ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮತ್ತೊಂದು ಒಂಟಿ ಸಲಗ ಸೆರೆ

Rashmi Kasaragodu
Updated On : 19 Feb 2014, 1:12 am

ಆಲೂರು: ಆನೆ ಹಿಡಿಯುವ ಕಾರ್ಯಾಚರಣೆಯಲ್ಲಿ ತೊಡಗಿರುವ ಅರಣ್ಯ ಇಲಾಖೆ ಸಿಬ್ಬಂದಿಗೆ 6ನೇ ದಿನ ಮತ್ತೊಂದು ಯಶಸ್ಸು ಸಿಕ್ಕಿದೆ. ಜನರ ಭೀತಿಗೆ ಕಾರಣವಾಗಿದ್ದ ನರಹಂತಕ ಒಂಟಿ ಸಲಗವನ್ನು ಹಿಡಿಯುವಲ್ಲಿ ಅರಣ್ಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಈವರೆಗೂ ಹಿಡಿದಿದ್ದ ಎಲ್ಲಾ ಆನೆಗಳಿಂತಲೂ ಅತ್ಯಂತ ದೊಡ್ಡದಾದ ಬಲಿಷ್ಠವಾದ ಇದಾಗಿದ್ದು, ಈ ಸಲಗಕ್ಕೆ 40 ವರ್ಷ ವಯಸ್ಸು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರವಷ್ಟೇ ಈ ಪ್ರದೇಶದಲ್ಲಿ ಅಪಾಯಕಾರಿಯಾಗಿದ್ದ ಮಕ್ನಾ ಆನೆಯನ್ನು ಹಿಡಿದಿದ್ದ ತಂಡಕ್ಕೆ ಇಂದು ಹಿಡಿದ ಒಂಟಿ ಸಲಗ ಸೇರಿದಂತೆ 8 ಆನೆಗಳ ಹಿಂಡು ಪುನಃ ಇದೇ ಅರಣ್ಯ ಪ್ರದೇಶದಲ್ಲಿ ಇರುವುದು ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ, ಮಕ್ನಾ ಆನೆಯನ್ನು ಸಾಗಿಸದೇ ಅರಣ್ಯ ಇಲಾಖೆಯ ತಂಡ ಮಂಗಳವಾರ ಪುನಃ ಕಾರ್ಯಾಚರಣೆಗೆ ಮುಂದಾಯಿತು.
ದಿನವಿಡೀ ಕಾರ್ಯಾಚರಣೆ: ಬೆಳಗಿನಿಂದಲೇ ಉಂಬಳಿಬೆಟ್ಟ ಅರಣ್ಯ ಪ್ರದೇಶದಲ್ಲಿ ಸಾಕಾನೆಗಳೊಂದಿಗೆ ಕಾರ್ಯಾಚರಣೆಗೆ ಮುಂದಾಯಿತು. ಕಾರ್ಯಾಚರಣೆಗೆ ಮುಂದಾದ ತಂಡ 2 ಗಂಟೆಯಲ್ಲಿ ಈ ಒಂಟಿ ಸಲಗವನ್ನು ಗುರುತಿಸಿ ಅದಕ್ಕೆ ಅರವಳಿಕೆ ಮದ್ದನ್ನು ನೀಡಲಾಯಿತು. ಆದರೆ ಅತ್ಯಂತ ಬಲಿಷ್ಠವಾದ ಸಲಗವಾದ ಕಾರಣ ಅರವಳಿಕೆ ಮದ್ದು ಅದರ ಮೇಲೆ ಪ್ರಭಾವ ಬೀರಲಿಲ್ಲ. ಆದ್ದರಿಂದಾಗಿ ಒಂಟಿ ಸಲಗ ಕಾಡಿನೊಳಗೆ ಓಡಿ ಕಣ್ಮರೆಯಾದ ಸಲಗ ಪುನಃ ಸಂಜೆ 5.30ರ ವೇಳೆಗೆ ತಂಡಕ್ಕೆ ಗೋಚರವಾಯಿತು. ಆಗ, ಅರಣ್ಯ ಇಲಾಖೆ ಸಿಬ್ಬಂದಿ ಮತ್ತೆ ಅರವಳಿಕೆ ಮದ್ದು ನೀಡಿದರು. ಈ ಬಾರಿ ಅರವಳಿಕೆ ಮದ್ದು ಪರಿಣಾಮ ಬೀರಿತು. ಒಂಟಿ ಸಲಗ ಉಂಬಳಿಬೆಟ್ಟದ ಅರಣ್ಯದ ಮಧ್ಯಭಾಗಕ್ಕೆ ಹೋಗಿ ಪ್ರಜ್ಞೆ ತಪ್ಪಿ ನೆಲಕ್ಕೆ ಉರುಳಿತು.
ಸಿಬ್ಬಂದಿ ಹರಸಾಹಸ: ನಂತರ ಸಲಗವನ್ನು ಪುನಃ ಸರಪಳಿಯಿಂದ ಬಂಧಿಸಿ ಅದನ್ನು ಅರಣ್ಯ ಪ್ರದೇಶದಿಂದ ಮಾಗಡಿಹಳ್ಳಿ ಕ್ಯಾಂಪ್ಗೆ ತರಲು ಹರಸಾಹಸ ಪಡಬೇಕಾಯಿತು. ಅತ್ಯಂತ ಬಲಿಷ್ಠವಾಗಿರುವ ಸಲಗ ಪುನಃ ಸಾಕಾನೆಗಳೊಂದಿಗೆ ಸೆಣಸಾಟಕ್ಕೆ ಇಳಿಯಿತು. ಈ ಸಂದರ್ಭದಲ್ಲಿ ಪುನಃ ಹರಸಾಹಸ ಪಟ್ಟು ಈ ಆನೆಯನ್ನು ಹೇಮಾವಾತಿ ನದಿ ದಾಟಿಸಲು ಪ್ರಯತ್ನಿಸಿದಾಗ ನದಿಯ ಪಕ್ಕದಲ್ಲಿ ಕುಸಿದು ಬಿದ್ದ ಆನೆಯನ್ನು ಏಳಿಸಲು ಸಾಕಾನೆಗಳು ಎಷ್ಟೇ ಪ್ರಯತ್ನ ಪಟ್ಟರು ಸಾಧ್ಯವಾಗಲಿಲ್ಲ. ಕುಸಿದ ಆನೆ ಒಂದು ಗಂಟೆಯಾದರೂ ಏಳಲಿಲ್ಲ.
ಅಭಿಮನ್ಯುವಿನ ಹೋರಾಟ: ಈ ಸಂದರ್ಭದಲ್ಲಿ ಆನೆಯೊಂದಿಗೆ ಸೆಣಸಾಟ ನಡೆಸುತ್ತಿದ್ದ ಸಾಕಾನೆ ಅಭಿಮನ್ಯುಗೆ ಗಾಯವಾಗಿ, ದಂತವಿದ್ದ ಬಳಿ ರಕ್ತಸ್ರಾವವಾಯಿತು. ಆದರೂ ಸಹ ಪಟ್ಟು ಬಿಡದ ಅಭಿಮನ್ಯು ಶತಾಯಗತಾಯವಾಗಿ ಎಬ್ಬಿಸಿ ಒಂಟಿ ಸಲಗವನ್ನು ಮಾಗಡಿಹಳ್ಳಿ ಕ್ಯಾಂಪ್ಗೆ ಸಾಗಿಸಲು ಪ್ರಯತ್ನಿಸಲಾಯಿತು.
ಗ್ರಾಮಸ್ಥರ ಕುತೂಹಲ: ಈ ಸಂದರ್ಭದಲ್ಲಿ ಸಾಗರೋಪಾದಿಯಲ್ಲಿ ಸೇರಿದ್ದ ಜನರು ಕಾರ್ಯಾಚರಣೆಯನ್ನು ನೋಡಲು ಬೆಳಗಿನಿಂದಲು ಕದಲದೆ ಇದೇ ಸ್ಥಳದಲ್ಲಿ ಬೀಡು ಬಿಟ್ಟಿದ್ದು, ಆಲ್ಲದೆ ಕಾಡಾನೆ ಹಿಡಿದ ಸ್ಥಳಕ್ಕೆ ದಾವಿಸಿ ಆನೆಯನ್ನು ಕರೆತರುವ ಸಂದರ್ಭದಲ್ಲಿ ಅರಣ್ಯ ಇಲಾಖೆಯವರು ಎಷ್ಟೇ ಹೇಳಿದರು ಕಾಡಾನೆ ಎಳೆ ತರಲು ನೋಡಲು ತಾ ಮುಂದು ಎಂದು ನುಗ್ಗಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ಜನರನ್ನು ಓಡಿಸಲು ಸಾಕಾನೆಯಿಂದ ಪ್ರಯತ್ನಿಸಬೇಕಾಯಿತು.
ಸಿಬ್ಬಂದಿಗೆ ಸಿಕ್ಕ ಯಶಸ್ಸು: ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿರುವ ಅರಣ್ಯ ಇಲಾಖೆ ಸಿಬ್ಬಂದಿ, ಸೋಮವಾರ ಮಕ್ನಾ ಆನೆ ಹಿಡಿದ ಸಂದರ್ಭದಲ್ಲಿ ಆನೆಯನ್ನು ಮಕ್ನಾನವನ್ನು ಮತ್ತಿಗೋಡು ಅರಣ್ಯ ಪ್ರದೇಶದಕ್ಕೆ ಸಾಗಿಸಲು ತೀರ್ಮಾನಸಿಲಾಗಿತ್ತು. ಆದರೆ ಹಲವು ದಿನಗಳಿಂದ ಕಣ್ಮರೆಯಾಗಿದ್ದ ಒಂಟಿ ಸಲಗವು ಉಂಬಳಿಬೆಟ್ಟದಲ್ಲಿ ಕಾಣಿಸಿಕೊಂಡ ಕಾರಣ ಮಕ್ನಾ ಆನೆಯನ್ನು ಸಾಗಾಣಿಕೆಯನ್ನು ಕೈಬಿಟ್ಟು ಒಂಟಿ ಸಲಗವನ್ನು ಹಿಡಿಯಲು ತೀರ್ಮಾನಿಸಿದೆವು. ಆದ್ದರಿಂದ ಇಂದು ಆನೆಯನ್ನು ಸೆರೆ ಹಿಡಿದ್ದು, ಈ ಆನೆಗಳನ್ನು ಮತ್ತಿಗೋಡು ಅರಣ್ಯಧಾಮಕ್ಕೆ ಸಾಗಿಸುವುದಾಗಿ ತಿಳಿಸಿದ್ದಾರೆ.
ಶಾಸಕರ ಶ್ಲಾಘನೆ: ಒಂಟಿ ಸಲಗವನ್ನು ಹಿಡಿದಿರುವ ಅರಣ್ಯ ಸಿಬ್ಬಂದಿಯನ್ನು ಶಾಸಕ ಎಚ್.ಕೆ.ಕುಮಾರಸ್ವಾಮಿ ಅಭಿನಂದಿಸಿದ್ದಾರೆ.
ಈ ಬಗ್ಗೆ ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ಎರಡು ದಿನ ಎಡಬಿಡದೆ ಕಾರ್ಯಾಚರಣೆ ನಡೆಸಿ ಅರಣ್ಯ ಇಲಾಖೆಯ ಸಿಬ್ಬಂದಿ  ಮಕ್ನಾ ಹಾಗೂ ಅತ್ಯಂತ ಅಪಾಯಕಾರಿಯಾದ ಒಂಟಿ ಸಲಗ ಹಿಡಿದಿರುವುದು ಶ್ಲಾಘನೀಯ ಎಂದಿದ್ದಾರೆ.



ಸಿಬ್ಬಂದಿ, ಆನೆಗಳಿಗೆ ರಜೆ?
ಅರಣ್ಯ ಇಲಾಖೆಯ ಸಿಬ್ಬಂದಿ ಎರಡು ದಿನಗಳಲ್ಲಿ 2 ಕಾಡಾನೆಗಳನ್ನು ಹಿಡಿದಿದ್ದು, ಸಾಕಾನೆಗಳು ಸಹ ಗಾಯ ಹಾಗೂ ದಣಿವಿನಿಂದಾಗಿ ಬಸವಳಿದಿವೆ. ಈ ಹಿನ್ನೆಲೆಯಲ್ಲಿ, ಅವುಗಳಿಗೂ ಸಹ ವಿಶ್ರಾಂತಿ ಬೇಕಾಗಿರುವುದರಿಂದ ಕೆಲ ದಿನಗಳ ಮಟ್ಟಿಗೆ ಆನೆಗಳಿಗೆ, ಅರಣ್ಯ ಇಲಾಖೆ ಸಿಬ್ಬಂದಿಗೆ, ಮಾವುತರಿಗೆ, ಕಾವಾಡಿಗಳು, ಕಾಡು ಕುರುಬರು ಸೇರಿದಂತೆ ಸಿಬ್ಬಂದಿ ವರ್ಗಕ್ಕೆ ವಿಶ್ರಾಂತಿ ಬೇಕಾಗಿದ್ದು, ಒಂದೆರಡು ದಿನ ಕಾರ್ಯಾಚರಣೆಗೆ ವಿರಾಮ ನೀಡುವ ಸಾಧ್ಯತೆ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement