ಗ್ರಾಮೀಣರ ಆರ್ಥಿಕಾಭಿವೃದ್ಧಿಗೆ ಒತ್ತು ನೀಡಿ
ಹಾಸನ: ದೇಶದಲ್ಲಿನ ಗ್ರಾಮೀಣ ವ್ಯವಸ್ಥೆ ನಾಶವಾಗಿದೆ. ಹಳ್ಳಿ- ಪಟ್ಟಣಕ್ಕೂ ತುಂಬಾ ವ್ಯತ್ಯಾಸವಿದೆ. ಹಳ್ಳಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವುದರ ಜತೆಗೆ ಜನತೆಯ ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಮಾಜಿ ಪ್ರಧಾನಿ ಹಾಗೂ ಹಾಲಿ ಲೋಕಸಭಾ ಸದಸ್ಯ ಎಚ್.ಡಿ. ದೇವೇಗೌಡ ತಿಳಿಸಿದ್ದಾರೆ.
ತಾಲೂಕಿನ ಹೆರಗು ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಹೇಮಾವತಿ ಜಲಾಶಯದಿಂದ ನೀರು ಬಳಸಿಕೊಳ್ಳಲು ಮುಂದಾಗಬೇಕಿದೆ ಎಂದರು.
ರು. 250 ಕೋಟಿ ನೆರವು: ಶಾಸಕ ಎಚ್.ಡಿ. ರೇವಣ್ಣ ಮಾತನಾಡಿ, ಬೀಜೇನಹಳ್ಳಿ, ದೊಡ್ಡಕುಂಚೆವು- ಬನಕುಪ್ಪೆ-ಕಾರೆಕೆರೆ, ಕೆ. ಆಲದಹಳ್ಳಿ- ಹೆರಗು- ಗಂಡಸಿ ಹ್ಯಾಂಡ್ಪೋಸ್ಟ್ವರೆಗಿನ ರಸ್ತೆಗೆ 36 ಕೋಟಿ ರು. ಮಂಜೂರಾಗಿದೆ. ದುದ್ದ ಹೋಬಳಿಗೆ ರಸ್ತೆ ಅಭಿವೃದ್ಧಿಗಾಗಿ 250 ಕೋಟಿ ರು. ಹಣ ನೀಡಲಾಗಿದೆ ಎಂದರು.
ಹೆರಗು ಗ್ರಾಮಕ್ಕೆ ಪದವಿ ಪೂರ್ವ ಕಾಲೇಜು ಐಟಿಐ ಕಾಲೇಜು, ಸಮುದಾಯ ಭವನಕ್ಕೆ ಗ್ರಾಮಸ್ಥರು ಮನವಿ ಮಾಡಿದ್ದು ಹೆರಗು ದೊಡ್ಡ ಗ್ರಾಮವಾದ್ದರಿಂದ ರು. 50 ಲಕ್ಷ ಗಳಲ್ಲಿ ಸಮುದಾಯ ಭವನ ನಿರ್ಮಿಸಬೇಕಾಗುತ್ತದೆ. ನಿರ್ಮಾಣಕ್ಕೆ ಸಹಕರಿಸುವುದಾಗಿ ತಿಳಿಸಿದರು. ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ, ಜಿಲ್ಲಾ ಪಂಚಾಯ್ತಿ ಸದಸ್ಯ ಲಕ್ಷ್ಮಣ್ ಇತರರು ಇದ್ದರು.