ನಗರಸಭೆ ಕ್ರಮಕ್ಕೆ ವ್ಯಾಪಾರಸ್ಥರ ವಿರೋಧ
ಹಾಸನ: ನಗರದ ದೇವಿಗೆರೆ ಅವರಣದ ಜಾಗಕ್ಕೆ ಸಂಬಂಧಿಸಿದ ವಿಚಾರ ನ್ಯಾಯಾಲದಲ್ಲಿ ಇರುವಾಗ ನಗರಸಭೆಯವರು ಕಟ್ಟಡ ನಿರ್ಮಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿ ಮಂಗಳವಾರ ಅಲ್ಲಿನ ವ್ಯಾಪಾರಸ್ಥರು ವಿರೋಧ ವ್ಯಕ್ತಪಡಿಸಿದರು. ದೇವಿಗೆರೆ ಆವರಣದಲ್ಲಿ ಹಿಂದೆ ಟೆಂಟ್ ಹಾಕಿಕೊಂಡು ಕೆಲವರು ವ್ಯಾಪಾರ ನಡೆಸುತ್ತಿದ್ದರು. ಈ ಸಂಬಂಧವಾಗಿ ಆ ಜಾಗವನ್ನು ಟೆಂಟ್ ವ್ಯಾಪಾರಸ್ಥರಿಗೆ ವ್ಯಾಪಾರ ಮಾಡುವಂತೆ ಅವಕಾಶ ಕಲ್ಪಿಸಿಕೊಡುವಂತೆ ವ್ಯಾಪಾರಸ್ಥರು ನ್ಯಾಯಾಲಯದ ಮೊರೆ ಹೋಗಿದ್ದರು.
ಒತ್ತಾಯ: ಪ್ರಸ್ತುತ ವಿಚಾರಣೆ ನ್ಯಾಯಾಲದಲ್ಲಿ ಇರುವ ಸಂದರ್ಭದಲ್ಲಿ ನಗರಸಭೆಯವರು ಏಕಾಏಕಿ ಇಲ್ಲಿ ಕಟ್ಟಡ ಕಾಮಗಾರಿಗಳನ್ನು ನಡೆಸುತ್ತಿದ್ದಾರೆ. ಆದ್ದರಿಂದ ಇಲ್ಲಿ ಯಾವ ಕಟ್ಟಡವನ್ನು ನಿರ್ಮಿಸದಂತೆ ವ್ಯಾಪಾರಸ್ಥರು ಪಟ್ಟು ಹಿಡಿದಿದ್ದು, ಇಲ್ಲಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ.
ತಹಸೀಲ್ದಾರ್ ಭರವಸೆ: ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಮಂಜುನಾಥ್, ಸ್ಥಳಕ್ಕೆ ವಿಚಾರವಾಗಿ ನ್ಯಾಯಾಲಯದಲ್ಲಿ ಇರುವುದರಿಂದ ವ್ಯಾಪಾರಸ್ಥರು ಯಾವುದೇ ಕಾರಣಕ್ಕೂ ಅತಿಕ್ರಮ ಪ್ರವೇಶ ಮಾಡಿ ಗಲಾಟೆಗೆ ಆಸ್ಪದ ನೀಡಬಾರದು. ಜೊತೆಗೆ ಇಲ್ಲಿ ಅಂಗಡಿ-ಮುಂಗಟ್ಟುಗಳನ್ನು ತೆರೆಯಲು ಅವಕಾಶವಿಲ್ಲ. ಆದ್ದರಿಂದ, ಪ್ರಕರಣ ಇತ್ಯರ್ಥ ಆಗುವವರೆಗೂ ವ್ಯಾಪಾರಸ್ಥರು ಆತುರದ ನಿರ್ಧಾರಕ್ಕೆ ಮುಂದಾಗಬಾರದು ಎಂದು ಮನವಿ ಮಾಡಿದರು. ನಂತರ ವ್ಯಾಪಾರಸ್ಥರಿಂದ ಮಾಹಿತಿಯನ್ನು ಪಡೆದರು.
ಆರ್ಥಿಕ ಸಾಕ್ಷರತೆ ಕುರಿತು ಮಾಹಿತಿ
ಹಾಸನ: ಬ್ಯಾಂಕಿನ ವ್ಯವಸ್ಥೆ ಕುರಿತು, ದೊರಕುವ ಸಾಲ ಸೌಲಭ್ಯ, ವಿವಿಧ ಸೇವಾ ಸೌಲಭ್ಯ, ಕೃಷಿ ಸಾಲ, ಸಕಾಲದಲ್ಲಿ ಸಾಲ ಮರುಪಾವತಿ, ಹಣ ಉಳಿತಾಯ ಇತ್ಯಾದಿ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲು ಭಾರತೀಯ ರಿಸರ್ವ್ ಬ್ಯಾಂಕ್ ಆದೇಶದನ್ವಯ ಜನಸಾಮಾನ್ಯರಿಗೆ ಬ್ಯಾಂಕುಗಳ ಸೇವೆಗಳ ಕುರಿತು ಸಾಕ್ಷರತೆ ನೀಡುವ ಉದ್ದೇಶದಿಂದ ಹಾಸನದಲ್ಲಿ ತೆರೆಯಲಾದ ಅಮೂಲ್ಯ, ಆರ್ಥಿಕ ಸಾಕ್ಷರತಾ ಕೇಂದ್ರ, ತಾಲ್ಲೂಕು ಪಂಚಾಯಿತಿ ಕಟ್ಟಡ, ಹಾಸನ ಇಲ್ಲಿ ಆರ್ಥಿಕ ಸಾಕ್ಷರತೆ ಕುರಿತು ಸಮಾಲೋಚಕ ಕೆ.ಎಸ್. ಬಸವರಾಜಪ್ಪ ಅವರು ಸಾರ್ವಜನಿಕರಿಗೆ ಉಚಿತ ಮಾಹಿತಿ ನೀಡಲಿದ್ದಾರೆ. ಬ್ಯಾಂಕುಗಳ ಸೇವೆಗಳ ಕುರಿತು ಎಲ್ಲರಿಗೂ ಉಚಿತ ಸಲಹೆಗಾಗಿ ಸಂಪರ್ಕಿಸಬೇಕೆಂದು ಆರ್ಥಿಕ ಸಾಕ್ಷರತಾ ಕೇಂದ್ರದ ಕೆ.ಎಸ್. ಬಸವರಾಜಪ್ಪ ಕೋರಿದ್ದಾರೆ.