ಇಚ್ಛಾಶಕ್ತಿ ಕೊರತೆಯಿಂದ ನೀರಿಗೆ ಪರದಾಟ
ಅರಸೀಕೆರೆ: ತಾಲೂಕಿನ ಚುನಾಯಿತ ಜನಪ್ರತಿನಿಧಿಗಳು ಮತ್ತು ಜನತೆಯ ಇಚ್ಛಾಶಕ್ತಿ ಕೊರತೆ ಕಾರಣ ಜಿಲ್ಲೆಯಲ್ಲಿ ಹೇಮಾವತಿ ಮತ್ತು ಯಗಚಿ ಜಲಾಶಯಗಳಿದ್ದರೂ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೇವಲ ಚುನಾವಣೆ ವೇಳೆ ಹಣ ಮತ್ತು ಹೆಂಡಕ್ಕೆ ಮಾರುಹೋಗುವ ಕೆಲವು ಮತದಾರರು ಭವಿಷ್ಯದ ಬಗ್ಗೆ ಚಿಂತಿಸಬೇಕಾಗಿದೆ.
ಸ್ವಾತಂತ್ರ ಬಂದು 65 ವರ್ಷಗಳೇ ಕಳೆದರೂ, ಅನೇಕ ಸಮಸ್ಯೆಗಳನ್ನು ನಮ್ಮನಾಳುವ ಪ್ರಬುದ್ದರಿಂದ ಪರಿಪೂರ್ಣವಾಗಿ ಬಗೆಹರಿಸಲು ಸಾಧ್ಯವಾಗಿಲ್ಲ ಎಂದು ಕೊಳಗುಂದ ಕೇದಿಗೆ ಮಠದ ಶ್ರೀಜಯಚಂದ್ರಶೇಖರ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ರೈತಸಂಘದ ತಾಲೂಕು ಘಟಕ, ತಾಲೂಕು ಹಸಿರುಸೇನೆ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ದಲಿತ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಹಾಗೂ ಮಾಡಾಳು ನಿರಂಜನ ಪೀಠದ ಶ್ರೀರುದ್ರಮುನಿ ಸ್ವಾಮೀಜಿಗಳ ನೇತೃತ್ವದಲ್ಲಿ ಸೋಮವಾರ ಬೆಳಿಗ್ಗೆ ಪ್ರವಾಸಿಮಂದಿರದ ಆವರಣದಿಂದ ರಾಷ್ಟ್ರೀಯ ಹೆದ್ದಾರಿಯ ಮೂಲಕ ಪಾದಯಾತ್ರೆ ನಡೆಸಿ, ತಾಲ್ಲೂಕು ಕಚೇರಿ ಎದುರು ಪ್ರಾರಂಭಗೊಂಡ ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಮಡು ಮಾತನಾಡಿದ ಅವರು, ರೈತರ ಹೋರಾಟದ ಪ್ರಮುಖ ಬೇಡಿಕೆಗಳಾದ ತಾಲೂಕಿನ ಪ್ರತಿಯೊಂದು ಕೆರೆಗಳಿಗೂ ನೀರು ತುಂಬಿಸುವ ಮೂಲಕ ಅಂತರ್ಜಲ ಮಟ್ಟ ವೃದ್ಧಿಸಬೇಕೆಂದು ಆಗ್ರಹಿಸಿದರು.
ಬಂದ್ಗೆ ಕರೆ: ತಾಲೂಕಿನ ರೈತ ಸಂಘದ ಅಧ್ಯಕ್ಷ ಮೇಳೇನಹಳ್ಳಿ ನಾಗರಾಜು ಮಾತನಾಡಿ, ತಾಲೂಕಿನ ಭೀಕರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಫೆ. 17ರಿಂದ ಫೆ. 20ರವರೆಗೂ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದ್ದು, ಫೆ. 21ರಂದು ಉಪವಾಸ ಸತ್ಯಾಗ್ರಹ, ಹಾಗೂ ಫೆ.22 ರಂದು ಅರಸೀಕೆರೆ ಸಂಪೂರ್ಣ ಬಂದ್ಗೆ ಕರೆನೀಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಈ ಸ್ಥಳಕ್ಕೆ ಬಂದು ನಮ್ಮ ಬೇಡಿಕೆ ಈಡೇರಿಕೆಗೆ ಭರವಸೆ ನೀಡುವವರೆಗೂ ಹೋರಾಟ ನಡೆಸುವುದು ಶತಃಸಿದ್ಧ ಎಂದು ಘೋಷಣೆ ಮಾಡಿದರು.
ಪ್ರತಿಭಟನೆಯಲ್ಲಿ ರೈತಸಂಘದ ಜಿಲ್ಲಾ ಉಪಾಧ್ಯಕ್ಷ ಬೋರನಕೊಪ್ಪಲು ಶಿವಲಿಂಗಪ್ಪ, ತಾಲೂಕು ಗೌರವಾಧ್ಯಕ್ಷ ಜವನಹಳ್ಳಿ ನಿಂಗಪ್ಪ, ತಾಲೂಕು ಕಾರ್ಯದರ್ಶಿ ಅಣ್ಣಾಯಕನಹಳ್ಳಿ ಶಿವಮೂರ್ತಿ, ಮುಖಂಡರಾದ ಗೀಜಿಹಳ್ಳಿ ಶಿವಪ್ರಸಾದ್, ಪಿ.ಬಿ.ನಾಗರಾಜ್, ರವೀಶ್ ಬಾಬು, ಕರವೇ ತಾಲೂಕು ಅಧ್ಯಕ್ಷ ಹೇಮಂತಕುಮಾರ್, ನಗರಾಧ್ಯಕ್ಷ ಕಿರಣ್ ಗೌಡ, ದಲಿತ ಸಂಘಟನೆ ಮುಖಂಡ ಹುಲಿಯಪ್ಪ ಇನ್ನಿತರರು ಭಾಗವಹಿಸಿದ್ದರು.
ಸ್ವಾಮೀಜಿಗಳ ಬೆಂಬಲ
ಫೆ. 17ರಿಂದ ಹಮ್ಮಿಕೊಳ್ಳಲಾಗಿರುವ ಸತ್ಯಾಗ್ರಹಕ್ಕೆ ಸ್ಥಳೀಯ ಹಲವು ಸಂಘ ಸಂಸ್ಥೆಗಳು ಈ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿವೆ ಎಂದು ರೈತ ಸಂಘದ ಅಧ್ಯಕ್ಷ ಮೇಳೇನಹಳ್ಳಿ ನಾಗರಾಜು ತಿಳಿಸಿದ್ದಾರೆ. ಸುಕ್ಷೇತ್ರ ಕೋಡಿಮಠದ ಶ್ರೀಶಿವಾನಂದ ಶಿವಾಯೋಗಿ ರಾಜೇಂದ್ರ ಸ್ವಾಮೀಜಿ, ಮಾಡಾಳು ಕುಮಾರಾಶ್ರಮದ ಶ್ರೀತೋಂಟಾದಾರ್ಯ ಸ್ವಾಮೀಜಿ, ನಿರಂಜನ ಮಠದ ಶ್ರೀರುದ್ರಮುನಿ ಸ್ವಾಮೀಜಿ, ಡಿ.ಎಂ. ಕುರ್ಕೆ ಬೂದಿಹಾಳ್ ವಿರಕ್ತ ಮಠದ ಶ್ರೀರಾಜಶೇಖರ ಸ್ವಾಮೀಜಿ, ಹೊನ್ನವಳ್ಳಿ ಕರಿಸಿದ್ದೇಶ್ವರ ಮಠದ ಶ್ರೀಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಬೆಂಬಲ ಸೂಚಿಸಿದ್ದಾರೆ ಎಂದು ಅವರು ಹೇಳಿದ್ದಾರೆ.