ಸೂಕ್ತ ಮಾರ್ಗದರ್ಶನದಿಂದ ಸಾಧನೆ'
ಹಾಸನ: ಮಕ್ಕಳಲ್ಲಿ ಉತ್ತಮ ಕ್ರೀಡಾ ಪ್ರತಿಭೆಗಳಿವೆ. ಅವರೆಲ್ಲರಿಗೂ ಸೂಕ್ತ ತರಬೇತಿ ಹಾಗೂ ಮಾರ್ಘದರ್ಶನ ದೊರೆತಲ್ಲಿ ಹೆಚ್ಚಿನ ಸಾಧನೆ ನಿರೀಕ್ಷಿಸಬಹುದು ಎಂದು ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ತಿಳಿಸಿದರು.
ನಗರದ ಜಿಲ್ಲಾ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಅಂತರ ಕ್ರೀಡಾಶಾಲಾ ಹಾಕಿ ಪಂದ್ಯಾವಳಿಗೆ ಚಾಲನೆ ನೀಡಿ, ಮಾತನಾಡಿದರು.
ವಿಶ್ವಾಸ: ಭಾರತ ದೇಶದ ಕ್ರೀಡೆಗೆ ಬಹಳಷ್ಟು ಹಿನ್ನೆಲೆಯಿದೆ. ಆದರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಯಶಸ್ಸು ದೊರೆಯುತ್ತಿಲ್ಲ. ಕ್ರೀಡೆಯಲ್ಲಿ ಅಂತಿಮ ಹಂತದಲ್ಲಿ ಸೋಲು ಅನುಭವಿಸುತ್ತಿರುವುದನ್ನು ಗಮನಿಸುತ್ತಿದ್ದೇವೆ. ಎಲ್ಲರಿಗೂ ಉತ್ತಮ ತರಬೇತಿ ದೊರೆತರೆ ಮುಂದಿನ ದಿನಗಳಲ್ಲಿ ದೇಶೀಯ ಕ್ರೀಡಾಪಟುಗಳು ಇನ್ನಷ್ಟು ಉತ್ತಮ ಪ್ರದರ್ಶನ ತೋರುವುದರಲ್ಲಿ ಅನುಮಾನವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕರೆ: ಕ್ರೀಡಾ ಪಟುಗಳು ಮುಂದಿನ ಯುವ ಜನಾಂಗಕ್ಕೆ ಮಾರ್ಗದರ್ಶಕರಾಗಬೇಕು. ಶಿಕ್ಷಣದಷ್ಟೇ ಕ್ರೀಡೆಗೂ ಮಹತ್ವವಿದೆ. ಅದನ್ನು ಅರಿತು ಹೆಚ್ಚಿನ ಕ್ರಮ ವಹಿಸಿ ದೇಶಕ್ಕೆ ಕೀರ್ತಿ ತನ್ನಿ ಎಂದು ಕ್ರೀಡಾಪಟುಗಳಿಗೆ ಅವರು ಕರೆ ನೀಡಿದರು.
ಹಾಕಿ ಕ್ರೀಡೆ ಆಸಕ್ತಿದಾಯಕ: ಜಿಲ್ಲಾ ಪಂಚಾಯ್ತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮಣ್ ಗೌಡ ಮಾತನಾಡಿ, ಸರ್ಕಾರವು ಕ್ರೀಡಾ ಶಾಲೆಯನ್ನು ತೆರೆದು ವಸತಿ ಶಾಲೆ ಬರುವ ನಿಟ್ಟಿನಲ್ಲಿ ಕ್ರೀಡಾಪಟುಗಳಿಗೆ ಹೆಚ್ಚಿನ ತರಬೇತಿ ನೀಡಬೇಕು. ಅಂತಾರಾಜ್ಯ ಕ್ರೀಡೆಯಲ್ಲಿ ಭಾಗವಹಿಸಿ ಹೆಚ್ಚಿ ಅನುಭವ ಪಡೆಯಬೇಕು ಎಂದರು. ಹಾಕಿ ಆಟ ಸಲ್ಪ ಕಷ್ಟಕರವಾಗಿದ್ದರೂ ಉತ್ತಮ ಆರೋಗ್ಯಕರ ಆಟವಾಗಿದೆ ಎಂದು ತಿಳಿಸಿದರು.
ಮೈದಾನದ ಅವಶ್ಯಕತೆಯಿದೆ: ರಾಷ್ಟ್ರೀಯ ಹಾಕಿ ಕ್ರೀಡಾಪಟು ಹಾಗೂ ಅಂಚೆ ಇಲಾಖೆಯ ತಾರಾನಾಥ್ ಮಾತನಾಡಿ, ಹಾಕಿ ಕ್ರೀಡೆ ಒಂದು ಉತ್ತಮ ಆಟವಾಗಿದೆ. ಈ ಕ್ರೀಡೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಹೆಚ್ಚಿನ ತರಬೇತಿ ನೀಡುವ ನಿಟ್ಟಿನಲ್ಲಿ ವಿಶೇಷವಾದ ಕ್ರೀಡೆ ಕಲಿಸುವ ಮೈದಾನದ ಅವಶ್ಯಕತೆ ಇದೆ ಎಂದು ಮನವಿ ಮಾಡಿದರು.
ರಾಜ್ಯ ಮಟ್ಟದ ಕ್ರೀಡೆಯಲ್ಲಿ ಹಾಸನ, ಧಾರವಾಡ, ಹಾವೇರಿ, ಗದಗ್, ಶಿವಮೊಗ್ಗ ಸೇರಿ 5 ಜಿಲ್ಲೆಯಿಂದ ಕ್ರೀಡಾಪಟುಗಳು ಭಾಗವಹಿಸಿದ್ದರು. ಇದೇ ವೇಳೆ ಹಿರಿಯ ಹಾಕಿ ಕ್ರೀಡಾಪಟು ಚಂದ್ರಶೇಖರ್ ಹಾಗೂ ಇತರರು ಭಾಗವಹಿಸಿದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶಿವಾನಂದ್ ಸ್ವಾಗತಿಸಿದರು. ಚಂದನ ಮತ್ತು ತಂಡದವರು ಪ್ರಾರ್ಥಿಸಿದರು.