ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸಿಕ್ಕಿಬಿತ್ತು ಮಕ್ನಾ

Rashmi Kasaragodu
Updated On : 18 Feb 2014, 2:15 am

ಆಲೂರು: ತಾಲೂಕು ಸೇರಿದಂತೆ ನಾನಾ ಕಡೆಗಳಲ್ಲಿ ಹಲವರನ್ನು ಬಲಿ ತೆಗೆದುಕೊಂಡಿದ್ದ ಮಕ್ನಾ ಆನೆಯನ್ನು ಅರಣ್ಯ ಇಲಾಖೆ ನಡೆಸಿದ 5ನೇ ದಿನದ ಕಾರ್ಯಾಚರಣೆಯಲ್ಲಿ ಕೊಡಗಿನ ಉಂಬಳಿಬೆಟ್ಟ ಅರಣ್ಯ ಪ್ರದೇಶದಲ್ಲಿ ಸೋಮವಾರ ಸೆರೆ ಹಿಡಿಯಲಾಯಿತು.
ಕಳೆದ ಗುರುವಾರದಿಂದ ಪ್ರಾರಂಭವಾದ ಕಾರ್ಯಾಚರಣೆ ಪ್ರಥಮ ದಿನದಲ್ಲಿ ನಾಗಾವಾರದ ಚಿಕ್ಕಬೆಟ್ಟ ಅರಣ್ಯ ಪ್ರದೇಶದಲ್ಲಿ ಆನೆ ಹಿಡಿಯುವಲ್ಲಿ ವಿಫಲವಾಗಿತ್ತು. ಎರಡನೇ ದಿನ ಪುನ- ಕೊಡಗಿನ ಉಂಬಳಿಬೆಟ್ಟ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಅಂದು ಸಹ ಅರಣ್ಯ ಇಲಾಖೆಯವರ ಕಣ್ಣುತಪ್ಪಿಸಿ ಕಾಡಾನೆ ನಾಪತ್ತೆಯಾಗಿತ್ತು. ಮೂರನೇ ದಿನ ಪುನ- ಕೊಡಗಿನ ಕಟ್ಟೇಪುರ, ತಾಲೂಕಿನ ದೊಡ್ಡಬೆಟ್ಟ, ಚಿಕ್ಕಬೆಟ್ಟ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದರು ಕಾಡಾನೆ ಸಿಗದೆ ತಂಡ ಬರಿಗೈ ನಲ್ಲಿ ಮಾಗಡಿಹಳ್ಳಿಗೆ ವಾಪಸ್ ಆಗಿತ್ತು.
ಅರವಳಿಕೆಗೂ ಜಗ್ಗಲಿಲ್ಲ: ನಾಲ್ಕನೇ ದಿನ ಈ ಭಾಗದಲ್ಲಿ ಶ್ರೀರಂಗನಬೆಟ್ಟದಲ್ಲಿ ಜಾತ್ರೆ ಇದ್ದ ಪರಿಣಾಮ ಅಪಾರ ಪ್ರಮಾಣ ಸಂಖ್ಯೆಯಲ್ಲಿ ಜನ ಬರುವುದರಿಂದ ಕಾರ್ಯಾಚರಣೆ ಬಿಡುವು ನೀಡಲಾಗಿತ್ತು. ಆದರೆ ಸೋಮವಾರ ಕೊಡಗಿನ ಉಂಬಳಿಬೆಟ್ಟ ಪ್ರದೇಶದಲ್ಲಿ ಕಾಡಾನೆ ಇರುವ ಸುಳಿವು ದೊರೆತು ಅರಣ್ಯ ಇಲಾಖೆಯ ತಂಡ ಬೆಳಗ್ಗೆಯಿಂದಲೇ ಸಾಕಾನೆಗಳೊಂದಿಗೆ ಉಂಬಳಿ ಬೆಟ್ಟದಲ್ಲಿ ಕಾರ್ಯಾಚರಣೆ ನಡೆಸಿದರು. ಬೆಳಗಿನಿಂದ ಮಧ್ಯಾಹ್ನದವರೆಗೂ ಕಣ್ಣಾಮುಚ್ಚಾಲೆ ಆಟವಾಡಿಸಿದ ಮಕ್ನಾ ಮಧ್ಯಾಹ್ನ 2.30ರಲ್ಲಿ ಬೆಟ್ಟದ ಮಧ್ಯಭಾಗದಲ್ಲಿ ಕಂತು. ಆಗ, ಅದಕ್ಕೆ ಗುರಿಕಾರರು ಅರವಳಿಗೆ ಮದ್ದನ್ನು ನೀಡಿದರು. ಆದರೆ ಅರವಳಿಗೆ ಚುಚ್ಚುಮದ್ದು ತಾಗಿದರೂ ಪ್ರಜ್ಞೆ ತಪ್ಪಿ ಬೀಳದೇ ಪುನಃ ಕಣ್ಮರೆಯಾಗಿದ್ದ ಮಕ್ನಾ ಎರಡು ಗಂಟೆ ಸಮಯವಾದರೂ ಯಾರ ಕಣ್ಣಿಗೆ ಬೀಳದೇ ಅರಣ್ಯ ಇಲಾಖೆಯ ಸಿಬ್ಬಂದಿಯಲ್ಲಿ ಆತಂಕ ಉಂಟು ಮಾಡಿತ್ತು. ಏಕೆಂದರೆ ಅರವಳಿಗೆ ಚುಚ್ಚುಮದ್ಧು ನೀಡಿದ ಅರ್ಧ ಗಂಟೆಯೊಳಗೆ ಆನೆ ಪ್ರಜ್ಞೆ ತಪ್ಪಿ ಬೀಳಬೇಕು.
ನಂತರ ಅದನ್ನು ಸೆಣಬಿನ ಹಗ್ಗ ಹಾಗೂ ಕಬ್ಬಿಣದ ಸರಪಳಿಯಿಂದ ಬಂಧಿಸಿ ಅದರ ಮೈ ಮೇಲೆ ಲೀಟರ್ಗಟ್ಟಲೆ ನೀರ ಹಾಕಬೇಕು. ಏಕೆಂದರೆ ಅರವಳಿಕೆ ಮದ್ದು ನೀಡಿದ ತಜ್ಞರಪ್ರಕಾರ, ಸುಮಾರು 2 ಕಿಮೀನಷ್ಟು ದೂರದವರೆಗೂ ಓಡುವ ಕಾಡಾನೆ ಮೈ ಉಷ್ಣಾಂಶ ವಿಪರೀತವಾಗಿ ಏರುತ್ತದೆ. ಆಗ ಅದರ ದೇಹವನ್ನು ತಂಪುಗೊಳಿಸದಿದ್ದರೆ ಆನೆ ಮೃತಪಡುತ್ತದೆ.
2ನೇ ಬಾರಿ ಯಶಸ್ಸು: ಈ ಹಿನ್ನೆಲೆಯಲ್ಲಿ, ಚುಚ್ಚುಮದ್ದು ನೀಡಿ ಎರಡು ಗಂಟೆಗಳ ಕಾಲವಾದರೂ ಆನೆ ಕಾಣಿಸದ ಕಾರಣ ಆತಂಕಗೊಂಡಿದ್ದ ಅರಣ್ಯಾಧಿಕಾರಿಗಳಿಗೆ ಕಡೆಗೂ ಕಂಡು ಬಂದ ಮಕ್ನಾ ಗುರಿಕಾರರ ಎರಡನೇ ಬಾರಿ ಅರವಳಿಕೆ ಮದ್ದನ್ನು ನೀಡುವಲ್ಲಿ ಸಫಲರಾದರು. ಇದರಿಂದ ಅರವಳಿಕೆ ಮದ್ದು ನೀಡಿದ ತಕ್ಷಣ ಬೆಟ್ಟದ ಇಳಿಜಾರಿನಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಮಕ್ನಾ ಆನೆಯನ್ನು ಬಂಧಿಸಿ ಸಮತಟ್ಟಾದ ಸ್ಥಳಕ್ಕೆ ತರಲು ಸತತ 2 ಗಂಟೆ ಸಾಕಾನೆಗಳೊಂದಿಗೆ ಅರಣ್ಯಾಧಿಕಾರಿಗಳು ಹರಸಾಹಸ ಪಡಬೇಕಾಯಿತು.
ಈ ಆನೆ ಅತ್ಯಂತ ಬಲಿಷ್ಠ ಆನೆಯಾಗಿದ್ದು, ಸಾಕಾನೆಗಳೊಂದಿಗೆ ತೀವ್ರ ಪ್ರತಿರೋಧ ಒಡ್ಡುತ್ತಿದ್ದು, ನಂತರ ಅರ್ಜುನ, ಅಭಿಮನ್ಯು, ಶ್ರೀರಾಮ, ಹರ್ಷ, ವಿಕ್ರಂ, ಗೋಪಾಲಸ್ವಾಮಿ, ಭೀಮ ಹಾಗೂ ಇತರೆ ಆನೆಗಳೊಂದಿಗೆ ಸಮತಟ್ಟಾದ ಸ್ಥಳಕ್ಕೆ ತಂದು ಪಕ್ಕದಲ್ಲೇ ಇದ್ದ ಮರಕ್ಕೆ ಕಟ್ಟಲಾಯಿತು.
ಸಿಸಿಎಫ್ ಮಂಜುನಾಥ್ ಮಾತನಾಡಿ,  ಮಕ್ನಾ ಆನೆಯನ್ನು  ಮಂಗಳವಾರ ಮತ್ತಿಗೋಡು ಅರಣ್ಯಧಾಮಕ್ಕೆ ಕಳುಹಿಸಲಾಗುತ್ತಿದೆ. ಈ ಭಾಗದಲ್ಲಿ ಇನ್ನು 8 ಆನೆಗಳು ಇರುವುದು ತಿಳಿದು ಬಂದಿದ್ದು, ಅವುಗಳನ್ನು ಮುಂದಿನ ದಿನಗಳಲ್ಲಿ ಸೆರೆ ಹಿಡಿಯುವುದಾಗಿ ತಿಳಿಸಿದರು.
ವೈದ್ಯ ಚಿಟ್ಟಿಯಪ್ಪ ಮಾತನಾಡಿ, ಈ ಆನೆ ದಂತವಿಲ್ಲದ ಗಂಡಾನೆಯಾಗಿದ್ದು, ಇದನ್ನು ಮಕ್ನಾ ಎನ್ನಲಾಗುತ್ತದೆ. ಈ ಬಾರಿಯೂ ಸಹ ಹಲವಾರು ಬಾರಿ ಕಣ್ಣು ತಪ್ಪಿಸಿ ಈಗ ಸೆರೆ ಸಿಕ್ಕಿದೆ ಎಂದರು.
ತಾಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಹೊನ್ನವಳ್ಳಿ ಚಂದ್ರಶೇಖರ್ ಮಾತನಾಡಿ, ಈಗ ಹಿಡಿದಿರುವುದು ಮಕ್ನಾ ಆನೆ ಆದರೂ, ಸಹ ಇದಕ್ಕಿಂತಲೂ ಅಪಾಯಕಾರಿಯಾದ ನರಹಂತಕ ಒಂಟಿ ಸಲಗವನ್ನೂ ಹಿಡಿಯಬೇಕು ಎಂದು ಆಗ್ರಹಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement