ಅನುದಾನ ಸಮರ್ಪಕ ಹಂಚಿಕೆಯಾಗಲಿ
ಹಾಸನ:13ನೇ ಹಣಕಾಸು ಯೋಜನೆಯಲ್ಲಿ ಬಂದಂತಹ ಅನುದಾನವನ್ನು ಜಿಲ್ಲಾ ಪಂಚಾಯ್ತಿಯ ಎಲ್ಲಾ ಕ್ಷೇತ್ರಗಳಿಗೆ ಸಮಾನವಾಗಿ ಹಂಚಿಕೆ ಮಾಡಬೇಕು ಎಂದು ಕಾಂಗ್ರೆಸ್ ಹಾಗೂ ಇತರೆ ಸದಸ್ಯರು ಒತ್ತಾಯಿಸಿದರು.
ನಗರದ ಜಿಲ್ಲಾ ಪಂಚಾಯ್ತಿ ಹೊಯ್ಸಳ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಡಿ.ಜಿ. ಅಂಬಿಕಾ ರಾಮಣ್ಣನವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಕಾಂಗ್ರೆಸ್ ಸದಸ್ಯರು ಹಾಗೂ ಆಡಳಿತ ರೂಢ ಜೆಡಿಎಸ್ ಸದಸ್ಯರ ನಡುವೆ ಈ ವಿಚಾರವಾಗಿ ವಾಗ್ವಾದ ನಡೆಯಿತು.
ಕಾಂಗ್ರೆಸ್ ಸದಸ್ಯರಾದ ಲಕ್ಷ್ಮಣ್ ಮತ್ತು ನಂಜುಂಡೇಗೌಡ ಹಾಗೂ ಕಿಶೋರ್ ಮಾತನಾಡಿ, 13ನೇ ಹಣಕಾಸು ಯೋಜನೆಗೆ ಸಂಬಂಧಿಸಿದಂತೆ ಕಳೆದ ಬಾರಿ ಸಿದ್ಧಪಡಿಸಿರುವಂತಹ ಕ್ರಿಯಾ ಯೋಜನೆಯಲ್ಲಿ ತಾರತಮ್ಯ ತಾಳಲಾಗಿದೆ. ಕಳೆದ ಬಾರಿ ಸಭೆಯಲ್ಲಿ ಶಾಸಕ ಶಿವಲಿಂಗೇಗೌಡರು ಸಹ ಹಣವನ್ನು ಸರಿಯಾಗಿ ಹಂಚುವಂತೆ ತಿಳಿಸಿದ್ದರು. ಆದರೆ ಶಾಸಕರ ಮಾತಿಗೂ ಸಹ ಬೆಲೆ ಕೊಟ್ಟಿಲ್ಲ ಎಂದು ಅವರು ಆರೋಪಿಸಿದರು.
ಈ ಯೋಜನೆಯಲ್ಲಿ ಯಾವ ಸದಸ್ಯರಿಗೆ ಎಷ್ಟೆಷ್ಟು ಅನುದಾನವನ್ನು ನೀಡಲಾಗಿದೆ ಎಂಬ ಮಾಹಿತಿಯನ್ನು ನೀಡಬೇಕು ಹಾಗೂ ಈ ಯೋಜನೆಯಲ್ಲಿ ಹಂಚಿಕೆಯಾಗಿರುವ ಮಾಹಿತಿಯನ್ನು ನೀಡದಿದ್ದರೆ 13ನೇ ಹಣಕಾಸು ಯೋಜನೆಯಲ್ಲಿ ಹಂಚಿಕೆಯಾಗಿರುವುದನ್ನು ರದ್ದು ಪಡಿಸಬೇಕು ಎಂದು ಎಂದು ಅವರು ಒತ್ತಾಯಿಸಿದರು. ಅಲ್ಲದೇ, ಹಂಚಲ್ಪಟ್ಟ ಅನುದಾನದ ಬಗ್ಗೆ ಚರ್ಚೆಯಾಗಬೇಕು ಎಂದು ಅವರು ಆಗ್ರಹಿಸಿದರು.
ಅಧ್ಯಕ್ಷರ ಪ್ರತಿಕ್ರಿಯೆ: ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಅಂಬಿಕಾ ರಾಮಣ್ಣನವರು, ಈ ಭಾರಿ ಈ ಯೋಜನೆಯಲ್ಲಿ 1.43 ಕೋಟಿ ರು.ಗಳ ಅನುದಾನ ಬಂದಿದ್ದು, ಸಭೆಯ ನಂತರ ಅದನ್ನು ಯಾರಿಗೆ ಎಷ್ಟೇಷ್ಟು ಹಣ ನೀಡಬೇಕು ಎಂಬುದನ್ನು ಚರ್ಚಿಸೋಣ ಹಾಗೂ ಎಲ್ಲರೂ ಒಟ್ಟಿಗೆ ಕುಳಿತು ತೀರ್ಮಾನಿಸೋಣ ಎಂದರು. ನಂತರ ಸದಸ್ಯರಾದ ಕುಸುಮ ಬಾಲಕೃಷ್ಣ ಹಾಗೂ ನಂಜುಂಡಸ್ವಾಮಿ ಮಾತನಾಡಿ, 13ನೇ ಹಣಕಾಸು ಯೋಜನೆಯ ಹಣವನ್ನು ಹಂಚಿಕೆಯನ್ನು ಅಧ್ಯಕ್ಷರು ಜವಾಬ್ದಾರಿಯುತವಾಗಿ ಮಾಡುತ್ತಾರೆ. ಅದನ್ನು ಸಭೆಯಲ್ಲಿ ಚರ್ಚಿ ಮಾಡಬೇಕಾದ ಅವಶ್ಯಕತೆ ಇಲ್ಲ ಎಂದು ಅಧ್ಯಕ್ಷರ ಬೆಂಬಲಕ್ಕೆ ನಿಂತರು.
ಪ್ರತಿವಾದ: ಈ ಸಭೆಯಲ್ಲಿ ಆನೆ, ಚಿರತೆ ಸಮಸ್ಯೆ ಸೇರಿದಂತೆ ಎಲ್ಲಾ ರೀತಿಯ ಸಮಸ್ಯೆಗಳನ್ನು ಚರ್ಚಿಸುತ್ತೇವೆ. ಅನುದಾನ ಹಂಚಿಕೆಯ ವಿಚಾರವನ್ನು ಏತಕ್ಕೆ ಚರ್ಚಿಸಬಾರದು ಎಂದು ಕಾಂಗ್ರೆಸ್ ಸದಸ್ಯ ಲಕ್ಷ್ಮಣ್ ಪ್ರಶ್ನಿಸಿ, ಸಭೆಯಿಂದ ಹೊರಗಡೆ ಈ ಬಗ್ಗೆ ಚರ್ಚಿಸಬೇಕಾಗಿಲ್ಲ ಎಂದು ಪ್ರತಿವಾದಿಸಿದರು. ಸದಸ್ಯ ನಂಜುಂಡಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಈಗಾಗಲೇ ತಲೆದೋರಿದ್ದು, ಕೂಡಲೇ ಅವಶ್ಯಕತೆ ಇರುವ ಕಡೆಗಳಲ್ಲಿ ಬೋರ್ವೆಲಲ್ಗಳನ್ನು ಕೊರೆಸಬೇಕು ಎಂದರು.
ಆರೋಪ: ಸದಸ್ಯ ಲಕ್ಷ್ಮಣ್ ಮಾತನಾಡಿ, ಬೋರ್ವೆಲ್ಗಳನ್ನು ಕೊರೆಸಲು ಶಾಸಕರಿಗೆ ಟಾಸ್ಕ್ಫೋರ್ಸ್ನ ಹಣ ಬಂದರೂ ಸಹ ಅವರು ಆ ಹಣವನ್ನು ಇತರೆ ಕಾರ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಅವರು ಮಾತ್ರ ಬೋರ್ವೆಲ್ಗಳನ್ನು ಕೊರೆಸುತ್ತಿಲ್ಲ. ಇಷ್ಟಾದರೂ ಸಹ ಮತ್ತೆ ಜಿಲ್ಲಾ ಪಂಚಾಯ್ತಿ ಅನುದಾನವನ್ನು ಬೋರ್ವೆಲ್ಗಳನ್ನು ಕೊರೆಸಲು ಪಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ವಿದ್ಯಾರ್ಥಿಗಳಿಗೆ ತೊಂದರೆ: ಸದಸ್ಯ ಪಾಪಣ್ಣಿ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ಬಗ್ಗೆ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಿಕೊಟ್ಟು ಕೂಡಲೇ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸೋಣ ಎಂದ ಅವರು, ಹಾಸ್ಟೆಲ್ಗಳಲ್ಲಿ ಮುಂದಿನ ತಿಂಗಳಿನಿಂದ ರಾಜ್ಯಸರ್ಕಾರ ಹೊಸ ನೀತಿಯನ್ನು ಜಾರಿಗೆ ತರಲು ಮುಂದಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಹೊಟ್ಟೆತುಂಬ ಊಟ ಕೊಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಹೊಸ ನೀತಿಯನ್ನು ತಿರಸ್ಕರಿಸೋಣ ಎಂದರು.
ಇದಕ್ಕೂ ಮುನ್ನ ಸದಸ್ಯ ಲಕ್ಷ್ಮಣ್ ಮಾತಮಾಡಿ, ಹಾಸ್ಟೆಲ್ ಬಾಡಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಅರ್ಜಿಯನ್ನು ಇನ್ನೂ ಅನುಮೋದಿಸಿಲ್ಲ. ಕೇಳಿದರೆ ಸರ್ಕಾರದಿಂದ ಅನುಮೋದನೆಗೊಂಡು ಬರಬೇಕು ಎಂದು ಜವಾಬು ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಇದಕ್ಕೆ ಜಿಲ್ಲಾ ಪಂಚಾಯ್ತಿ ಕಾರ್ಯದರ್ಶಿ ಪುಟ್ಟಸ್ವಾಮಿ ಮಾತನಾಡಿ, ತಮ್ಮ ಅರ್ಜಿಯನ್ನು ಸಹ ಸರ್ಕಾರಕ್ಕೆ ಕಳುಹಿಸಿದ್ದು, ಅದು ಕೆಲವು ದಿನಗಳಲ್ಲಿ ಬರಲಿದೆ ಎಂದು ಮಾಹಿತಿ ನೀಡಿದರು.
ಹರಾಜು ನಿಲ್ಲಿಸಿ: ನಂಜುಂಡಸ್ವಾಮಿ ಮಾತನಾಡಿ, ಉತ್ತಮವಾಗಿರುವ ರೋಡ್ ರೋಲರ್ಗಳನ್ನು ಅಧಿಕಾರಿಗಳು ವಿನಾಕಾರಣ ಹರಾಜು ಮಾಡಲು ಮುಂದಾಗಿದ್ದಾರೆ. ಆದ್ದರಿಂದ ಕೂಡಲೇ ಈ ಹರಾಜು ಪ್ರಕ್ರಿಯೆನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಸೂಚನೆ: ರೋಡ್ ರೋಲರ್ ಹರಾಜು ಮಾಡುವ ಪ್ರಕ್ರಿಯೆಯನ್ನು ಸದ್ಯಕ್ಕೆ ನಿಲ್ಲಿಸಬೇಕು ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಪೇಂದ್ರ ಪ್ರತಾಪ್ ಸಿಂಗ್ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಬಿಳಿ ಚೌಡಯ್ಯ, ಸದಸ್ಯರು ಹಾಗೂ ನಾನಾ ಇಲಾಖೆಯ ಅಧಿಕಾರಿಗಳು ಇದ್ದರು.
ಈ ಭಾರಿ ಈ ಯೋಜನೆಯಲ್ಲಿ 1.43 ಕೋಟಿ ರು.ಗಳ ಅನುದಾನ ಬಂದಿದ್ದು, ಸಭೆಯ ನಂತರ ಅದನ್ನು ಯಾರಿಗೆ ಎಷ್ಟೇಷ್ಟು ಹಣ ನೀಡಬೇಕು ಎಂಬುದನ್ನು ಚರ್ಚಿಸೋಣ ಹಾಗೂ ಎಲ್ಲರೂ ಒಟ್ಟಿಗೆ ಕುಳಿತು ತೀರ್ಮಾನಿಸೋಣ
ಟಿ ಅಂಬಿಕಾ ರಾಮಣ್ಣ, ಅಧ್ಯಕ್ಷೆ