ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಶಾಸಕರ ಸ್ಥಾನಕ್ಕೆ ಅವಮಾನ: ನಾಮ ನಿರ್ದೇಶಿತ ಸದಸ್ಯರ ಟೀಕೆ

Rashmi Kasaragodu
Updated On : 18 Feb 2014, 2:15 am

ಅರಸೀಕೆರೆ: ಪುರಸಭಾ ಸದಸ್ಯರ ಅಧಿಕಾರವನ್ನು ಮೊಟಕುಗೊಳಿಸಿ ಶಾಸಕರು ಸರ್ವಾಧಿಕಾರಿ ಧೋರಣೆ ಪ್ರದರ್ಶಿಸಿ ಅಸಂವಿಧಾನಿಕ, ಅವಾಚ್ಯ ಪದಗಳನ್ನು ಬಳಕೆ ಮಾಡುವ ಮೂಲಕ ಶಾಸಕ ಸ್ಥಾನಕ್ಕೆ ಅಪಮಾನವೆಸಗಿದ್ದಾರೆ ಎಂದು ಕಾಂಗ್ರೆಸ್ನ ನಾಮ ನಿರ್ದೇಶಿತ ಪುರಸಭಾ ಸದಸ್ಯ ಉಮಾಶಂಕರ್ ಹಾಗೂ ಸದಸ್ಯ ಶ್ರೀನಿವಾಸಗೌಡ ಟೀಕಿಸಿದ್ದಾರೆ.
ಸಭೆಯನ್ನು ಬಹಿಷ್ಕರಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಭೆಯಲ್ಲಿ ಕುಡಿಯುವ ನೀರು ಸೇರಿದಂತೆ ಜನ ಸಾಮಾನ್ಯರ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅವಕಾಶ ನೀಡದೇ, ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಲು ಅಧ್ಯಕ್ಷರಿಗೆ ಅವಕಾಶ ನೀಡದೆ ಶಾಸಕರು ಹಾಗೂ ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಸಮೀವುಲ್ಲಾರ ನಡವಳಿಕೆ ಆಕ್ಷೇಪಾರ್ಹ ಹಾಗೂ ಖಂಡನೀಯ.
ಜವಾಬ್ದಾರಿ ಸ್ಥಾನದಲ್ಲಿ ಇರುವ ವ್ಯಕ್ತಿಗಳೇ ಅಶ್ಲೀಲ ಪದಗಳನ್ನು ಬಳಸಿ ಮಾತನಾಡಿದ್ದು, ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುವಂತಿದೆ.
 ದುರದೃಷ್ಟಕರ ಸಂಗತಿ ಎಂದರೆ ಪುರಸಭಾಧ್ಯಕ್ಷ ಮೋಹನ್ ಕುಮಾರ್ ಅಸಮರ್ಥರಂತೆ ಇತರೆಯವರಿಗೆ ಮಾತನಾಡಲು ಅವಕಾಶ ನೀಡಿ ಸುಮ್ಮನೆ ಕುಳಿತುಕೊಂಡಿದ್ದು ಸಾಲದೆಂಬಂತೆ ಸಭೆಯಿಂದ ಹೊರ ನಡೆಯುವಂತೆ ಹೇಳುವ ಮೂಲಕ ಹೆಜ್ಜೆ ಹೆಜ್ಜೆಗೂ ಪ್ರತಿಪಕ್ಷ ಸದಸ್ಯರನ್ನು ಅಪಮಾನಿಸುತ್ತಿದ್ದಾರೆಂದು ವಾಗ್ದಾಳಿ ನಡೆಸಿದರು.
ಪೊಲೀಸರನ್ನು ಕರೆಸಿದ ಪುರಸಭಾ ಮುಖ್ಯಾಧಿಕಾರಿಗಳ ವರ್ತನೆ ಅಕ್ಷಮ್ಯ. ಅನುಮತಿಯಿಲ್ಲದೆ ಸಭೆಯನ್ನು ಪ್ರವೇಶಿಸಿದ ಪೊಲೀಸರ ವಿರುದ್ಧವೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲಾಗುವುದು.  ಸ್ಥಾಯಿ ಸಮಿತಿಯ ಅಸ್ತಿತ್ವವೇ ಊರ್ಜಿತವಲ್ಲ. ಈ ಬಗ್ಗೆ ದೂರು ನೀಡಿದ್ದರೂ ಮುಖ್ಯಾಧಿಕಾರಿಗಳು ಯಾವುದೇ ಕ್ರಮ ಜರುಗಿಸಿಲ್ಲ. ಇಂತಹ ಬೆಳವಣಿಗೆಗಳನ್ನು ಸಹಿಸಲು ಸಾಧ್ಯವಿಲ್ಲ. ಶೀಘ್ರದಲ್ಲೇ ಜಿಲ್ಲಾಧಿಕಾರಿಗಳಿಗೆ ದೂರು ನೀಡುವುದಾಗಿ ಹೇಳಿದ ಮುಖಂಡರು ಜನಸಾಮನ್ಯರ ಸಮಸ್ಯೆಗಳ ಬಗ್ಗೆ ತಮಗೂ ಅರಿವಿದ್ದು ಅವುಗಳನ್ನು ಪೂರೈಸಲು ನಾವುಗಳು ಬದ್ಧರಿರುವುದಾಗಿ ಹೇಳಿದರು.
ಪುರಸಭಾ ಸದಸ್ಯ ಬಿ.ಎನ್. ವಿದ್ಯಾದರ್, ರೇವಣ್ಣ, ರಂಗನಾಥ್, ಪಿ.ಬಾಲಮುರುಗನ್, ಅಬ್ದುಲ್ ಜಮೀಲ್, ಕಾಳೇಗೌಡ, ಓ.ಜಿ. ಗೀತಾ ಸುನಿಲ್ ಇನ್ನಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement