ಕೊಬ್ಬರಿ ವರ್ತಕರ ಪ್ರತಿಭಟನೆ
ಅರಸೀಕೆರೆ: ರಾಜ್ಯ ಸರ್ಕಾರ ಕೃಷಿ ಉತ್ಪನ್ನ ಮಾರಾಟ ನೀತಿ 2013 (ಆರ್.ಟಿ.ಜಿ.ಎಸ್.) ಕಾಯ್ದೆಯನ್ನು ಫೆ. 22ರಂದು ಜಾರಿಗೊಳಿಸಲು ಮುಂದಾಗಿರುವುದನ್ನು ವಿರೋಧಿಸಿ ಕೃಷಿ ಉತ್ಪನ್ನ ಮಾರುಕಟ್ಟೆಯ ಕೊಬ್ಬರಿ ವರ್ತಕರು ಮಂಗಳವಾರ ಮಧ್ಯಾಹ್ನ ಟೆಂಡರ್ ಪ್ರಕ್ರಿಯೆಯನ್ನು ದಿಢೀರ್ ರದ್ದುಗೊಳಿಸಿ ಪ್ರತಿಭಟಿಸಿದರು.
ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಜಿ.ವಿ.ಟಿ. ಬಸವರಾಜ್, ರಾಜ್ಯ ಸರ್ಕಾರ ಜಾರಿ ಮಾಡಲು ಉದ್ದೇಶಿಸಿರುವ ಕಾಯ್ದೆ ಮಾರಕವಾಗಿದೆ. ವರ್ತಕರು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಹಣ ಸಂದಾಯ ಮಾಡುವ ಕೆಲಸ ಮಾಡಬೇಕಿದೆ. ಇದರಿಂದಾಗಿ ದಲ್ಲಾಲರು ವ್ಯಾಪಾರ ಮಾಡಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣಗೊಳ್ಳಲಿದೆ. ಸರ್ಕಾರ ಪ್ರಕ್ರಿಯೆಯನ್ನು ಕೂಡಲೇ ಕೈಬಿಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಗೊಲ್ಲರಹಳ್ಳಿ ಬಸವರಾಜು, ಎಸ್.ಬಿ.ಟಿ. ಬಾಬು, ಆನಂದ್, ಅಶೋಕ್ ಸೇರಿದಂತೆ ಇತರ ವರ್ತಕರು ದನಿಗೂಡಿಸಿದರು. ರಾಜ್ಯದ ಕೆಲವೆಡೆ ಅವಧಿಗೂ ಮುನ್ನವೇ ಪ್ರಕ್ರಿಯೆ ಆರಂಭಿಸಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಸ್ಯೆಯ ಗಂಭೀರತೆಯನ್ನು ಅರಿತ ಎಪಿಎಂಸಿ ಅಧ್ಯಕ್ಷ ಅಜ್ಜಪ್ಪ ಸಭೆ ನಡೆಸಿ, ವರ್ತಕರು ಹಾಗೂ ರೈತರ ಮನವೊಲಿಸುವಲ್ಲಿ ಯಶಸ್ವಿಯಾದರು. ನಂತರ ಪ್ರತಿ ಕ್ವಿಂಟಾಲ್ ಕೊಬ್ಬರಿಯನ್ನು ಟೆಂಡರ್ ಪ್ರಕ್ರಿಯೆ ನಡೆಸದೆ 7950 ರು.ಗಳಿಗೆ ಕೊಳ್ಳುವುದಾಗಿ ವರ್ತಕರು ಘೋಷಿಸಿದ ನಂತರ ಪರಿಸ್ಥಿತಿ ತಿಳಿಯಾಯಿತು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಮಂಜುನಾಥ್ ಅಧಿಕಾರಿಗಳಾದ ನಾಗೇಶ್, ಉಪಾಧ್ಯಕ್ಷ ಸನಾವುಲ್ಲ ಇನ್ನಿತರರು ಇದ್ದರು.
ಕಡಿವಾಣ ಹಾಕಿ: ಪ್ರಸನ್ನ ಕುಮಾರ್
ಮಾಹಿತಿ ನೀಡದೆ ವರ್ತಕರು ಟೆಂಡರ್ ರದ್ದುಗೊಳಿಸಿರುವುದು ಸರಿಯಲ್ಲ. ಸರ್ಕಾರದ ನಿರ್ಧಾರ ಹಾಗೂ ವರ್ತಕರ ನಡೆಯಿಂದ ಕೊಬ್ಬರಿ ಮಾರಾಟ ಮಾಡಲು ತಂದಿದ್ದ ರೈತರು ಆತಂಕ ಎದುರಿಸುವಂತಾಗಿದೆ. ಅಧಿಕಾರಿಗಳು ಕೂಡಲೇ ಇಂತಹ ನಿರ್ಧಾರಗಳಿಗೆ ಕಡಿವಾಣ ಹಾಕಬೇಕೆಂದು ರೈತ ಸಂಘದ ಜಿಲ್ಲಾ ಸಂಚಾಲಕ ಕನಕಂಚೇನಹಳ್ಳಿ ಪ್ರಸನ್ನಕುಮಾರ್ ಆಗ್ರಹಿಸಿದ್ದಾರೆ.