ಅಂಚೆ ನೌಕರರ ಅನಿರ್ದಿಷ್ಟ ಮುಷ್ಕರ ಶುರು
ಹಾಸನ: ಕೇಂದ್ರದ 7ನೇ ವೇತನ ಆಯೋಗ ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘ ಮಂಗಳವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಪ್ರಾರಂಭಿಸಿದೆ.
ಪ್ರತಿಭಟನಾಕಾರರು ನಗರದ ಜಿಲ್ಲಾ ಅಂಚೆಕಚೇರಿಯ ಮುಂದೆ ಧರಣಿ ಪ್ರಾರಂಭಿಸಿದ್ದು, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಘೋಷಣೆಗಳನ್ನು ಕೂಗಿದರು.
ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘ ಹಾಸನ ವಿಭಾಗದಿಂದ ಅನಿರ್ದಿಷ್ಟ ಕಾಲ ಮುಷ್ಕರವನ್ನು ಜಿಲ್ಲಾ ಅಂಚೆ ಕಚೇರಿ ಮುಂಭಾಗ ಪ್ರಾರಂಭಿಸಿದ್ದು, ಜಿಡಿಎಸ್ ನೌಕರರನ್ನು ಪೌರ ನೌಕರರು ಎಂದು ಪರಿಗಣಿಸಿ ಇಲಾಖೆಯ ಎಲ್ಲಾ ಸೌಲಭ್ಯ ಕಲ್ಪಿಸಬೇಕು. ಕೇಂದ್ರದ 7ನೇ ವೇತನ ಆಯೋಗದ ವ್ಯಾಪ್ತಿಗೆ ಸೇರಿಸಿಕೊಳ್ಳುವುದು. ಅನುಕಂಪದ ಅಧಾರದ ಮೇಲೆ ನೌಕರರಿಗೆ ಸೌಲಭ್ಯವನ್ನು ಶೇ. 100ರಷ್ಟು ಕೊಡಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟರು.
ಅಲವತ್ತುಕೊಂಡ ನೌಕರರು: ಶೇ. 50ರಷ್ಟು ಡಿಎ ಮರ್ಜರ್ ಮಾಡುವುದು, 2006ರಿಂದ ಇಲಾಖೆಯಲ್ಲಿ ಇರುವ ದಿನಗೂಲಿ, ಕಾಂಟಿಜೆಂಟಿ, ಪಾರ್ಟ್ ಟೈಂ ನೌಕರರಿಗೆ ಡಿಎ ಕೊಡುವುದು ಹಾಗೂ ಇತ್ಯಾದಿ ಬೇಡಿಕೆಗಳನ್ನು ಈಡೇರಿಸಬೇಕು ಎಂದ ಅವರು, ಗುತ್ತಿಗೆ ಆಧಾರದಲ್ಲಿ ತೆಗೆದುಕೊಂಡಿರುವಂಥ ಅಂಚೆ ನೌಕರರನ್ನು ಖಾಯಂಗೊಳಿಸುವಂತೆ ಆಗ್ರಹಿಸಿ, ಹಲವು ಬಾರಿ ಪ್ರತಿಭಟನೆ ನಡೆಸಿದರೂ, ಈವರೆಗೂ ಪ್ರಯೋಜನವಾಗಿಲ್ಲ. ಅಧಿಕಾರಕ್ಕೆ ಬರುವಂಥ ಸರ್ಕಾರಗಳು ಕೇವಲ ಭರವಸೆಗಳನ್ನು ನೀಡುತ್ತವೆ ಹೊರತು ಅದನ್ನು ಕಾರ್ಯರೂಪಕ್ಕೆ ತರುತ್ತಿಲ್ಲ. ಇದರಿಂದ ನೌಕರರ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಉದ್ಯೋಗದಲ್ಲಿ ಭದ್ರತೆ ಇಲ್ಲದಂತಾಗಿದೆ ಎಂದು ಅಲವತ್ತುಕೊಂಡರು.
ಬೀದಿಗೆ ಬೀಳುವ ಸ್ಥಿತಿ: 7ನೇ ವೇತನ ಆಯೋಗದ ವ್ಯಾಪ್ತಿಗೆ ಅಂಚೆ ನೌಕರರನ್ನು ಸೇರಿಸಬೇಕು ಎಂದು ಹಲವು ಬಾರಿ ಒತ್ತಾಯಿಸಿದ್ದರು. ಈ ಬಗ್ಗೆ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ನೌಕರರು ತಾವು ಮಾಡುವಂತಹ ಕೆಲಸಕ್ಕೆ ತಕ್ಕದಾದ ವೇತನ ಲಭ್ಯವಾಗದ ಕಾರಣ ಸಂಕಷ್ಟಕ್ಕೆ ಎದುರಿಸುತ್ತಿದ್ದಾರೆ. ಕೆಲಸಕ್ಕೆ ತಕ್ಕಂತೆ ವೇತನ ಸಿಗದ ಕಾರಣ ನೌಕರರ ಕುಟುಂಬಗಳು ಜೀವನ ನಿರ್ವಹಣೆಗೆ ಸಾಧ್ಯವಾಗದೆ ಬೀದಿಗೆ ಬೀಳುವಂತಾಗಿದೆ ಎಂದರು.
ಖಾಸಗೀಕರಣ ಬೇಡ: ಸರ್ಕಾರ ಅಂಚೆ ಇಲಾಖೆಯನ್ನು ಖಾಸಗೀಕರಣಕ್ಕೆ ಒಪ್ಪಿಸಲು ಮುಂದಾಗಿದ್ದು, ಇದರಿಂದ ಇಲಾಖೆಯು ಸಾಕಷ್ಟು ಸಂಕಷ್ಟಕ್ಕೆ ಬೀಳಲಿದೆ. ಖಾಸಗೀರಣಕ್ಕೆ ಅಂಚೆ ಇಲಾಖೆಯನ್ನು ನೀಡುವುದರಿಂದ ಇಲ್ಲಿ ಗುತ್ತಿದೆ ಆಧಾರ ಮೇಲೆ ಕೆಲಸ ಮಾಡುತ್ತಿರುವ ಮತ್ತು ಕೆಲ ಖಾಯಂ ನೌಕರರ ಉದ್ಯೋಗಕ್ಕೆ ಧಕ್ಕೆಯಾಗಲಿದೆ. ಖಾಸಗೀಕರಣದಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿರುವುದರಿಂದ ಯಾವುದೇ ಕಾರಣಕ್ಕೂ ಅಂಚೆ ಇಲಾಖೆಯನ್ನು ಖಾಸಗೀಕರಣ ಮಾಡಬಾರದು ಎಂದು ಪಟ್ಟು ಹಿಡಿದರು.
ಸರ್ಕಾರದ ನಿರ್ಲಕ್ಷ್ಯ: ಗ್ರಾಮೀಣ ಅಂಚೆ ನೌಕರರ ಕಡೆಗೆ ಸರ್ಕಾರ ಗಮನ ನೀಡಬೇಕು ಎಂದು ಆಗ್ರಹಿಸಿದ ಅಂಚೆ ನೌಕಕರು, ಶೇ.10 ಡಿಎ ಮೂಲ ವೇತನದೊಂದಿಗೆ ಇಲಾಖೆ ನೌಕರರೊಂದಿಗೆ ಗ್ರಾಮೀಣ ನೌಕರರನ್ನೂ ವಿಲೀನಗೊಳಿಸುವಂತೆ ಒತ್ತಾಯವಿದ್ದರೂ ಸರ್ಕಾರ ಸಂಪೂರ್ಣವಾಗಿ ಗ್ರಾಮೀಣ ಅಂಚೆ ನೌಕರರನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿದರು. ಇದರೊಂದಿಗೆ ಅಂಚೆ ನೌಕರರನ್ನು ಕಡಿತಗೊಳಿಸಬಾರದು ಎಂದೂ ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ವಿಭಾಗೀಯ ಕಾರ್ಯದರ್ಶಿ ಕೆ.ಜೆ.ಶಿವಾಜಿ, ಮಂಜುನಾಥ್, ಉಮೇಶ್, ನಾಗೇಶ್, ಕುಮಾರ್, ಕಲ್ಲೇಶ್, ಪುರಷೋತ್ತಮ್ ಹಾಗೂ ಇತರರು ಇದ್ದರು.