ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ನಿಲ್ಲದ ದೌರ್ಜನ್ಯ; ಬೀದಿಗಿಳಿದ ವೈದ್ಯರು

Rashmi Kasaragodu
Updated On : 19 Feb 2014, 1:09 am

ಹಾಸನ: ವೈದ್ಯರ ಮೇಲೆ ಆಗುತ್ತಿರುವ ಹಲ್ಲೆ ಪ್ರಕರಣವನ್ನು ಖಂಡಿಸಿ ಹಾಸನ ವೈದ್ಯಕೀಯ ವಿಜ್ಞಾನಗಳ ಸಂಘ ಹಾಗೂ ಕಿರಿಯ ವೈದ್ಯರ ಸಂಘದ ವೈದ್ಯರು ಮಂಗಳವಾರ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರ ನಗರದ ವೈದ್ಯಕೀಯ ಕಾಲೇಜಿನ ಮುಂದೆ ಕೆಲ ಸಮಯ ಪ್ರತಿಭಟನೆ ನಡೆಸಿ ವೈದ್ಯರ ಮೇಲಾಗುತ್ತಿರುವ ದೌರ್ಜನ್ಯ ಹಾಗೂ ಹಲ್ಲೆ ಪ್ರಕರಣವನ್ನು ತಡೆಗಟ್ಟುವಂತೆ ಒತ್ತಾಯಿಸಿದರು.
ಧರಣಿ ಹಿನ್ನೆಲೆ: ಶ್ರೀ ಚಾಮರಾಜೇಂದ್ರ ಆಸ್ಪತ್ರೆಯ ತುರ್ತು ವಿಭಾಗಕ್ಕೆ ಸೋಮವಾರ ರಾತ್ರಿ 7.45ರ ವೇಳೆಗೆ ಮಧುಕರ ಎಂಬವರ ತಲೆಗೆ ಪೆಟ್ಟು ಬಿದ್ದಿದೆ ಎಂದು ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ಕರೆದುಕೊಂಡು ಬಂದಿದ್ದಾರೆ.
 ಆ ರೋಗಿಯನ್ನು ವೈದ್ಯರು ಚಿಕಿತ್ಸೆಯನ್ನು ನೀಡುವ ಸಂದರ್ಭದಲ್ಲಿ ರೋಗಿಯ ಸಂಬಂಧಿಕ ಸ್ವಾಮಿ ಎಂಬಾತ ಏಕಾಏಕಿ ವೈದ್ಯರ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಪೀಠೋಪಕರಣಗಳನ್ನು ಧ್ವಂಸ ಮಾಡಿ, ಆಸ್ಪತ್ರೆಯಲ್ಲಿದ್ದ ಇತರ ವೈದ್ಯರು ಹಾಗೂ ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಸಂದರ್ಭದಲ್ಲಿ, ವೈದ್ಯರಾದ ಹೇಮಂತ್, ಕಾರ್ತಿಕ್ ಚಬ್ಬಿ ಮತ್ತು ಸಹೇಬ್ ರೆಹಮಾನ್ ಹಲ್ಲೆಗೀಡಾಗಿದ್ದಾರೆ ಎಂದು ವೈದ್ಯರು ಆರೋಪಿಸಿದರು. ಆಸ್ಪತ್ರೆಯಲ್ಲಿ ಸೂಕ್ತ ಭದ್ರತೆ ಇಲ್ಲದಿರುವುದರಿಂದ ಆಸ್ಪತ್ರೆಯಲ್ಲಿ ಇಂಥ ಘಟನೆಗಳು ಹೆಚ್ಚಾಗಲು ಕಾರಣವಾಗಿದೆ ಎಂದು ವೈದ್ಯರುತಮ್ಮ ಅಳಲು ತೋಡಿಕೊಂಡರಲ್ಲದೇ, ಸೂಕ್ತ  ಭದ್ರತೆ ನೀಡುವಂತೆ ಆಗ್ರಹಿಸಿದರು.
ಪೊಲೀಸರು ಸ್ಪಂದಿಸಿಲ್ಲ: ಈ ಬಗ್ಗೆ ನಗರ ಪೊಲೀಸ್ ಠಾಣೆಗೆ ದೂರನ್ನೂ ನೀಡಲಾಗಿದ್ದರೂ ಅಲ್ಲಿನ ಪೊಲೀಸ್ ಸಿಬ್ಬಂದಿ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ ವೈದ್ಯರು, ಆಸ್ಪತ್ರೆಯಲ್ಲಿ ರಾತ್ರಿ ಪಾಳಯದಲ್ಲಿ ಕೇವಲ ಒಬ್ಬ ಪೊಲೀಸ್ ಪೇದೆ ಮಾತ್ರ ಕಾರ್ಯನಿರ್ವಹಿಸುವುದರಿಂದ ಇಂಥ ಘಟನೆಗಳು ಜರುಗಿದಲ್ಲಿ ಅದನ್ನು ನಿಯಂತ್ರಿಸಲು ಆತನೊಬ್ಬನಿಂದ ಸಾಧ್ಯವಾಗುವುದಿಲ್ಲ. ಈ ವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ವೈದ್ಯರು ಕೋರಿದರು.
ಪದೇ ಪದೇ ಘಟನೆ: ವೈದ್ಯರು ಸರಿಯಾದ ಸಮಯಕ್ಕೆ ಬಂದು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರೂ ಈ ರೀತಿಯ ಹಲ್ಲೆ ಘಟನೆಗಳು ನಡೆಯುತ್ತಿರುವುದರಿಂದ ಆಸ್ಪತ್ರೆಯಲ್ಲಿ ಭದ್ರತೆಯ ಕೊರತೆ ಉಂಟಾಗಿದೆ. ಸಾರ್ವಜನಿಕರ ಈ ರೀತಿಯ ವರ್ತನೆ ಬೇಸರ ತಂದಿದೆ. ಮಹಿಳಾ ವೈದ್ಯರು ಹಾಗೂ ಸಿಬ್ಬಂದಿಗೂ ಕೆಲವೊಮ್ಮೆ ರೋಗಿಗಳ ಕಡೆಯವರು ಕುಡಿದು ಬಂದು ಅವಾಚ್ಯ ಶಬ್ದಗಳ ಬಳಕೆ ಮಾಡುವುದರಿಂದ ಮಹಿಳಾ ಸಿಬ್ಬಂದಿಗೂ ಕಿರಿಕಿರಿಯೆನಿಸುತ್ತಿದೆ. ಆದ್ದರಿಂದ ಕೂಡಲೇ ಆಸ್ಪತ್ರೆಗೆ ಭದ್ರತೆಯನ್ನು ಒದಗಿಸುವ ಮೂಲಕ ಈ ರೀತಿಯ ಘಟನೆಗಳು ನಡೆಯದಂತೆ ಕ್ರಮಕೈಗೊಳ್ಳುವಂತೆ ವೈದ್ಯರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಚ್.ಸಿ. ಶ್ರೀನಿಧಿ, ಹೇಮಂತ್, ಕಾರ್ತಿಕ್ ಛಬ್ಬಿ, ಸುಹೇಬ್ ರೆಹಮಾನ್ ಹಾಗೂ ಇತರರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement