ. ರೇವಣ್ಣ ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರರಾಗಿದ್ದ ದಿ ಎಚ್.ವಿ. ಕೃಷ್ಣ ಅವರ ಕುಟುಂಬ ವರ್ಗದವರ ಸಹಕಾರದೊಂದಿಗೆ ನೂತನ ಧ್ವಜಸ್ತ್ಥಂಭವನ್ನು ಪ್ರತಿಷ್ಠಾಪಿಸಲು ಮುಂದಾಗಿದ್ದರು.
ನೂತನ ಧ್ವಜಸ್ತಂಭವನ್ನು ನಿರ್ಮಿಸಿದ ನಂತರ ಫೆ. 15ರಿಂದ ಫೆ. 17ರವರೆಗೆ ವಿ.ಪಿ. ಸತ್ಯನಾರಾಯಣ ಅವರ ಪ್ರಧಾನಾಚಾರ್ಯತ್ವದಲ್ಲಿ ವೈಖಾನಸ ಆಗಮೋಕ್ತವಾಗಿ ಪ್ರತಿಷ್ಠಾಪಿಸಲು ತೀರ್ಮಾನಿಸಿ, ಈ ನಿಟ್ಟಿನಲ್ಲಿ ಫೆ.15ರಂದು ಆರಂಭಗೊಂಡ ಪೂಜಾ ಕಾರ್ಯಗಳಲ್ಲಿ ಮೃತ್ತಿಕಾ ಸಂಗ್ರಹಣ, ಅಜಸ್ರದೀಪಾರಾಧನೆ, ಆಚಾರ್ಯ ಋತ್ವಗ್ವರಣ, ಅಕಲ್ಮಶ ಹೋಮ ಮೊದಲಾದ ಕಾರ್ಯಗಳು ನೆರವೇರಿದವು. ನಂತರ, ಫೆ. 16ರಂದು ಪಂಚಾಗ್ನಿ, ಪೌಂಡರೀಕಾಗ್ನಿ, ಪ್ರಣಯನ, ಕುಂಭಸಾಧನೆ, ದೇವಾಲಯ ಕಳಾಕರ್ಷಣೆ, ತದಂಗ ಹೋಮಗಳು ಮೊದಲಾದ ಪೂಜಾ ಕಾರ್ಯಗಳು ವಿದ್ಯುಕ್ತವಾಗಿ ನೆರವೆರಿದವು. ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಶಾಸಕ ಎಚ್.ಡಿ. ರೇವಣ್ಣ ಕುಟುಂಬ ವರ್ಗ ಸಕ್ರಿಯವಾಗಿ ಪಾಲ್ಗೊಂಡಿತ್ತು.
ಕಡೆಯ ದಿನದ ಪೂಜಾ ಕಾರ್ಯಕ್ರಮವಾಗಿ ಪ್ರಧಾನ ಸರ್ವದೈವತ್ವ ಹೋಮಗಳು, ದಿಗ್ದೈವತ್ವ ಹೋಮ, ಜಯಾದಿ ಧಾತಾದಿ, ಉಪರಿಷ್ಟಾದಿ ಅಂತಹೋಮ, ಮಹಾ ಪೂರ್ಣಾಹುತಿ, ಕುಂಭೋದ್ವಾಸನೆ, ಯಾತ್ರದಾನ ಪೂರ್ವಕ ಸದ್ಮಪ್ರದಕ್ಷಿಣೆ, ಅಷ್ಟಾಚತ್ವಾರಿಂಶತ್, ಜೀವ ಕಳಾವಾಹನೆ, ಋತ್ವಿಕ್ ಸಂಭಾವನಾ ಮೊದಲಾದ ಪೂಜಾ ಕಾರ್ಯಗಳು ಶಾಸ್ತ್ರೋಕ್ತವಾಗಿ ನೆರವೇರಿದವು.
ಈ ಸಂದರ್ಭದಲ್ಲಿ ಶಾಸಕ ಎಚ್.ಡಿ. ರೇವಣ್ಣ ಅವರ ಪತ್ನಿ ಭವಾನಿ, ಗುತ್ತಿಗೆದಾರರಾದ ದಿ ಎಚ್.ವಿ. ಕೃಷ್ಣ ಅವರ ಕುಟುಂಬ ವರ್ಗದವರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ನೆರೆದಿದ್ದರು. ಪೂರ್ಣಾಹುತಿ ಮಹಾಸಂಪ್ರೋಕ್ಷಣೆಯ ನಂತರ ನೂತನ ಧ್ವಜಸ್ಥಂಭಕ್ಕೆ ಪೂಜೆ ಸಲ್ಲಿಸಲಾಯಿತು.